ಬಹುಕಾಲದ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿರುವ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿಗಳಾಗಿದ್ದಾರೆ. ತೆಲುಗು ಮತ್ತು ಕೊಡವ ಎಂಬ ಎರಡು ಸಂಪ್ರದಾಯಗಳೆರಡರಲ್ಲೂ ವಿವಾಹವಾಗಿದ್ದು, ತಮ್ಮ ಮದುವೆಯ ಫೋಟೋಗಳು ಮತ್ತು ಹೃದಯಸ್ಪರ್ಶಿ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು (ಫೆ.26): ಬಹುಕಾಲದ ಕುತೂಹಲಕ್ಕೆ ತೆರೆ ಬಿದ್ದಿದೆ. ದಕ್ಷಿಣ ಭಾರತದ ಮೋಸ್ಟ್ ಅಡ್ಮೈರ್ಡ್ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ದಂಪತಿಗಳಾಗಿದ್ದಾರೆ. ಇವರ ವಿವಾಹದ ಫೋಟೋಗಳು ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿವೆ. ಈ ಜೋಡಿಯ ಮದುವೆ ಎರಡು ವಿಭಿನ್ನ ಸಂಪ್ರದಾಯಗಳ ಸಮ್ಮಿಲನವಾಗಿತ್ತು. ಫೆಬ್ರವರಿ 26 ರಂದು ಬೆಳಿಗ್ಗೆ 10:10ಕ್ಕೆ ವಿಜಯ್ ಅವರ ಸಂಪ್ರದಾಯದಂತೆ ಸಾಂಪ್ರದಾಯಿಕ ತೆಲುಗು ಶೈಲಿಯಲ್ಲಿ ವಿವಾಹ ನೆರವೇರಿತು. ನಂತರ ಸಂಜೆ ರಶ್ಮಿಕಾ ಅವರ ಮೂಲದ ಕೊಡವ (ಕೊಡಗು) ಸಂಪ್ರದಾಯದಂತೆ ಮತ್ತೊಂದು ವಿವಾಹ ಸಮಾರಂಭ ಜರುಗಿತು.

ಮಂಟಪದಲ್ಲಿ ಭಾವುಕರಾದ ರಶ್ಮಿಕಾ!

ವಿಜಯ್ ದೇವರಕೊಂಡ ಅವರು ಹಂಚಿಕೊಂಡಿರುವ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ಅವರು ಮದುವೆಯ ಧಾರೆ ಎರೆಯುವ ಕ್ಷಣದಲ್ಲಿ ಭಾವುಕರಾಗಿ ಕಣ್ಣೀರಿಟ್ಟಿರುವುದು ಕಂಡುಬಂದಿದೆ. ಆನಂದಬಾಷ್ಪ ಸುರಿಸುತ್ತಿರುವ ರಶ್ಮಿಕಾ ಅವರ ಈ ಫೋಟೋಗಳು ಈಗ ವೈರಲ್ ಆಗಿದ್ದು, ಇಬ್ಬರ ನಡುವಿನ ಗಾಢವಾದ ಪ್ರೀತಿಗೆ ಕನ್ನಡಿ ಹಿಡಿದಿವೆ.

ವಿಜಯ್ ದೇವರಕೊಂಡ ಬರೆದ ಹೃದಯಸ್ಪರ್ಶಿ ಸಾಲುಗಳು

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ "ಒಂದು ದಿನ ನಾನು ಆಕೆಯನ್ನು ತುಂಬಾ ಮಿಸ್ ಮಾಡಿಕೊಂಡೆ. ಆಕೆ ನನ್ನ ಜೊತೆಗಿದ್ದರೆ ನನ್ನ ದಿನ ಇನ್ನೂ ಚೆನ್ನಾಗಿರುತ್ತಿತ್ತು, ಅವಳು ಎದುರಿಗೆ ಕುಳಿತಿದ್ದರೆ ನಾನು ಮಾಡುವ ಊಟಕ್ಕೆ ಒಂದು ಅರ್ಥ ಸಿಗುತ್ತಿತ್ತು ಎಂದು ಅನ್ನಿಸಿತು. ನನ್ನ ಜೀವನಕ್ಕೆ ನೆಮ್ಮದಿ ಮತ್ತು ಮನೆ ಎಂಬ ಭಾವ ನೀಡಲು ಅವಳು ಬೇಕೇ ಬೇಕು ಎಂದು ನನಗೆ ಅರಿವಾಯಿತು. ಹಾಗಾಗಿ, ನನ್ನ ಬೆಸ್ಟ್ ಫ್ರೆಂಡ್ ಅನ್ನು ನನ್ನ ಹೆಂಡತಿ ಮಾಡಿಕೊಂಡೆ. 26.02.2026." ಎಂದು ಬರೆದಿದ್ದಾರೆ.

 

View post on Instagram
 

 

ನನ್ನ ಪತಿ ಎಂದು ಪರಿಚಯಿಸಿದ ರಶ್ಮಿಕಾ

ರಶ್ಮಿಕಾ ಕೂಡ ಸುದೀರ್ಘವಾದ ನೋಟ್ ಬರೆದಿದ್ದು, "ಹಲೋ ನನ್ನ ಪ್ರೀತಿಯ ಅಭಿಮಾನಿಗಳೇ, ನನ್ನ ಪತಿ ವಿಜಯ್ ದೇವರಕೊಂಡ ಅವರನ್ನು ನಿಮಗೆ ಪರಿಚಯಿಸುತ್ತಿದ್ದೇನೆ! ನಿಜವಾದ ಪ್ರೀತಿ ಅಂದರೆ ಏನು ಮತ್ತು ಶಾಂತಿ ಅಂದರೆ ಏನು ಎಂಬುದನ್ನು ನನಗೆ ಕಲಿಸಿದ ವ್ಯಕ್ತಿ ಇವರು. ದೊಡ್ಡ ಕನಸು ಕಾಣುವುದು ತಪ್ಪಲ್ಲ ಎಂದು ನನಗೆ ಪ್ರತಿದಿನ ಹೇಳುತ್ತಾ, ನನ್ನ ಸಾಮರ್ಥ್ಯವನ್ನು ನನಗೆ ನೆನಪಿಸಿದವರು. ಇವರ ಬಗ್ಗೆ ನಾನು ಒಂದು ಪುಸ್ತಕವನ್ನೇ ಬರೆಯಬಲ್ಲೆ!" ಎಂದು ಬರೆದಿದ್ದಾರೆ.

 

View post on Instagram
 

 

ಅತಿಥಿಗಳ ಪಟ್ಟಿ ಮತ್ತು ಆತಿಥ್ಯ

ರಾಜಸ್ಥಾನದ ಉದಯಪುರದಿಂದ 50 ಕಿ.ಮೀ ದೂರದಲ್ಲಿರುವ ಐಷಾರಾಮಿ ಐಟಿಸಿ ಮೊಮೆಂಟೋಸ್ (ITC Mementoes) ಹೋಟೆಲ್‌ನಲ್ಲಿ ಈ ವಿವಾಹ ನಡೆದಿದೆ. ಸಮಾರಂಭಕ್ಕೆ ಬಂದಿದ್ದ ಮಾಧ್ಯಮದವರಿಗೆ (ಪಾಪರಾಜಿಗಳು) ದಂಪತಿಗಳು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದ್ದಾರೆ.