ಬಾಲಿವುಡ್‌ನ ಖ್ಯಾತ ಗಾಯಕ ಅರಿಜೀತ್ ಸಿಂಗ್ ಅವರು ತಮ್ಮ ಹಿನ್ನೆಲೆ ಗಾಯನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಘೋಷಿಸಿ, ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ಆಘಾತ ನೀಡಿದ್ದಾರೆ. ಈ ಅನಿರೀಕ್ಷಿತ ನಿರ್ಧಾರದ ಹಿಂದಿನ ಸಂಭವನೀಯ ಕಾರಣಗಳನ್ನು ನೋಡೋಣ ಬನ್ನಿ

ಬಾಲಿವುಡ್ ನ ಪ್ರತಿಭಾನ್ವಿತ ಗಾಯಕ ಅರಿಜೀತ್ ಸಿಂಗ್ ಏಕಾಏಕಿ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ್ದಾರೆ. ಇನ್ನೂ 38 ಹರೆಯದ ಸಿಂಗರ್ ನಾನಿನ್ನು ಮುಂದೆ ಸಿನಿಮಾಗಳಿಗೆ ಹಾಡಲ್ಲ ಅಂದಿದ್ದಾರೆ. ಅರಿಜೀತ್‌ರ ಈ ನಿರ್ಧಾರಕ್ಕೆ ಏನು ಕಾರಣ? ಅರಿಜೀತ್ ವಿದಾಯಕ್ಕೆ, ಸಲ್ಲು ಭಯ ಕಾರಣವಾಯ್ತಾ? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಹಾಡು ನಿಲ್ಲಿಸಿದ್ದೇಕೆ ಬಾಲಿವುಡ್ ಗಾನಕೋಗಿಲೆ?

ಯೆಸ್ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ , ಹಾಡುಗಾರಿಕೆಗೆ ಗುಡ್ ಬೈ ಹೇಳಿದ್ದಾರೆ. ಇನ್ನುಮುಂದೆ ತಾನು ಸಿನಿಮಾಗಳಿಗೆ ಹಾಡೋದಿಲ್ಲ ಅಂತ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಇನ್ನೂ 38 ವಯಸ್ಸಿನ ಅರಿಜಿತ್ ನಿವೃತ್ತಿಯ ಮಾತನಾಡಿರೋದು ನೋಡಿ ಸಂಗೀತ ಪ್ರಿಯರಿಗೆ ಶಾಕ್ ಆಗಿದೆ.

ಅರಿಜಿತ್ ಸಿಂಗ್ ಈ ತಲೆಮಾರಿನ ಅತ್ಯಂತ ಯಶಸ್ವಿ ಸಿಂಗರ್. ಅರಿಜಿತ್ ಕಂಠದಲ್ಲಿ ಮೂಡಿಬಂದ ನೂರಾರು ಸೂಪರ್ ಹಿಟ್ ಹಾಡುಗಳಿವೆ. ಭಾರತದಲ್ಲಿ ಪ್ರತಿ ವರ್ಷ ಮ್ಯೂಸಿಕ್ ಆ್ಯಪ್​​ಗಳಲ್ಲಿ ಅತಿ ಹೆಚ್ಚು ಕೇಳಲಾಗುವ ಹಾಡುಗಳು ಸಹ ಅರಿಜಿತ್ ಸಿಂಗ್ ಅವರದ್ದೇ ಆಗಿರುತ್ವೆ. ಇತ್ತೀಚಿಗೆ ರಿಲೀಸ್ ಅರಿಜಿತ್ ಗಾಯನದ ಘರ ಕಬ್ ಆವೋಗೆ ಸಾಂಗ್ ಅಂತೂ ಬಿಗ್ಗೆಸ್ಟ್ ಹಿಟ್ ಆಗಿದೆ.

ʻಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಇಷ್ಟು ವರ್ಷಗಳ ಕಾಲ ಕೇಳುಗರಾಗಿ ನನಗೆ ಅಪಾರ ಪ್ರೀತಿ ನೀಡಿದ್ದೀರಾ, ನಿಮ್ಮೆಲ್ಲರಿಗೂ ಅನಂತನಂತ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಇಂದಿನಿಂದ ಹಿನ್ನಲೆ ಗಾಯಕನಾಗಿ ನಾನು ಯಾವುದೇ ಹೊಸ ನಿಯೋಜನೆಗಳನ್ನು ಅಥವಾ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ನಾನು ಈ ವೃತ್ತಿಜೀವನವನ್ನು ಇಲ್ಲಿಗೆ ಅಂತ್ಯಗೊಳಿಸುತ್ತಿದ್ದೇನೆ. ಇದೊಂದು ಅತ್ಯಂತ ಅದ್ಭುತವಾದ ಪಯಣವಾಗಿತ್ತುʼ - ಅರಿಜಿತ್ ಸಿಂಗ್

ಅರಿಜಿತ್ ಸಿಂಗ್ ಪ್ರಸ್ತುತ ಅತ್ಯಂತ ಬೇಡಿಕೆಯ ಭಾರತೀಯ ಗಾಯಕ. ಆದ್ರೆ ವೃತ್ತಿ ಜೀವನದ ಉತ್ತುಂಗದಲ್ಲಿ ಇರೋವಾಗಲೇ ಅರಿಜಿತ್ ಸಿಂಗ್ ಸಿನಿಲೋಕಕ್ಕೆ ಗುಡ್ ಬೈ ಹೇಳಿದ್ದಾರೆ. ಅರಿಜಿತ್ ವಿದಾಯ ಫ್ಯಾನ್ಸ್‌ಗಳಷ್ಟೇ ಅಲ್ಲ ಚಿತ್ರರಂಗಕ್ಕೂ ಶಾಕ್ ತಂದಿದ್ದು ಶ್ರೇಯಾ ಘೋಷಾಲ್ ಇದೊಂದು ಯುಗಾಂತ್ಯ ಅಂತ ಕರೆದಿದ್ದಾರೆ.

ಸಲ್ಲು ಭಯಕ್ಕೆ ಸಿಂಗರ್ ಅರಿಜಿತ್ ವಿದಾಯ!?

ಹೌದು ಅರಿಜಿತ್ ಸಿಂಗ್ ವಿದಾಯದ ಮಾತು ಕೇಳಿ, ಕೆಲವರು ಸಲ್ಮಾನ್ ಖಾನ್ ಮೇಲಿನ ಭಯಕ್ಕೆ ಅರಿಜಿತ್ ಈ ನಿರ್ಣಯ ತೆಗೆದುಕೊಂಡಿದ್ದಾರೆ ಅಂತ ಮಾತನಾಡ್ತಾ ಇದ್ದಾರೆ. ಹಿಂದೆ 2014ರಲ್ಲಿ ಸಲ್ಮಾನ್ ಖಾನ್ ಮತ್ತು ಅರಿಜಿತ್ ನಡುವೆ ಒಂದು ಕಿಡಿ ಹೊತ್ತುಕೊಂಡಿತ್ತು. ಸ್ಟಾರ್ ಗಿಲ್ಡ್ ಅವಾರ್ಡ್ಸ್ ಸಮಯದಲ್ಲಿ ಅರಿಜಿತ್ ಸಿಂಗ್, Tum Hi Ho ಹಾಡಿಗಾಗಿ ಪ್ರಶಸ್ತಿ ಪಡೆಯೋದಕ್ಕೆ ವೇದಿಕೆ ಏರಿದ್ರು. ಆಗ ಹೋಸ್ಟ್ ಆಗಿದ್ದ ಸಲ್ಮಾನ್ ತಮ್ಮದೇ ಸ್ಟೈಲಿನಲ್ಲಿ ಅರಿಜಿತ್​ನ ತಮಾಷೆ ಮಾಡಿದ್ರು. ನಿನ್ನ ಹಾಡಿನಿಂದ ಎಲ್ಲರನ್ನೂ ನಿದ್ದೆ ಮಾಡಿಸಿದ್ದೀಯ ಅಂತ ಸಲ್ಮಾನ್ ತಮಾಷೆ ಮಾಡಿದ್ರೆ, ಅದಕ್ಕೆ ಪ್ರತಿಯಾಗಿ ಅರಿಜಿತ್​ ನೀವು ಕೂಡ ನಿಮ್ಮ ಕೆಲ ಚಿತ್ರಗಳ ಮೂಲಕ ನಿದ್ದೆ ಮಾಡಿಸಿದ್ದೀರಿ ಅಂತ ಕೌಂಟರ್ ಕೊಟ್ಟುಬಿಟ್ಟಿದ್ರು.

ಅರಿಜಿತ್ ಸಿಂಗ್ ಮಾತು ಸಲ್ಮಾನ್ ಗೆ ಕೋಪ ತರಿಸಿತ್ತು. ಮುಂದೆ ಸಲ್ಲುಮಿಯಾನ ಹಲವು ಚಿತ್ರಗಳ ಹಾಡಿನ ಅವಕಾಶವನ್ನ ಅರಿಜಿತ್​ರಿಂದ ಕಿತ್ತುಕೊಳ್ಳಲಾಯ್ತು. ಅರಿಜಿತ್​ನ ತುಳಿಯೋದಕ್ಕೆ ಸಲ್ಮಾನ್ ಗ್ಯಾಂಗ್​ ಪ್ರಯತ್ನ ಪಡ್ತಾ ಇದೆ ಅಂತ ಅನೇಕರು ಮಾತನಾಡಿದ್ರು. ಈ ಬಗ್ಗೆ ಖುದ್ದು ಸಲ್ಮಾನ್ ಇತ್ತೀಚಿಗೆ ಸ್ಪಷ್ಟನೆ ಕೊಟ್ಟಿದ್ರು. ಅಷ್ಟೆಲ್ಲಾ ಯಾಕೆ ಮೊನ್ನೆ ಗಣರಾಜ್ಯೋತ್ಸವಕ್ಕೆ ರಿಲೀಸ್ ಆದ ಸಲ್ಮಾನ್ ನಟನೆಯ ಬ್ಯಾಟಲ್ ಆಫ್ ಗಲ್ವಾನ್ ಸಿನಿಮಾದ ಹಾಡನ್ನ ಇದೇ ಅರಿಜಿತ್ ಸಿಂಗ್ ಹಾಡಿದ್ದಾರೆ.

ಸಲ್ಮಾನ್ ಜೊತೆಗಿನ ವಿವಾದ ಬಗೆಹರಿದ ಮೇಲೆ ಇನ್ನೆಲ್ಲಾ ಸರಿಹೋಯ್ತು ಅಂತ ಅರಿಜಿತ್ ಫ್ಯಾನ್ಸ್ ಭಾವಿಸಿದ್ರು. ಆದ್ರೆ ಈ ಸಮಯದಲ್ಲೇ ಅರಿಜಿತ್ ಚಿತ್ರಸಂಗೀತಕ್ಕೆ ವಿದಾಯ ಘೋಷಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಅರಿಜಿತ್ ಕನ್ನಡದಲ್ಲೂ ಒಂದು ಹಾಡಿದ್ರು. ಪುನೀತ್ ರಾಜ್‌ಕುಮಾರ್ ನಟನೆಯ ನಿನ್ನಿಂದಲೆ ಚಿತ್ರದ ಮೌನ ತಾಳಿತೆ ಹಾಡಿಗೆ ಅರಿಜಿತ್ ಧ್ವನಿಯಾಗಿದ್ರು.

ಇಂಥಾ ಜೇನು ದನಿಯ ಗಾಯಕ ಈಗ ಹಾಡುಗಾರಿಕೆಯಿಂದ ದೂರ ಆಗಿರೋದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅರಿಜಿತ್​ರ ಈ ಅಚ್ಚರಿಯ ತೀರ್ಮಾನಕ್ಕೆ ಏನು ಕಾರಣ ಅನ್ನೋದನ್ನ ಖುದ್ದು ಕೋಗಿಲೆಯೇ ಬಾಯಿ ಬಿಟ್ಟು ಹೇಳಬೇಕು.

- ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.