ಡಾ ರಾಜ್‌ಕುಮಾರ್ ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ಎಲ್ಲರೂ ತಮ್ಮ ಬಾಲ್ಯದಲ್ಲಿ ನಟಿಸಿದ್ದಾರೆ. ನಟ ವಿನಯ್ ರಾಜ್‌ಕುಮಾರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ 'ನಾನು ಚಿಕ್ಕವನಿದ್ದಾಗ ಒಟ್ಟೂ 5 ಸಿನಿಮಾಗಳಲ್ಲಿ ನಟಿಸಿದ್ದೇನೆ' ಎಂದು ಹೇಳಿದ್ದಾರೆ.

ಡಾ ರಾಜ್‌ಕುಮಾರ್ (Dr Rajkumar) ಹಾಗೂ ಶಿವರಾಜ್‌ಕುಮಾರ್ (Shivarajkumar) ಯಾರು ಎಂಬುದನ್ನು ಕನ್ನಡಿಗರಿಗಂತೂ ಹೊಸದಾಗಿ ಹೇಳಬೇಕೆಂದೇನೂ ಇಲ್ಲ, ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸವಿನೆನಪು ಎಲ್ಲಾ ಕನ್ನಡಿಗರ ಮನದಲ್ಲಿದೆ. ಅವರ ಹಿರಿಯ ಮಗ ಶಿವರಾಜ್‌ಕುಮಾರ್ ಅವರು ಈಗಲೂ ತಮ್ಮ ಸಿನಿಮಾಗಳ ಮೂಲಕ ನಮ್ಮೆಲ್ಲರನ್ನೂ ರಂಜಿಸುತ್ತಿದ್ದಾರೆ. ಇಲ್ಲಿ ವಿಷಯ ಏನೆಂದರೆ, ಈ ತಂದೆ-ಮಗನ ಜೋಡಿ ಒಟ್ಟಿಗೇ ನಟಿಸಿರುವ ಸಿನಿಮಾಗಳು ಯಾವವು? ಇಲ್ಲಿದೆ ನೋಡಿ ಮಾಹಿತಿ..

ಮೊದಲನೆಯದಾಗಿ 'ಧೂಮಕೇತು' ಎಂಬ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಒಟ್ಟಾಗಿ ನಟಿಸಿದ್ದಾರೆ. ಇನ್ನು, ಶ್ರೀನಿವಾಸ ಕಲ್ಯಾಣ ಹಾಗು ಶಿವಮೆಚ್ಚಿದ ಕಣ್ಣಪ್ಪ ಸಿನಿಮಾದಲ್ಲಿ ಕೂಡ ಅವರಿಬ್ಬರೂ ಒಟ್ಟಿಗೇ ನಟಿಸಿದ್ದಾರೆ. ಇನ್ನು 'ಗಂಧದ ಗುಡಿ ಭಾಗ-2' ಸಿನಿಮಾದಲ್ಲಿ ಕೂಡ ಅವರಿಬ್ಬರೂ ನಟಿಸಿದ್ದಾರೆ.

ಅಷ್ಟೇ ಅಲ್ಲ, ಶಿವರಾಜ್‌ಕುಮಾರ್ ಸಿನಿಮಾ ಮುಹೂರ್ತಕ್ಕೆ ಶುಭ ಕೋರಲು ಬಂದು ಕ್ಯಾಮೆರಾದಲ್ಲಿ ಇಬ್ಬರೂ ಒಟ್ಟಿಗೇ ಕಾಣಿಸಿಕೊಂಡು ಅದನ್ನು ತೆರೆಯ ಮೇಲೆ ಕೂಡ ತೋರಿಸಿರುವ ಸಿನಿಮಾಗಳು ಇವೆ. ಅವು ಯಾವವೆಂದರೆ, ಗಡಿಬಿಡಿ ಅಳಿಯ, ಸೂಪರ್ ಹಿಟ್ 'ಜೋಗಿ' ಸಿನಿಮಾಗಳಲ್ಲಿ ಅಣ್ಣಾವ್ರು ಹಾಗೂ ಅವರ ಮಗ ಶಿವಣ್ಣ ಈ ಇಬ್ಬರೂ ಒಟ್ಟಾಗಿ ನಟಿಸಿದ್ದಾರೆ. ಹೀಗೆ, ಒಟ್ಟೂ 6 ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೇ ನಟಿಸಿದ್ದಾರೆ.

ಡಾ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದ ಮೇರುನಟ, ಪದ್ಮಭೂಷಣ ಪ್ರಶಸ್ತಿಯನ್ನು ಸಹ ಪಡೆದವರು. ಅವರು ಸ್ಯಾಂಡಲ್‌ವುಡ್‌ನಲ್ಲಿ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ದಾಖಲೆ ಸಹ ಹೊಂದಿದ್ದಾರೆ. 200ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಡಾ ರಾಜ್‌ಕುಮಾರ್ ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟರಲ್ಲಿ ಒಬ್ಬರು. ಅಂತಹ ಮೇರುನಟನನ್ನು ಜಗತ್ತೇ ಗುರುತಿಸಿದೆ, ನೆನಪಿನಲ್ಲಿ ಇಟ್ಟುಕೊಂಡಿದೆ.

ಒಟ್ಟಿನಲ್ಲಿ ಹೇಳಬೇಕು ಎಂದರೆ, ಡಾ ರಾಜ್‌ಕುಮಾರ್ ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ಎಲ್ಲರೂ ತಮ್ಮ ಬಾಲ್ಯದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ವಿನಯ್ ರಾಜ್‌ಕುಮಾರ್ ಕೂಡ ನಟಿಸಿದ್ದಾರೆ.

ನಟ ವಿನಯ್ ರಾಜ್‌ಕುಮಾರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ 'ನಾನು ಚಿಕ್ಕವನಿದ್ದಾಗ ಒಟ್ಟೂ 5 ಸಿನಿಮಾಗಳಲ್ಲಿ ನಟಿಸಿದ್ದೇನೆ' ಎಂದು ಹೇಳುತ್ತಾರೆ. ಜೊತೆಗೆ, ಅವರು ಯಾವೆಲ್ಲಾ ಸಿನಿಮಾಗಳಲ್ಲಿ ಚಿಕ್ಕವರಿದ್ದಾಗ ನಟಿಸಿದ್ರು ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಅನುರಾಗದ ಅಲೆಗಳು, ಓಂ, ಒಡಹುಟ್ಟಿದವರು, ಆಕಸ್ಮಿಕ ಹಾಗು ಹೃದಯಾ ಹೃದಯಾ ಚಿತ್ರಗಳಲ್ಲಿ ನಟಿಸಿದ್ದನ್ನು ಹೇಳಿಕೊಂಡಿದ್ದಾರೆ. ಡಾ ರಾಜ್‌ಕುಮಾರ್, ಅಂದರೆ ಅವರ ತಾತನ ಜೊತೆ ವಿನಯ್ ರಾಜ್‌ಕುಮಾರ್ ಅವರು 'ಆಕಸ್ಮಿಕ' ಚಿತ್ರದಲ್ಲಿ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಎತ್ತಿನ ಬಂಡಿಯ ಮೇಲೆ ಕುಳಿತ ಇಬ್ಬರು ಮಕ್ಕಳಲ್ಲಿ ವಿನಯ್ ಕೂಡ ಒಬ್ಬರು ಎಂಬುದು ಗಮನಾರ್ಹ. ಅಲ್ಲಿಗೆ, ಡಾ ರಾಜ್‌ಕುಮಾರ್ ಕುಟುಂಬದ ಕುಡಿ ವಿನಯ್ ಅವರು ಚಿಕ್ಕವರಿದ್ದಾಗಲೇ 5 ಸಿನಿಮಾಗಳಲ್ಲಿ ನಟಿಸಿರುವ ಬಾಲಕಲಾವಿದ ಎಂಬುದು ಜಗಜ್ಜಾಹೀರಾಗಿದೆ.