ನಟ ದರ್ಶನ್ ತೂಗುದೀಪ ಅವರು ಜೈಲಿನಲ್ಲಿ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆಗಾಗಿ 59ನೇ ಸೆಷನ್ಸ್ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಲಾಯಿತು. ಚಳಿಗಾಲದಲ್ಲಿ ನೋವು ಹೆಚ್ಚಾಗಿದ್ದು, ತಕ್ಷಣವೇ ಫಿಸಿಯೋಥೆರಪಿ ನೀಡುವಂತೆ ಅವರ ವಕೀಲರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು (ನ.05): ನಟ ದರ್ಶನ್ ತೂಗುದೀಪ ಅವರು ಜೈಲಿನಲ್ಲಿ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದು, ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಫಿಸಿಯೋಥೆರಪಿ ನೀಡಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ 59ನೇ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ನ್ಯಾಯಾಲಯದಲ್ಲಿ ಸುದೀರ್ಘ ವಾದ ಮಂಡಿಸಿದ್ದಾರೆ.
ಎಲ್4, ಎಲ್5 ಸಮಸ್ಯೆ – ಚಳಿಗಾಲದಲ್ಲಿ ಹೆಚ್ಚಾದ ನೋವು
ವಿಚಾರಣೆ ವೇಳೆ ವಾದ ಮಂಡಿಸಿದ ವಕೀಲ ಹಷ್ಮತ್ ಪಾಷಾ, ದರ್ಶನ್ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯ ತೀವ್ರತೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು.
- ಬೆನ್ನುಹುರಿಯ ತೊಂದರೆ: ದರ್ಶನ್ ಅವರ ಸ್ಪೈನಲ್ ಕಾರ್ಡ್ನಲ್ಲಿ (Spinal Cord) L4 ಮತ್ತು L5 ಭಾಗದಲ್ಲಿ ತೀವ್ರ ತೊಂದರೆ ಇದೆ. ಇದೇ ಕಾರಣಕ್ಕಾಗಿ ಅವರು ಹಿಂದೆ ಸ್ಟೀರಾಯ್ಡ್ ಚಿಕಿತ್ಸೆ ಪಡೆಯುತ್ತಿದ್ದರು ಹಾಗೂ ಹೈಕೋರ್ಟ್ನಲ್ಲಿ ಜಾಮೀನು ಸಹ ಪಡೆದುಕೊಂಡಿದ್ದರು.
- ಚಿಕಿತ್ಸೆ ಸ್ಥಗಿತ: "ದರ್ಶನ್ ಬಹಳ ದಿನಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಆರಂಭದಲ್ಲಿ ಜೈಲು ಅಧಿಕಾರಿಗಳು ಫಿಸಿಯೋಥೆರಪಿ ನೀಡಿದ್ದರು. ಆದರೆ, ನಂತರ ಅದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಚಳಿಗಾಲ ಆರಂಭವಾಗಿರುವುದರಿಂದ ನೋವು ಮತ್ತಷ್ಟು ಹೆಚ್ಚಾಗಿದ್ದು, ಪ್ರತಿದಿನ ನರಳುತ್ತಿದ್ದಾರೆ."
- ಒಂದು ವಾರದಿಂದ ವಿಳಂಬ: "ದರ್ಶನ್ ಆರೋಗ್ಯ ಸಮಸ್ಯೆಯ ಬಗ್ಗೆ ಕೋರ್ಟ್ ಗಮನಕ್ಕೆ ತಂದು ಈಗಾಗಲೇ ಒಂದು ವಾರ ಕಳೆದಿದೆ. ಆದರೂ ಈವರೆಗೆ ಜೈಲು ಆಡಳಿತ ಯಾವುದೇ ಚಿಕಿತ್ಸೆ ನೀಡಿಲ್ಲ. ಮನುಷ್ಯನ ಆರೋಗ್ಯ ಅತ್ಯಂತ ಪ್ರಮುಖವಾಗಿದ್ದು, ತಕ್ಷಣವೇ ಫಿಸಿಯೋಥೆರಪಿ ಹಾಗೂ ಅಗತ್ಯ ಡಯಾಗ್ನಸಿಸ್ (Routined Diagnosis) ಪರೀಕ್ಷೆಗಳಿಗೆ ಆದೇಶಿಸಬೇಕು" ಎಂದು ಮನವಿ ಮಾಡಿದರು.
ಪ್ರಾಸಿಕ್ಯೂಷನ್ ಆಕ್ಷೇಪಣೆ – ಕೋರ್ಟ್ನಲ್ಲಿ ವಕೀಲರ ನಡುವೆ ವಾಕ್ಸಮರ
ಇದೇ ವೇಳೆ, ದರ್ಶನ್ ಪರ ಸಲ್ಲಿಕೆಯಾಗಿರುವ ಅರ್ಜಿಗೆ ಪ್ರಾಸಿಕ್ಯೂಷನ್ (ಸರ್ಕಾರಿ ಪರ ವಕೀಲರು) ಆಕ್ಷೇಪಣೆ ಸಲ್ಲಿಸಿದ್ದು, ಶನಿವಾರದವರೆಗೆ ಕಾಲಾವಕಾಶ ನೀಡುವಂತೆ ಹಾಗೂ ಅಂದು ವಾದ ಮಂಡಿಸಲು ಅವಕಾಶ ಕೊಡುವಂತೆ ಮನವಿ ಮಾಡಿತು. ಪ್ರಾಸಿಕ್ಯೂಷನ್ ಮನವಿಗೆ ಹಿರಿಯ ವಕೀಲ ಹಷ್ಮತ್ ಪಾಷಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 'ಈ ಅರ್ಜಿಯಲ್ಲಿ ಆಕ್ಷೇಪಿಸುವಂತಹದ್ದು ಏನಿದೆ?' ಎಂದು ಪ್ರಶ್ನಿಸಿದ ಅವರು, ವಿಶೇಷ ಸಾರ್ವಜನಿಕ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ಹಾಜರಾಗದಿರುವುದನ್ನು ಗಮನಕ್ಕೆ ತಂದರು.
ಅರ್ಜಿ ಸಲ್ಲಿಕೆಯಾಗಿ ಈಗಾಗಲೇ ಸಾಕಷ್ಟು ಸಮಯ ಕಳೆದಿರುವುದರಿಂದ ಇನ್ನಷ್ಟು ತಡ ಮಾಡದೆ, ತಕ್ಷಣವೇ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು ಎಂದು ಹಷ್ಮತ್ ಪಾಷಾ ನ್ಯಾಯಾಲಯವನ್ನು ಒತ್ತಾಯಿಸಿದರು.






