ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಜನರ ಜಾಮೀನು ರದ್ದಾಗಿ ಮತ್ತೆ ಜೈಲಿಗೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳ ಬಂಧನ.
ಬೆಂಗಳೂರು:(ಆ.15): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರನಟ ದರ್ಶನ್ ತೂಗುದೀಪ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಸುಪ್ರೀಂ ಕೋರ್ಟ್‌ನಿಂದ ಜಾಮೀನು ರದ್ದಾದ ಬೆನ್ನಲ್ಲೇ, ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ನಿವಾಸದಿಂದ ಆಗಸ್ಟ್ 14, 2025 ರಂದು ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್ ಜೊತೆಗೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳ ಜಾಮೀನು ರದ್ದಾಗಿದ್ದು, ಎಲ್ಲರನ್ನೂ ಮತ್ತೆ ಜೈಲಿಗೆ ಕಳುಹಿಸಲಾಗಿದೆ.
ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್ & ಗ್ಯಾಂಗ್
ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ವಜಾಗೊಂಡ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತು ಆತನ ಸಹಚರರಾದ ನಾಗರಾಜ್, ಲಕ್ಷ್ಮಣ್, ಮತ್ತು ಪ್ರದೋಶ್ ಇದೀಗ ಪರಪ್ಪನ ಅಗ್ರಹಾರ ಜೈಲಿನ ಅಡ್ಮಿಷನ್ ಕ್ವಾರಂಟೈನ್ ಬ್ಯಾರಕ್‌ನಲ್ಲಿ ಇದ್ದಾರೆ. ಇಂದು ಬೆಳಗ್ಗೆ 10 ಗಂಟೆಯ ನಂತರ ಈ ನಾಲ್ವರು ಆರೋಪಿಗಳಿಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗುವುದು. ಅಲ್ಲದೆ, ಇವರನ್ನು ಬೇರೆ ಬ್ಯಾರಕ್‌ಗೆ ವರ್ಗಾಯಿಸಬೇಕೆ ಅಥವಾ ಒಂದೇ ಬ್ಯಾರಕ್‌ನಲ್ಲಿ ಇಡಬೇಕೆ ಎಂಬುದನ್ನು ಜೈಲಿನ ಹಿರಿಯ ಅಧಿಕಾರಿಗಳು ನಿರ್ಧರಿಸಲಿದ್ದಾರೆ.
ದರ್ಶನ್‌ಗೆ ಮತ್ತೆ ಕಾಡಿದ ಬೆನ್ನು ನೋವು:
ರಾತ್ರಿಯ ಊಟದಲ್ಲಿ ದರ್ಶನ್ ಮತ್ತು ಗ್ಯಾಂಗ್‌ಗೆ ಮುದ್ದೆ, ಚಪಾತಿ, ಅನ್ನ, ಮತ್ತು ಸಾಂಬಾರ್ ನೀಡಲಾಗಿತ್ತು. ಊಟದ ನಂತರ ದರ್ಶನ್, ಲಕ್ಷ್ಮಣ್ ಮತ್ತು ನಾಗರಾಜ್ ಜೊತೆಗೆ ತಡರಾತ್ರಿಯವರೆಗೆ ಮಾತುಕತೆಯಲ್ಲಿ ತೊಡಗಿದ್ದರು. 'ಹೀಗಾಯ್ತಲ್ಲ..' ಎಂದು ದರ್ಶನ್ ತನ್ನ ಸಹಚರರೊಂದಿಗೆ ಚರ್ಚಿಸಿದ್ದಾರೆ. ಆದರೆ, ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್‌ಗೆ ಜೈಲಿನಲ್ಲಿ ನಿದ್ರೆಯೇ ಬಂದಿಲ್ಲ ಎಂದು ಸಹಚರರ ಬಳಿ ಅಳಲು ತೋಡಿಕೊಂಡಿದ್ದಾರೆ.
ಪ್ರದೋಶ್‌ನ ಮೌನ:
ಒಂದೇ ಬ್ಯಾರಕ್‌ನಲ್ಲಿದ್ದರೂ, ಪ್ರದೋಶ್ ಯಾರೊಂದಿಗೂ ಮಾತನಾಡದೆ ಫುಲ್ ಸೈಲೆಂಟ್ ಆಗಿದ್ದಾರೆ. ತಡರಾತ್ರಿಯವರೆಗೆ ಕಣ್ಣೀರಿಡುತ್ತಿದ್ದ ಪ್ರದೋಶ್, ತೀವ್ರ ಮಾನಸಿಕ ಒತ್ತಡದಲ್ಲಿರುವಂತೆ ಕಂಡುಬಂದಿದ್ದಾರೆ. ಇನ್ನು ಪವಿತ್ರಗೌಡರ ಸ್ಥಿತಿಯೂ ಹಾಗೆ ಇದೆ. ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಬ್ಯಾರಕ್‌ನಲ್ಲಿ ಇರುವ ಪವಿತ್ರಗೌಡ ಕೂಡ ಜೈಲಿಗೆ ಕಾಲಿಟ್ಟಾಗಿನಿಂದ ಕಣ್ಣೀರಿಡುತ್ತಿದ್ದಾರೆ. ಯಾರೊಂದಿಗೂ ಮಾತನಾಡದೆ ಮೌನಕ್ಕೆ ಶರಣಾಗಿರುವ ಇವರು, ರಾತ್ರಿಯ ಊಟವನ್ನೂ ಸೇವಿಸದೆ ಬೆಳಗಿನ ಜಾವದವರೆಗೆ ಚಡಪಡಿಸಿದ್ದಾರೆ. ಬೆಳಗಿನ ಜಾವದಲ್ಲಿ ಮಾತ್ರ ಪವಿತ್ರಗೌಡ ನಿದ್ರೆಗೆ ಜಾರಿದ್ದಾರೆ.
ಮುಂದಿನ ನಡೆ ಏನು?
ಇಂದು ಬೆಳಗ್ಗೆ 10 ಗಂಟೆಯ ನಂತರ ಜೈಲು ಅಧಿಕಾರಿಗಳು ಈ ಆರೋಪಿಗಳನ್ನು ಬೇರೆ ಬ್ಯಾರಕ್‌ಗೆ ವರ್ಗಾಯಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಮತ್ತು ಜೈಲಿನ ಒಳಗಿನ ಬೆಳವಣಿಗೆಗಳ ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ.
ಮುಂದಿನ ವಿವರಗಳಿಗಾಗಿ ಏಷಿಯಾನೆಟ್ ನ್ಯೂಸ್‌ನೊಂದಿಗೆ ಟ್ಯೂನ್ ಆಗಿರಿ.
