ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ಅಚ್ಚರಿಯ ಸತ್ಯ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಮುಂಬೈಗೆ ಬಂದ ಉದ್ದೇಶ ತಿಳಿದು ಒಂದು ಕ್ಷಣ ಪೊಲೀಸರೇ ಶಾಕ್ ಆಗಿದ್ದಾರೆ. ಕೊನೆ ಕ್ಷಣದಲ್ಲಿ ಟೈಗರ್ ಶ್ರಾಫ್ ಕಡೆ ಗನ್ ತಿರುಗಿಸಿದ್ದೇಕೆ ಎಂಬುದರ ಮಾಹಿತಿ ಬಯಲಾಗಿದೆ.
ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಫೈರಿಂಗ್ ಕೇಸ್ನಲ್ಲಿ ಹೊಸ ರಿಪೋರ್ಟ್ ಹೊರಬಿದ್ದಿದೆ. ಅಸಲಿಗೆ ಶೂಟರ್ಗಳು ಮುಂಬೈಗೆ ಬಂದಿದ್ದು ಟೈಗರ್ ಶ್ರಾಫ್ಗಾಗಿ ಅಲ್ಲವೇ ಅಲ್ಲ. ಪೊಲೀಸರ ವಿಚಾರಣೆ ವೇಳೆ ಈ ಅಚ್ಚರಿಯ ಸತ್ಯವನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಭಾನುವಾರ ಸಂಜೆ ಮುಂಬೈನ ಜುಹುವಿನಲ್ಲಿ ಫುಟ್ಬಾಲ್ ಆಡಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದ ಫೂಲ್ ಸಿಂಗ್ (18), ರಹಾನ್ (18) ಮತ್ತು ಬಿಹಾರದ ಹೃತಿಕ್ ಅಲಿಯಾಸ್ ರೋಷನ್ (22) ಎಂಬ ಮೂವರನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.
ಬಂಧಿತರು ಬಿಚ್ಚಿಟ್ಟ ಸ್ಪೋಟಕ ರಹಸ್ಯ
ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕಥೆ ಹೊರಬಿದ್ದಿದೆ. ಮೂವರು ಆರೋಪಿಗಳು ಮುಂಬೈಗೆ ಬಂದಿದ್ದು ಬೇರೊಬ್ಬ ವಿಐಪಿಯನ್ನು ಮುಗಿಸಲು. ಆ ವಿಐಪಿ ಓಡಾಡುವ ಜಾಗಗಳಲ್ಲೆಲ್ಲಾ ಆರೋಪಿಗಳು ಹೊಂಚು ಹಾಕಿ ಕುಳಿತಿದ್ದರು. ಆದರೆ, ಆತನ ಮೇಲೆ ಅಟ್ಯಾಕ್ ಮಾಡುವುದು ಅಷ್ಟು ಸುಲಭವಲ್ಲ ಎಂಬುದು ಇವರಿಗೆ ಅರ್ಥವಾಗಿತ್ತು. ಇದೇ ಗ್ಯಾಪ್ನಲ್ಲಿ ಟೈಗರ್ ಶ್ರಾಫ್ ಫ್ಯಾನ್ಸ್ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದ ರೀಲ್ಸ್ ಇವರ ಕಣ್ಣಿಗೆ ಬಿದ್ದಿದೆ. ನಟನಿಗೆ ಯಾವುದೇ ಪೊಲೀಸ್ ಭದ್ರತೆ ಇಲ್ಲ ಎಂಬುದು ರೀಲ್ಸ್ ಮೂಲಕ ಗೊತ್ತಾದ ತಕ್ಷಣ, ತಮ್ಮ ಟಾರ್ಗೆಟ್ ಅನ್ನು ಟೈಗರ್ ಶ್ರಾಫ್ ಕಡೆಗೆ ಶಿಫ್ಟ್ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
ಬಾಲಿವುಡ್ನಲ್ಲಿ ಭಯ ಹುಟ್ಟಿಸುವ ಉದ್ದೇಶ
ಟೈಗರ್ ಶ್ರಾಫ್ನನ್ನು ಮುಗಿಸಿ ಇಡೀ ಬಾಲಿವುಡ್ನಲ್ಲಿ ನಡುಕ ಹುಟ್ಟಿಸುವುದು ಮೂವರ ಪ್ಲಾನ್ ಆಗಿತ್ತು. ನಟ ಕಾರಿನಲ್ಲಿ ಹೋಗುತ್ತಿದ್ದಾಗ ಬರೋಬ್ಬರಿ 7 ಬಾರಿ ಗುಂಡು ಹಾರಿಸಿದ್ದಾರೆ. ಇನ್ನೂ ಹೆಚ್ಚು ಫೈರಿಂಗ್ ಮಾಡಲು ಮುಂದಾಗಿದ್ದರಾದರೂ, ಬಂದೂಕು ಜಾಮ್ ಆಗಿದೆ. ಈ ದಾಳಿಯಲ್ಲಿ ನಟ ಹಾಗೂ ಡ್ರೈವರ್ಗೆ ಗಾಯಗಳಾಗಿವೆ. ಇಬ್ಬರೂ ಬಹಳ ಸಾಹಸಪಟ್ಟು ಶೂಟರ್ಗಳಿಂದ ತಪ್ಪಿಸಿಕೊಂಡು ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ.
ಈ ಫೈರಿಂಗ್ ಕೇಸ್ಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿ ಒಟ್ಟು ನಾಲ್ವರನ್ನು ಪೊಲೀಸರು ಹೊಸದಾಗಿ ಬಂಧಿಸಿದ್ದಾರೆ. ಕುನಾಲ್, ಸುಮತಿ, ರಾಧಾ ಮತ್ತು ಬಬಿತಾ ಎಂಬುವವರನ್ನು ದೆಹಲಿ ಪೊಲೀಸರ ಸ್ಪೆಷಲ್ ಸೆಲ್ ಮಂಗಳವಾರ ಅರೆಸ್ಟ್ ಮಾಡಿದೆ. ಬಳಿಕ ಇವರನ್ನು ಮುಂಬೈ ಪೊಲೀಸರಿಗೆ ಒಪ್ಪಿಸಲಾಗಿದೆ. ಶೂಟರ್ಗಳಿಗೆ ಕುನಾಲ್ ಮತ್ತು ಸುಮಿತ್ ಬಂದೂಕುಗಳನ್ನು ಅರೇಂಜ್ ಮಾಡಿಕೊಟ್ಟಿದ್ದರು. ಬಂಧಿತ ಮಹಿಳೆಯರು ಈ ಬಂದೂಕುಗಳನ್ನು ಮುಂಬೈನ ದಾದರ್ಗೆ ತಂದು ಶೂಟರ್ಗಳ ಕೈಗೆ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್
ಟೈಗರ್ ಶ್ರಾಫ್ ಮೇಲಿನ ಈ ಅಟ್ಯಾಕ್ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಅನಿಲ್ ಪಂಡಿತ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ತಾನು ಬಿಷ್ಣೋಯ್ ಗ್ಯಾಂಗ್ ಸದಸ್ಯನಾಗಿದ್ದು, ನಾವೇ ಈ ಅಟ್ಯಾಕ್ ಮಾಡಿದ್ದು ಎಂದು ಹೇಳಿಕೊಂಡಿದ್ದಾನೆ. ನಟ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿದ್ದಕ್ಕಾಗಿಯೇ ಟೈಗರ್ ಶ್ರಾಫ್ ಮೇಲೆ ದಾಳಿ ಮಾಡಿದ್ದೇವೆ. ಸಲ್ಮಾನ್ ಖಾನ್ ಜೊತೆ ಗುರುತಿಸಿಕೊಳ್ಳುವ ಚಿತ್ರರಂಗದ ಪ್ರತಿಯೊಬ್ಬರನ್ನೂ ಮುಗಿಸುತ್ತೇವೆ ಎಂದು ಆತ ಬೆದರಿಕೆ ಹಾಕಿದ್ದಾನೆ.
ಕೇವಲ 50,000 ರೂಪಾಯಿ ಹಾಗೂ ವಿದೇಶದಲ್ಲಿ ಕೆಲಸ ಕೊಡುವ ಆಫರ್ ನೀಡಿ ಬಿಷ್ಣೋಯ್ ಗ್ಯಾಂಗ್ ಈ ಮೂವರು ಯುವಕರನ್ನು ಕೃತ್ಯಕ್ಕೆ ಬಳಸಿಕೊಂಡಿದೆ ಎಂದು ವರದಿಗಳು ಹೇಳುತ್ತಿವೆ. ಬಿಷ್ಣೋಯ್ ಗ್ಯಾಂಗ್ನಿಂದ ಇವರಿಗೆ ಪಕ್ಕಾ ಪ್ಲಾನ್ ಸಿಕ್ಕಿತ್ತು. ಫೈರಿಂಗ್ ಮಾಡಿದ ತಕ್ಷಣ ಶೂಟರ್ಗಳು ಗ್ಯಾಂಗ್ಗೆ ಮಾಹಿತಿ ನೀಡಿದ್ದರು. ಆ ಬಳಿಕವೇ ಇವರು ಮುಂಬೈನಿಂದ ಎಸ್ಕೇಪ್ ಆಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.


