ವಾಸ್ತವವಾದಿ ನಾಯಕಿ ವೈದೇಹಿ, ಪರಮ ದೈವಭಕ್ತ ನಾಯಕ ಶ್ರೀರಾಮ್‌. ಶ್ರೀರಾಮ್‌ನ ಕಂಪೆನಿಯಲ್ಲಿ ಕೋಟಿಗಟ್ಟಲೆ ಲಾಭಕ್ಕಾಗಿ ತಯಾರಾಗುವ ಫುಡ್‌ ಪ್ರಾಡಕ್ಟ್ಗಳನ್ನೇ ತನ್ನ ಅಂಗಡಿಯಲ್ಲಿ ಮಾರುತ್ತಾ ಜೀವನ ಸಾಗಿಸುತ್ತಾಳೆ ವೈದೇಹಿ. ಉತ್ತರ ಧ್ರುವ-ದಕ್ಷಿಣ ಧ್ರುವಗಳಂತಿರುವ ಈ ಎರಡು ಜೀವಗಳನ್ನು ವಿಧಿ ಹೇಗೆ ಬೆಸೆಯುತ್ತದೆ? ವೈದೇಹಿ ಯಾವರೀತಿ ಶ್ರೀರಾಮ್‌ನ ಇಷ್ಟದೇವತೆ ಆಗುತ್ತಾಳೆ? ವೈದೇಹಿಯ ನೃತ್ಯದ ಕನಸು ಏನಾಗುತ್ತದೆ?

ಇದೇ ಮೇ 27ರಿಂದ ಕಲರ್ಸ್‌ ಕನ್ನಡದಲ್ಲಿ ರಾತ್ರಿ 9.30ಕ್ಕೆ ಪ್ರಸಾರವಾಗಲಿರುವ ‘ಇಷ್ಟದೇವತೆ’ ಧಾರಾವಾಹಿಯ ಸಂಕ್ಷಿಪ್ತ ಕತೆ ಇದು.

ತಮಿಳು ‘ಸರಿಗಮಪಗೆ’ ಕನ್ನಡದ ಗಾಯಕಿ ಆಯ್ಕೆ

ಈ ಧಾರಾವಾಹಿ ಹಲವು ಕಾರಣಗಳಿಂದ ವಿಶಿಷ್ಟವಾಗಿರಲಿದೆ. ಒಂದು ದೊಡ್ಡ ಗ್ಯಾಪ್‌ ನಂತರ ರಾಜೇಶ್‌ ಕೃಷ್ಣನ್‌ ಧಾರಾವಾಹಿಯೊಂದಕ್ಕೆ ಶೀರ್ಷಿಕೆ ಗೀತೆ ಹಾಡಿದ್ದಾರೆ. ಹಿರಿಯ ನಟಿ ಭವ್ಯಾ ನಾಯಕಿಯ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣವಾಗಿದೆ. ಪುಟ್ಟಗೌರಿ ಖ್ಯಾತಿಯ ನಟಿರಂಜನಿ ರಾಘವನ್‌ ಮೊಟ್ಟಮೊದಲ ಬಾರಿಗೆ ಕತೆ, ಚಿತ್ರಕತೆ ಬರೆಯುವ ಮೂಲಕ ತಮ್ಮ ಪ್ರತಿಭೆಯ ಇನ್ನೊಂದು ಮಗ್ಗುಲನ್ನು ಜನರಿಗೆ ಪರಿಚಯಗೊಳಿಸಲಿದ್ದಾರೆ. ಜೊತೆಗೆ ‘ಇಷ್ಟದೇವತೆ’ಯ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೈಮ್‌ ಲೈಟ್‌ ಪ್ರೊಡಕ್ಷನ್ಸ್‌ ಮತ್ತು ಕತೆ ಸ್ಟುಡಿಯೋ ಸಹಯೋಗದಲ್ಲಿ ಮೂಡಿಬರುತ್ತಿರುವ ಈ ಸುಂದರ ಧಾರಾವಾಹಿಯನ್ನು ನಿದೇಶಿಸುತ್ತಿರುವವರು ಹಿರಿಯ ನಿರ್ದೇಶಕ ಪೃಥ್ವಿರಾಜ್‌ ಮ. ಕುಲಕರ್ಣಿ. ‘ಇರುವುದೆಲ್ಲವ ಬಿಟ್ಟು’ ಸಿನಿಮಾದಲ್ಲಿ ನಾಯಕನಾದ ಮೇಲೆ ಎರಡು ವರ್ಷಗಳ ನಂತರ ಶ್ರೀ ಮಹಾದೇವ್‌ ಮತ್ತೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ರಾಶಿ ಇಷ್ಟದೇವತೆಯ ನಾಯಕಿ.

ಆಶಿಕಾ ರಂಗನಾಥ್ ಫೋನ್‌ನಲ್ಲಿರುವುದೆಲ್ಲಾ ಲೀಕ್?

ನವಿರು ಪ್ರೇಮಕತೆಯ ‘ಇಷ್ಟದೇವತೆ’ ಯುವ ಮನಸುಗಳಿಗೆ ಇಷ್ಟವಾಗುವ ಕತೆ. ದೈವ ಭಕ್ತ ನಾಯಕ, ವಾಸ್ತವವಾದಿ ನಾಯಕಿ. ಜೊತೆಯಲ್ಲಿದ್ದುಕೊಂಡೇ ಇಬ್ಬರೂ ನಡೆಸುವ ಪರಸ್ಪರರ ಹುಡುಕಾಟ, ಅನೂಹ್ಯ ತಿರುವುಗಳು ಮತ್ತು ರೋಚಕ ಸನ್ನಿವೇಶಗಳು ‘ಇಷ್ಟದೇವತೆ’ಯನ್ನು ಎಲ್ಲರಿಗೂ ಇಷ್ಟವಾಗಿಸುವ ಅಂಶಗಳು.

ಮೇ 27ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ ‘ಇಷ್ಟದೇವತೆ’.