ಮನೆಯವರ ಒಪ್ಪಿಗೆ ಇಲ್ಲದೇ ನಡೆಯಿತು ಅಮೃತಧಾರೆ ಜೈದೇವ್ ಮತ್ತು ಭಾಗ್ಯಲಕ್ಷ್ಮಿ ಪೂಜಾ ಮದುವೆ. ಇತ್ತ ಜೈದೇವನ ಕೈಸೇರಿತು ಮನೆಯ ಆಸ್ತಿ. ಏನಿದು ಟ್ವಿಸ್ಟ್​? 

ಜೀ ಕನ್ನಡದ ಅಮೃತಧಾರೆ ಮತ್ತು ಕಲರ್ಸ್​ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಈಗ ಮದುವೆ ಆತಂಕ! ಮದುವೆ ಸಂಭ್ರಮದ ಬದಲು ಎರಡೂ ಸೀರಿಯಲ್​ಗಳಲ್ಲಿ ಆತಂಕದ ಛಾಯೆ. ಆದರೂ ನಡೆದೇ ಬಿಟ್ಟಿದೆ ಮದುವೆ. ಅಮೃತಧಾರೆಯಲ್ಲಿ ಜೈದೇವನ ಮದುವೆ ಮೊದಲ ಪತ್ನಿ ಇರುವಾಗಲೇ ಅವಳ ಇಚ್ಛೆಗೆ ವಿರುದ್ಧವಾಗಿ ದಿಯಾಳ ಜೊತೆ ನಡೆದಿದ್ದರೆ, ಇತ್ತ ಪೂಜಾಳ ಮದುವೆ ಮನೆಯವರ ವಿರೋಧದ ನಡುವೆ ಕಿಶನ್​ ಜೊತೆ ನಡೆದಿದೆ. ಎರಡೂ ಸೀರಿಯಲ್​ಗಳ ಕಥೆ ವಿಭಿನ್ನವಾಗಿದ್ದರೂ ಈ ಮದುವೆಯ ವಿಷಯ ಮಾತ್ರ ಸರಿಸುಮಾರು ಒಂದೇ ರೀತಿಯದ್ದಾಗಿದೆ. ಇಲ್ಲಿ ಕುತಂತ್ರಿ ಜೈದೇವ ಲವರ್​ ಜೊತೆ ಮದುವೆಯಾಗಿದ್ದರೆ, ಅಲ್ಲಿ ಪೂಜಾ-ಕಿಶನ್​ ಇಬ್ಬರೂ ಒಳ್ಳೆಯವರಾಗಿದ್ದರೂ ಪರಿಸ್ಥಿತಿಯ ಕೈಗೊಂಬೆಗಳಾಗಿದ್ದಾರೆ ಅಷ್ಟೇ.

ಮೊದಲಿಗೆ ಅಮೃತಧಾರೆಯ ವಿಷಯಕ್ಕೆ ಬರುವುದಾದರೆ, ಜೈದೇವನ ಕುತಂತ್ರ ಎಲ್ಲವೂ ಗೌತಮ್ ಎದುರು ಬಯಲಾಗಿದೆ. ಇದೇ ವೇಳೆ ಜೈದೇವ ಎಲ್ಲರನ್ನೂ ದಿಯಾಳ ಜೊತೆ ಮದುವೆಯಾಗುತ್ತಿರುವುದಾಗಿ ಹೇಳಿ ಕರೆದಿದ್ದಾನೆ. ಸ್ಥಳಕ್ಕೆ ಗೌತಮ್​- ಭೂಮಿಕಾ ಎಲ್ಲರೂ ಮನೆಗೆ ಬಂದಿದ್ದಾರೆ. ಮದುವೆಯನ್ನು ನಿಲ್ಲಿಸಲು ಬಂದು ರಂಪಾಟ ಮಾಡುತ್ತಾನೆ ಎಂದು ಜೈದೇವ ಅಂದುಕೊಂಡಿದ್ದ. ಹೀಗೆ ರಂಪಾಟ ಮಾಡುವ ಮಧ್ಯೆಯೇ ತಾನು ತಾಳಿ ಕಟ್ಟಿ ಮೆರೆಯುವ, ಎಲ್ಲರ ಹೊಟ್ಟೆಯನ್ನೂ ಉರಿಸುವ ಎಂದುಕೊಂಡಿದ್ದ. ಆದರೆ ಗೌತಮ್​ ತಾಳಿ ಕಟ್ಟಲು ಹೇಳಿ ಎಲ್ಲರನ್ನೂ ಕಕ್ಕಾಬಿಕ್ಕಿ ಮಾಡಿದ್ದಾನೆ. ಅಣ್ಣನೇ ಹೇಳಿದ ಮೇಲೆ ತಾಳಿ ಕಟ್ಟಿದ್ದಾನೆ. ಕೊನೆಗೆ ಆಸ್ತಿಗಾಗಿ ಎಲ್ಲಾ ಮಾಡಿರುವುದಾಗಿ ಜೈದೇವ ಹೇಳಿದ ಹಿನ್ನೆಲೆಯಲ್ಲಿ, ಆತನಿಗೆ ಬ್ಲ್ಯಾಂಕ್​ ಪೇಪರ್​ ಕೊಟ್ಟು ಆಸ್ತಿಯನ್ನು ರೆಡಿ ಮಾಡು ಸಹಿ ಹಾಕುತ್ತೇನೆ ಎಂದಿದ್ದಾನೆ. ಅದನ್ನು ತೆಗೆದುಕೊಂಡು ಜೈದೇವ ಹೋಗಿದ್ದಾನೆ. ಇದೇ ವೇಳೆ, ಭೂಪತಿಗೆ ಮಲ್ಲಿಯೇ ನಿಮ್ಮ ಮಗಳು ಎನ್ನುವ ವಿಷಯ ತಿಳಿಸಿದ್ದಾನೆ. ಇದನ್ನು ಕೇಳಿ ಭೂಪತಿ ಮತ್ತು ಮಲ್ಲಿ ಇಬ್ಬರೂ ಶಾಕ್​ ಆಗಿದ್ದಾರೆ.

ಇನ್ನು ಭಾಗ್ಯಲಕ್ಷ್ಮಿ ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಸದ್ಯ ಭಾಗ್ಯಳ ತಂಗಿ ಪೂಜಾಳ ಮದುವೆಯಲ್ಲಿ ನೂರೆಂಟು ವಿಘ್ನಗಳು ಬಂದಿವೆ. ಕಿಶನ್​ ಜೊತೆ ಎಂಗೇಜ್​ಮೆಂಟ್​ ಆಗಿದ್ದರೂ, ಭಾಗ್ಯಳ ಲೈಫ್​ನಲ್ಲಿ ಎಲ್ಲವೂ ಅಂದುಕೊಂಡಂಗೆ ಆಗುತ್ತಿಲ್ಲ. ಕಿಶನ್​ ಅಣ್ಣ ಒಂದುಕಡೆ ಈ ಮದುವೆಗೆ ವಿರೊಧ ವ್ಯಕ್ತಪಡಿಸುತ್ತಿದ್ರೆ, ಅದೇ ಇನ್ನೊಂದೆಡೆ ಅತ್ತೆ ಕೂಡ ಸೇರಿಕೊಂಡಿದ್ದಾಳೆ. ಬಡವರ ಮನೆಯ ಹೆಣ್ಣಾಗಿರುವ ಕಾರಣ, ಇಂಥ ಸಂಬಂಧ ನಮಗೆ ಬೇಡ ಎನ್ನುತ್ತಿದ್ದಾರೆ. ಅದರಲ್ಲಿಯೂ ಭಾಗ್ಯ ಮತ್ತು ಆಕೆಯ ಅತ್ತೆ ಕುಸುಮಾ ಮಾಡಿರುವ ಎಡವಟ್ಟಿನಿಂದ ಕಿಶನ್​ ಅಣ್ಣ ಆದಿಗೂ ಅವರ ಮೇಲೆ ಕೋಪ ಇದೆ. ಆದರೆ ಪೂಜಾ ಮಾತ್ರ ನನಗೆ ಅವರು ಎಷ್ಟೇ ಟಾರ್ಚರ್​ ಕೊಟ್ಟರೂ ಪರವಾಗಿಲ್ಲ, ಕಿಶನ್​ನನ್ನೇ ಮದುವೆಯಾಗೋದು ಅಂತಿದ್ದಾಳೆ.

ಮನೆಯವರೆಲ್ಲರೂ ವಿರೋಧ ಮಾಡಿದ ಬಳಿಕ ಕಿಶನ್​, ಪೂಜಾಳಿಗೆ ಗೊತ್ತಿಲ್ಲದಂತೆ ಕರೆದುಕೊಂಡು ಹೋಗಿ ಮದುವೆಗೆ ರೆಡಿಯಾಗಿದ್ದಾನೆ. ದೇವಸ್ಥಾನದಲ್ಲಿ ನಡೆಯುತ್ತಿರುವ ಮದುವೆ ನಿಲ್ಲಿಸಲು ಎರಡೂ ಕಡೆಯವರು ಬಂದಿದ್ದಾರೆ. ಆದರೆ ತನ್ನ ಕುಟುಂಬದವರ ಅನುಮತಿ ಇಲ್ಲದೇ ನಾನು ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಎಂದು ಪೂಜಾ ಹೇಳಿದ್ದಾಳೆ. ಆದರೆ ಕಿಶನ್​ ತಾತಾನಿಗೆ ಭಾಗ್ಯಳ ಮನೆಯವರ ಒಳ್ಳೆಯತನ ಗೊತ್ತಿರೋ ಕಾರಣ, ಮದುವೆ ಮಾಡಿಸಿದ್ದಾನೆ. ಈಗ ಇಲ್ಲೇನು ಆಗುತ್ತದೆ ಎನ್ನುವ ಕುತೂಹಲವಿದೆ.