ನೀನಾ ಗುಪ್ತಾ ಹೇಳಿದ ಒಂಬತ್ತು ಕತೆಗಳು
15ನೇ ಆವೃತ್ತಿಯ ಜೈಪುರ ಸಾಹಿತ್ಯೋತ್ಸವದಲ್ಲಿ ವಿವಿಧ ಗೋಷ್ಠಿಗಳು, ಅವಗಳ ಆಧಾರದ ಮೇಲೆ ನಡೆಯುವ ಚರ್ಚೆಗಳು ಸ್ವಾರಸ್ಯಮವಯಾಗಿದೆ. ಬಾಲಿವುಡ್ ತಾರೆ ನೀನಾ ಗುಪ್ತಾ ತಮ್ಮ ಜೀವನದಲ್ಲಿ ನೋವುಂಡವರು. ಅವರು ಹೇಳಿದ ಈ ಒಂಬತ್ತು ಕಥೆಗಳನ್ನು ಓದಲೇ ಬೇಕು.
1.ನಾನು ಶ್ರೀನಗರಕ್ಕೆ ಹೋಗುತ್ತೇನೆ ಅಂತ ಹೇಳಿದೆ. ಯಾರೊಟ್ಟಿಗೆ ಅಂತ ಅಮ್ಮ ಕೇಳಿದಳು. ಒಬ್ಬ ಒಳ್ಳೆಯ ಹುಡುಗನ ಜೊತೆ ಅಂದೆ. ಅಮ್ಮ ಗಾಬರಿಬಿದ್ದಳು. ಹಾಗೆಲ್ಲ ಹೋಗಬಾರದು. ಮದುವೆ ಆದ ಮೇಲೆ ಮಾತ್ರ ಹೋಗಬಹುದು ಅಂದಳು. ಹಾಗಿದ್ದರೆ ಮದುವೆ ಮಾಡ್ಕೋಬಹುದಲ್ಲ ಅನ್ನಿಸಿತು. ಮದುವೆಯಾದೆ.
2.ನನಗೆ ಸೆಲ್ಫ್ ಎಸ್ಟೀಮ್- ನನ್ನ ಬಗ್ಗೆ ಘನತೆ ಇರಲಿಲ್ಲ. ಹೀಗಾಗಿ ನಾನು ಜೀವನದಲ್ಲಿ ಸೋತೆ. ಈಗ ಅದರಿಂದ ಹೊರಬಂದಿದ್ದೇನೆ. ಆದರೆ ಪೂರ್ತಿಯಾಗಿ ಬಂದಿದ್ದೇನೆ ಅಂತ ಹೇಳಕ್ಕಾಗಲ್ಲ. ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಇನ್ನೂ ಆ ಸಂಕೋಚ, ಅನುಮಾನ ಇದ್ದೇ ಇದೆ.
3.ತುಂಬ ವಿನಯದಿಂದ ಇರಬೇಕು ಅಂತಾರೆ. ನಾನು ಹಾಗೆಯೇ ಇದ್ದವಳು. ಆದರೆ ಅದು ತಪ್ಪು ಅಂತ ಈಗೀಗ ಗೊತ್ತಾಗಿದೆ. ನಾನೇ ಬೆಸ್ಟು ಅಂತ ಜೋರಾಗಿ ನಾವೇ ಹೇಳಿಕೊಳ್ಳಬೇಕು. ಅಂಥವರಿಗೇ ಈಗ ಕಾಲ,
4.ವೃತ್ತಿಯಲ್ಲಿ ಮೇಲೇರಲು ಕಾಂಪ್ರಮೈಸ್ ಮಾಡಿಕೊಳ್ಳುವವರ ಬಗ್ಗೆ ನನಗೆ ತಕರಾರು ಇಲ್ಲ. ಹೇಗಾದರೂ ಮೇಲೇರುತ್ತೇನೆ ಅಂತ ಒಮ್ಮೆ ನಿರ್ಧಾರ ಮಾಡಿದರೆ ಮುಗೀತು. ಹೇಗಾದರೂ ಏರಬಹುದು. ಆದರೆ ಎಷ್ಟು ಕಾಂಪ್ರಮೈಸ್ ಮಾಡಿಕೊಳ್ಳಬೇಕು ಎಂದು ನಾವೇ ನಿರ್ಧಾರ ಮಾಡಿಕೊಳ್ಳಬೇಕು. ಹೊಸ ಕಾಲದ ಹುಡುಗಿಯರಿಗೆ ನಾನು ಹೇಳುವುದು ಇಷ್ಟೇ. ಹುಷಾರಾಗಿರಿ, ನಿಮ್ಮ ಎಚ್ಚರದಲ್ಲಿ ನೀವಿರಿ.
ಕೊರೋನಾದಿಂದ ಮನೋರಂಜನಾ ಉದ್ಯಮಕ್ಕೆ ಲಾಭ: ಮನೋಜ್ ಭಾಜಪೈ5.ನನ್ನನ್ನು ಒಬ್ಬ ನಿರ್ಮಾಪಕ ಹೋಟೆಲಿಗೆ ಕರೆದಿದ್ದ. ಅವನ ರೂಮಿಗೆ ಹೋಗಿದ್ದೆ. ರಾತ್ರಿ ಅಲ್ಲೇ ಉಳಿಯಲು ಹೇಳಿದ. ಆಗೋಲ್ಲ ಅಂತ ಹೇಳಿ ಹೊರಗೆ ಬಂದೆ. ದೇವರೇ ನನ್ನನ್ನು ಕಾಪಾಡಿದ ಅನ್ನಿಸುತ್ತೆ. ಆದರೆ ನಾನೇ ಎಚ್ಚರ ವಹಿಸಬಹುದಾಗಿತ್ತು. ರೂಮಿಗೆ ಬರೋಲ್ಲ, ನೀನೇ ಕೆಳಗೆ ಬಾ, ಲಾಬಿಯಲ್ಲಿ ಕೂತು ಮಾತಾಡೋಣ ಅನ್ನಬಹುದಿತ್ತು. ಆದರೆ ಅದಕ್ಕೂ ಭಯ. ನಾನು ರೂಮಿಗೆ ಹೋಗಲಿಲ್ಲ ಅಂತ ನನಗೆ ಪಾತ್ರ ಕೊಡದೇ ಹೋದರೆ ಅನ್ನುವ ಅಂಜಿಕೆ. ಜೀವನ ಎಂತೆಂಥಾ ಸವಾಲುಗಳನ್ನೆಲ್ಲ ಒಡ್ಡುತ್ತದೆ.
6.ಮಕ್ಕಳಿಗೆ ತಂದೆ ತಾಯಿ ಇಬ್ಬರೂ ಇದ್ದರೆ ಒಳ್ಳೆಯದು. ಎರಡೂ ಕಡೆಯ ನಂಟರೆಲ್ಲ ಸಿಗುತ್ತಾರೆ. ನನ್ನ ಮಗಳನ್ನೇನೋ ನಾನು ಒಂಟಿಯಾಗಿಯೇ ಬೆಳೆಸಿದೆ. ಅದು ಸರಿಯಲ್ಲ. ತಂದೆಯೂ ಜತೆಗಿದ್ದರೆ ಅವಳು ಇನ್ನಷ್ಟು ಸಂತೋಷವಾಗಿರುತ್ತಿದ್ದಳೋ ಏನೋ ಅಂತ ಆಗಾಗ ಅನ್ನಿಸುತ್ತದೆ.
ಪುಟ್ಟ ಬಾಲೆಯ ದೊಡ್ಡ ಮಾತು: ಜೈಪುರ ಸಾಹಿತ್ಯ ಉತ್ಸವ ಎರಡನೆಯ ದಿನದ ಸ್ವಾರಸ್ಯಗಳು7.ಉತ್ಸವ್ ಚಿತ್ರದಲ್ಲಿ ಗಿರೀಶ್ ಕಾರ್ನಾಡ್, ಶಂಕರ್ ನಾಗ್ ಜತೆಗೆ ನಟಿಸಿದ್ದು ಸಂತೋಷ ಕೊಟ್ಟಿದೆ. ರೇಖಾಗೆ ಪ್ರಮುಖ ಪಾತ್ರ ಸಿಕ್ಕಿತು. ನನಗೆ ಸಿಗಲಿಲ್ಲ ಅಂತ ಆಗೇನೂ ನನಗೆ ದುಃಖ ಆಗಲಿಲ್ಲ. ಆದರೆ ನನ್ನ ಜೀವಮಾನದ ಉದ್ದಕ್ಕೂ ನಾನು ಅವಗಣನೆಗೆ ಒಳಗಾಗುತ್ತಲೇ ಬಂದಿದ್ದೇನೆ. ನನಗೆ ನಾಯಕಿಯಾಗಲು ಆಗಲೇ ಇಲ್ಲ.
8.ಮಗಳ ಮುಖದ ತುಂಬ ಮೊಡವೆ. ಅವಳಿಗೆ ಅದೇನೂ ದೊಡ್ಡ ಸಮಸ್ಯೆ ಅಲ್ಲ. ನೀನು ಸುಂದರವಾಗಿದ್ದೀ ಅಂತ ನಾನು ದಿನವೂ ಹೇಳಬೇಕು. ನೀವು ಹೇಗಿದ್ದರೂ ಚೆನ್ನಾಗಿರುತ್ತೀರಿ. ನಾನು ಚೆನ್ನಾಗಿಲ್ಲ ಅಂತ ಯಾವತ್ತೂ ಅಂದುಕೊಳ್ಳಬೇಡಿ.
9.ಚಿಕ್ಕಂದಿನಲ್ಲಿ ಗುಲ್ಜಾರ್ ಮತ್ತು ನಾನು ಬೆಳಗ್ಗೆ ಟೆನಿಸ್ ಆಡಲು ಚಡ್ಡಿ ಹಾಕಿಕೊಂಡು ಹೋಗುತ್ತಿದ್ದೆವು.ಮೊನ್ನೆ ನನ್ನ ಪುಸ್ತಕ ಕೊಡಲು ಅವರ ಮನೆಗೆ ಚಡ್ಡಿ ಹಾಕಿಕೊಂಡು ಹೋಗಿದ್ದೆ. ಗುಲ್ಜಾರ್ ಮನೆಗೆ ಚಡ್ಡಿ ಹಾಕಿಕೊಂಡು ಹೋಗೋದಾ ಅಂತ ಹಲವರು ಹುಬ್ಬೇರಿಸಿದ್ದರು. ನಾನು ಚಿಕ್ಕಂದಿನಲ್ಲೇ ಹೋಗಿದ್ದೆ, ಏನಿವಾಗ ಅಂದೆ.