ಸಿನಿಮಾದಲ್ಲಿ ಕಾಸ್ಟಿಂಗ್​ ಕೌಚ್​ ಎನ್ನುವುದು ಮಾಮೂಲಾಗಿರುವ ದಿನಗಳಲ್ಲಿ ನಟಿಯರಿಗೆ ಆ ಭಾಗಕ್ಕೆ ಪ್ಲಾಸ್ಟಿಕ್​ ಸರ್ಜರಿ ಎಷ್ಟು ಅನಿವಾರ್ಯ ಎನ್ನುವ ಬಗ್ಗೆ ಶಾಕಿಂಗ್​ ಹೇಳಿಕೆ ತೆರೆದಿಟ್ಟಿದ್ದಾರೆ ನಟಿ ಸಮೀರಾ ರೆಡ್ಡಿ.

ಕಾಸ್ಟಿಂಗ್​ ​ ಕೌಚ್​ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್​ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್​ ​ ಕೌಚ್​ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಇದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಹಲವು ನಟಿಯರು ಈ ಬಗ್ಗೆ ಭಯಾನಕ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಬೇಕು, ಟಾಪ್​ ಸ್ಥಾನ ಪಡೆಯಬೇಕು, ಇಂಡಸ್ಟ್ರಿಯಲ್ಲಿ ಬೇರೂರಬೇಕು ಎಂದರೆ ಕೆಲವು ನಟರು, ನಿರ್ದೇಶಕರು, ನಿರ್ಮಾಪಕರು... ಹೀಗೆ ಎಲ್ಲರ ಜೊತೆ ಮಲಗುವುದು ಅನಿವಾರ್ಯ ಎನ್ನುವ ಅರ್ಥದಲ್ಲಿಯೇ ಬಹುತೇಕ ಎಲ್ಲಾ ನಟಿಯರೂ ಹೇಳಿಕೊಂಡಿದ್ದಾರೆ.

ಇದೀಗ ಅದೇ ರೀತಿಯ ಘಟನೆಯನ್ನು ತೆರೆದಿಟ್ಟಿದ್ದಾರೆ ಬಹುಭಾಷಾ ತಾರೆ ಸಮೀರಾ ರೆಡ್ಡಿ. ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿರುವ 42 ವರ್ಷದ ಸಮೀರಾ ರೆಡ್ಡಿ ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ `ವರದನಾಯಕ' ಚಿತ್ರ ಸೇರಿದಂತೆ ಕೆಲ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಈಕೆ ಸಕ್ರಿಯವಾಗಿರುವ ನಟಿ. ಪ್ರಥಮ ಬಾರಿಗೆ ಪಂಕಜ್ ಉದಾಸ್ ಅವರ ಮ್ಯೂಸಿಕ್ ಅಲ್ಬಮ್​ನಲ್ಲಿ ಕಾಣಿಸಿಕೊಂಡ ಇವರು 2002 ರಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಿದರು. 2002ರ ಮೈನೆ ದಿಲ್ ತುಝ್‌ಕೋ ದಿಯಾ ದ ಮೂಲಕ ಸಮೀರಾ ರೆಡ್ಡಿ ಅವರು ಬಾಲಿವುಡ್​ಗೆ ಪದಾರ್ಪಣೆ ಮಾಡಿ ಅಲ್ಲಿಂದ ಡರ್‌ನಾ ಮನಾ ಹೈ (2003), ಅನಿಲ್​ ಕಪೂರ್ ಜೊತೆಗಿನ ಮುಸಾಫಿರ್ (2004), ಜೈ ಚಿರಂಜೀವಾ (2005), ಟ್ಯಾಕ್ಸಿ ಸಂಖ್ಯೆ 9211 (2006), ಅಶೋಕ್ (2006), ರೇಸ್ (2008), ವಾರಣಮ್ ಆಯಿರಮ್ (2008) , ಡಿ ದಾನಾ ಡಾನ್ (2009), ಆಕ್ರೋಶ್ (2010), ವೆಟ್ಟೈ (2012) ಮತ್ತು ತೇಜ಼್ (2012) ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ನಾನು 19 ರ ವಯಸ್ಸಿನವರೆಗೆ ಕನ್ನಡಕ ಧರಿಸಿದ ಧಡೂತಿ ಹುಡುಗಿಯಾಗಿದ್ದೆ. ಕುಟುಂಬದಲ್ಲಿ ಕುರೂಪಿ ಮಗು ನಾನು ಎಂದು ತಮ್ಮನ್ನು ತಾವು ಹೇಳಿಕೊಂಡಿದ್ದ ಸಮೀರಾ ಅವರು ಕೊನೆಗೆ ಸಾಕಷ್ಟು ಶ್ರಮಪಟ್ಟು, ವರ್ಕ್​ಔಟ್​ (workout) ಮಾಡಿ ಚಿತ್ರರಂಗಕ್ಕೆ ಸೈ ಎನಿಸುವಷ್ಟರ ಮಟ್ಟಿಗೆ ಬೆಳೆದು ನಿಂತರು. ಇದೀಗ ಅವರು ಹೇಳಿರುವ ಬಾಲಿವುಡ್​ನ ಇನ್ನೊಂದು ಕರಾಳ ಮುಖದ ಕುರಿತು ಭಾರಿ ಚರ್ಚೆಯಾಗುತ್ತಿದೆ. ಅವರು ಹೇಳಿದ್ದು ದೇಹ ಸೌಂದರ್ಯದ ಕುರಿತು! ನಟಿಯರು ಎಂದರೆ ಹೀಗೆಯೇ ಇರಬೇಕು ಎನ್ನುವ ಸಾಮಾನ್ಯ ಕಲ್ಪನೆ ಇದೆ. ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಅವರ ದೇಹದ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ ಎಂಬ ತಮ್ಮ ಅನುಭವವನ್ನು ನಟಿ ಸಮೀರಾ ಈಗ ತೆರೆದಿಟ್ಟಿದ್ದಾರೆ.

“ಸುಮಾರು 10 ವರ್ಷಗಳ ಹಿಂದೆ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ಅನಿವಾರ್ಯತೆ ಇತ್ತು. ಮೂಗು, ಬಾಯಿ, ಮೂಳೆ... ಹೀಗೆ ಸಿನಿಮಾ ರಂಗಕ್ಕೆ ಅಗತ್ಯವಿರುವ ಪ್ಲಾಸ್ಟಿಕ್​ ಸರ್ಜರಿಯ ಮೊರೆ ಹೋಗಬೇಕಾಗಿತ್ತು. ಬಾಲಿವುಡ್​ನಲ್ಲಿ ನೆಲೆಯೂರಬೇಕು ಎಂದರೆ ಇದಕ್ಕೆ ಅಡ್ಜಸ್ಟ್​ ಆಗಲೇಬೇಕು. ಇವೆಲ್ಲವನ್ನೂ ಒಂದು ಹಂತಕ್ಕೆ ಒಪ್ಪಿಕೊಳ್ಳಬಹುದೇನೋ. ಆದರೆ ಸ್ತನದ ಗಾತ್ರ ದೊಡ್ಡದಾಗಿ ಕಾಣಿಸುವಂತೆ ಮಾಡಲು ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವ ಅನಿವಾರ್ಯತೆಯೂ ಇಲ್ಲಿದೆ ಎಂಬ ಕರಾಳತೆಯನ್ನು ನಟಿ ಹೇಳಿದ್ದಾರೆ. 'ನನ್ನ ಎದೆಯ ಮೇಲೂ ನಿರ್ದೇಶಕರ ಕಣ್ಣು ನೆಟ್ಟಿತ್ತು. ಅದು ಸುಂದರವಾಗಿ ಕಾಣಿಸಬೇಕು ಎಂದರೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಅದಕ್ಕೆ ನಾನು ರೆಡಿ ಇರಲಿಲ್ಲ. ಇದೇ ಕಾರಣಕ್ಕೆ ಆ ಭಾಗ ದೊಡ್ಡದಾಗಿ ಕಾಣಲು ಸದಾ ನಾನು ಎದೆಯನ್ನು ಪ್ಯಾಡ್ ಮಾಡಬೇಕಾಗಿತ್ತು, ಇದೊಂದು ರೀತಿಯಲ್ಲಿ ಮುಜುಗರ ಆಗುತ್ತಿದ್ದರೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಆ ಭಾಗವನ್ನು ದೊಡ್ಡದಾಗಿ ಕಾಣುವಂತೆ ಮಾಡುವ ಬದಲು ಇದೇ ಬೆಸ್ಟ್​ ಎನಿಸಿತ್ತು ಎಂದಿದ್ದಾರೆ ನಟಿ.