ಮಾಡೆಲಿಂಗ್‌ಗಾಗಿ ಕೇವಲ 1,500 ರೂ. ಸಂಭಾವನೆ ಪಡೆದಿದ್ದ ಐಶ್ವರ್ಯಾ ರೈ ಬಚ್ಚನ್, ಇಂದು ಬರೋಬ್ಬರಿ 900 ಕೋಟಿ ರೂ. ಒಡೆಯಾಗಿದ್ದಾರೆ. ಅವರ ಮೊದಲ ಸಂಪಾದನೆ, ಸಿನಿಮಾ ಸಂಭಾವನೆ ಹಾಗೂ ಆಸ್ತಿಯ ವಿವರ ಇಲ್ಲಿದೆ.

ಇಂದು ಐಶ್ವರ್ಯಾ ರೈ ಬಚ್ಚನ್ ಭಾರತದ ಅತಿ ಶ್ರೀಮಂತ ನಟಿಯರ ಪಟ್ಟಿಯಲ್ಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ, ಹಿಟ್ ಸಿನಿಮಾಗಳು ಹಾಗೂ ಐಷಾರಾಮಿ ಜೀವನಶೈಲಿಗೆ ಅವರು ಹೆಸರುವಾಸಿ. ಆದರೆ, ಗ್ಲೋಬಲ್ ಸ್ಟಾರ್ ಆಗುವ ಮುನ್ನ ಅವರ ಈ ಯಶಸ್ಸಿನ ಪಯಣ ಶುರುವಾಗಿದ್ದು ಸಣ್ಣ ಮಾಡೆಲಿಂಗ್ ಅಸೈನ್‌ಮೆಂಟ್‌ಗಳಿಂದ. 2022ರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಹಳೆಯ ಮಾಡೆಲಿಂಗ್ ಇನ್‌ವಾಯ್ಸ್ ಒಂದು ಅವರ ಆರಂಭಿಕ ದಿನಗಳ ಬಗ್ಗೆ ಸುಳಿವು ನೀಡಿತ್ತು.

ಮೇ 23, 1992ರ ಆ ದಾಖಲೆಯ ಪ್ರಕಾರ, ಮ್ಯಾಗಜೀನ್ ಕ್ಯಾಟಲಾಗ್ ಫೋಟೋಶೂಟ್‌ಗಾಗಿ 18 ವರ್ಷದ ಐಶ್ವರ್ಯಾ ಕೇವಲ 1,500 ರೂ. ಸಂಭಾವನೆ ಪಡೆದಿದ್ದರು. ಮುಂಬೈ ಮೂಲದ 'ಕೃಪಾ ಕ್ರಿಯೇಷನ್ಸ್' ಕಂಪನಿ ಈ ಅಸೈನ್‌ಮೆಂಟ್ ನೀಡಿತ್ತು. ವಿಶೇಷ ಅಂದರೆ, ಆ ಇನ್‌ವಾಯ್ಸ್‌ನಲ್ಲಿ ಐಶ್ವರ್ಯಾ ಅವರ ಸಹಿ ಕೂಡ ಇತ್ತು. ಅಂದು ಆ ಯುವ ಮಾಡೆಲ್ ಮುಂದೆ ಜಾಗತಿಕ ಮಟ್ಟದಲ್ಲಿ ಭಾರತದ ಅತಿ ದೊಡ್ಡ ಮುಖವಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಜನವರಿ 2026ರಲ್ಲಿ ಅವರ ಆರಂಭಿಕ ಸಂಪಾದನೆಯ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಚಾರ ಹೊರಬಿದ್ದಿತ್ತು. ಸಿದ್ಧಾರ್ಥ್ ಕಣ್ಣನ್ ಜೊತೆಗಿನ ಸಂದರ್ಶನದಲ್ಲಿ ನಿರ್ಮಾಪಕ ಶೈಲೇಂದ್ರ ಸಿಂಗ್ ಈ ಬಗ್ಗೆ ಮಾತನಾಡಿದ್ದರು. ಒಟ್ಟು 5,000 ರೂ. ಸಂಭಾವನೆಗೆ ಐಶ್ವರ್ಯಾ ಮೂರು ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದರು ಎಂದು ಅವರು ಬಾಯ್ಬಿಟ್ಟಿದ್ದರು. ಶೈಲೇಂದ್ರ ಸಿಂಗ್ ಹೇಳುವಂತೆ, ಮುಂಬೈನ ಮುಕೇಶ್ ಮಿಲ್ಸ್‌ನಲ್ಲಿ ನಡೆದ ಶೂಟಿಂಗ್‌ನಲ್ಲಿ ಐಶ್ವರ್ಯಾ ಬ್ಯಾಕ್‌ಗ್ರೌಂಡ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದರು.

ಆಮೇಲೆ ಮಾಳವಿಕಾ ತಿವಾರಿ ಅವರ 'ಘೃತ ಕುಮಾರಿ' ಹೇರ್ ಆಯಿಲ್ ಜಾಹೀರಾತಿನಲ್ಲಿ ನಟಿಸಿದ್ದರು. ಬಳಿಕ ಅರ್ಜುನ್ ರಾಂಪಾಲ್ ಜೊತೆಗೂ ಒಂದು ಕಮರ್ಷಿಯಲ್ ಆಡ್ ಮಾಡಿದ್ದರು. 1992ರ 1,500 ರೂ. ಇನ್‌ವಾಯ್ಸ್‌ಗೂ ಈ ಜಾಹೀರಾತುಗಳಿಗೂ ಯಾವುದೇ ಸಂಬಂಧವಿರಲಿಲ್ಲ. ಅವರ ವೃತ್ತಿಜೀವನ ಎಷ್ಟು ಸರಳವಾಗಿ ಶುರುವಾಗಿತ್ತು ಅನ್ನೋದಕ್ಕೆ ಇದು ಮತ್ತೊಂದು ಉದಾಹರಣೆ.

ಮೊದಲ ಸಿನಿಮಾದಿಂದ ಕೋಟಿ ಕೋಟಿ ಸಂಭಾವನೆಯವರೆಗೆ

1997ರಲ್ಲಿ ಮಣಿರತ್ನಂ ನಿರ್ದೇಶನದ ತಮಿಳು ಸಿನಿಮಾ 'ಇರುವರ್' ಮೂಲಕ ಐಶ್ವರ್ಯಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅದೇ ವರ್ಷ ಬಾಬಿ ಡಿಯೋಲ್ ಜೊತೆ 'ಔರ್ ಪ್ಯಾರ್ ಹೋ ಗಯಾ' ಚಿತ್ರದ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟರು. ಈ ಸಿನಿಮಾಗಳಿಗೆ ಅವರು ಎಷ್ಟು ಸಂಭಾವನೆ ಪಡೆದರು ಎಂಬ ನಿಖರ ಮಾಹಿತಿ ಇಲ್ಲದಿದ್ದರೂ, ಅವರ ಕೆರಿಯರ್ ಮಾತ್ರ ದೊಡ್ಡ ಮಟ್ಟದಲ್ಲಿ ಕ್ಲಿಕ್ ಆಯ್ತು.

1999ರಲ್ಲಿ ಬಂದ ಸಂಜಯ್ ಲೀಲಾ ಬನ್ಸಾಲಿ ಅವರ 'ಹಮ್ ದಿಲ್ ದೇ ಚುಕೇ ಸನಮ್' ಸಿನಿಮಾ ಐಶ್ವರ್ಯಾ ಕೆರಿಯರ್‌ಗೆ ದೊಡ್ಡ ಬ್ರೇಕ್ ನೀಡಿತು. ಈ ಚಿತ್ರ ಅವರನ್ನು ಆ ಕಾಲದ ಟಾಪ್ ನಟಿಯರ ಸಾಲಿನಲ್ಲಿ ನಿಲ್ಲಿಸಿತು ಹಾಗೂ ಚಿತ್ರರಂಗದಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿತು. ಆ ಕಾಲದ ಮಾಧ್ಯಮ ವರದಿಗಳ ಪ್ರಕಾರ, ಪ್ರತಿ ಸಿನಿಮಾಗೆ ಅವರು ಸುಮಾರು 75 ಲಕ್ಷ ರೂ. ಚಾರ್ಜ್ ಮಾಡುತ್ತಿದ್ದರು. ಆದರೆ, ಇದು ಆ ಸಮಯದ ಅಂದಾಜು ಸಂಭಾವನೆಯೇ ಹೊರತು, 'ಹಮ್ ದಿಲ್ ದೇ ಚುಕೇ ಸನಮ್' ಚಿತ್ರಕ್ಕೆ ಪಡೆದ ನಿಖರ ಮೊತ್ತವಲ್ಲ. ವರ್ಷಗಳು ಉರುಳಿದಂತೆ ಐಶ್ವರ್ಯಾ ಅವರ ಮಾರ್ಕೆಟ್ ವ್ಯಾಲ್ಯೂ ಕೂಡ ಗಣನೀಯವಾಗಿ ಏರಿಕೆಯಾಗಿದೆ.

ಸದ್ಯದ ವರದಿಗಳ ಪ್ರಕಾರ, ಅವರು ಒಂದು ಸಿನಿಮಾಗೆ ಬರೋಬ್ಬರಿ 10 ರಿಂದ 12 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ನಟನೆಯ ಜೊತೆಗೆ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು ಕೂಡ ಅವರ ಆದಾಯದ ಪ್ರಮುಖ ಮೂಲವಾಗಿವೆ. ಪ್ರತಿ ಬ್ರ್ಯಾಂಡ್ ಡೀಲ್‌ಗೆ ಅವರು 6 ರಿಂದ 7 ಕೋಟಿ ರೂ. ಪಡೆಯುತ್ತಾರೆ. ಐಷಾರಾಮಿ ಹಾಗೂ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ಪಾಲಿಗೆ ಅವರು ಇಂದಿಗೂ ಹಾಟ್ ಫೇವರಿಟ್. ಲೊರಿಯಲ್ ಪ್ಯಾರಿಸ್, ಲಾಂಜಿನ್ಸ್ ಹಾಗೂ ಕಲ್ಯಾಣ್ ಜ್ಯುವೆಲ್ಲರ್ಸ್‌ನಂತಹ ಬ್ರ್ಯಾಂಡ್‌ಗಳ ಜೊತೆಗಿನ ದೀರ್ಘಕಾಲದ ಒಡನಾಟ, ಭಾರತದ ಟಾಪ್ ಸೆಲೆಬ್ರಿಟಿ ಎಂಡಾರ್ಸರ್ ಆಗಿ ಅವರ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಭಾರತದ 2ನೇ ಅತಿ ಶ್ರೀಮಂತ ನಟಿಯೇ?

ಮಾಡೆಲಿಂಗ್ ದಿನಗಳಿಂದ ಇಲ್ಲಿಯವರೆಗೆ ಐಶ್ವರ್ಯಾ ರೈ ಬಚ್ಚನ್ ಅವರ ಆಸ್ತಿ ಮೌಲ್ಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಲವು ಮಾಧ್ಯಮ ವರದಿಗಳ ಪ್ರಕಾರ, ಅವರ ಒಟ್ಟು ಆಸ್ತಿ ಮೌಲ್ಯ 776 ಕೋಟಿ ರೂ. ನಿಂದ 900 ಕೋಟಿ ರೂ. ವರೆಗೆ ಇದೆ ಎಂದು ಅಂದಾಜಿಸಲಾಗಿದೆ. ಕೆಲವು ವರದಿಗಳು ಅವರ ಆಸ್ತಿಯನ್ನು ಸುಮಾರು 900 ಕೋಟಿ ರೂ. ಎಂದು ಉಲ್ಲೇಖಿಸಿವೆ. ಆದರೆ, ನಟಿ ಮಾತ್ರ ತಮ್ಮ ಒಟ್ಟು ಸಂಪತ್ತಿನ ಬಗ್ಗೆ ಎಲ್ಲೂ ಅಧಿಕೃತವಾಗಿ ಬಾಯ್ಬಿಟ್ಟಿಲ್ಲ.

ಈ ಅಂದಾಜು ಲೆಕ್ಕಾಚಾರಗಳ ಆಧಾರದ ಮೇಲೆ, ಜೂಹಿ ಚಾವ್ಲಾ ಬಳಿಕ ಭಾರತದ ಎರಡನೇ ಅತಿ ಶ್ರೀಮಂತ ನಟಿ ಎಂಬ ಹೆಗ್ಗಳಿಕೆಗೂ ಐಶ್ವರ್ಯಾ ಪಾತ್ರರಾಗಿದ್ದಾರೆ. ಸಿನಿಮಾಗಳು, ಅಂತಾರಾಷ್ಟ್ರೀಯ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು, ಹೂಡಿಕೆಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ಅವರು ಈ ಮಟ್ಟದ ಸಂಪತ್ತು ಗಳಿಸಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಅವರ ಆರಂಭಿಕ ಸಂಪಾದನೆಗೂ ಇಂದಿನ ಆಸ್ತಿ ಮೌಲ್ಯಕ್ಕೂ ಇರುವ ವ್ಯತ್ಯಾಸವೇ ಅವರ ಆರ್ಥಿಕ ಪಯಣವನ್ನು ಮತ್ತಷ್ಟು ಕುತೂಹಲಕಾರಿಯಾಗಿಸಿದೆ. 1992ರಲ್ಲಿ ಮಾಡೆಲಿಂಗ್‌ಗಾಗಿ 1,500 ರೂ. ಪಡೆದಿದ್ದ ಐಶ್ವರ್ಯಾ, ಇಂದು ಒಂದೇ ಸಿನಿಮಾ ಅಥವಾ ಜಾಹೀರಾತಿಗೆ ಕೋಟಿ ಕೋಟಿ ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ. ಮಾಡೆಲಿಂಗ್, ಬಾಲಿವುಡ್ ಹಾಗೂ ಅಂತಾರಾಷ್ಟ್ರೀಯ ಮನರಂಜನಾ ಕ್ಷೇತ್ರದಲ್ಲಿ ಅವರು ಅದ್ಭುತ ಸಾಧನೆ ಮಾಡಿದ್ದಾರೆ.