ಭಾಗ್ಯಲಕ್ಷ್ಮಿ ಭಾಗ್ಯ ಸದ್ಯ ತಂಗಿ ಪೂಜಾಳ ಮದುವೆಯ ಸಮಸ್ಯೆಯಲ್ಲಿ ಸಿಲುಕಿದ್ದಾಳೆ. ಇದರ ನಡುವೆಯೇ ರೀಲ್ಸ್ ಮಾಡಿದ ನಟಿಗೆ ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ!
ಸದ್ಯ ಭಾಗ್ಯಳ ತಂಗಿ ಪೂಜಾಳ ಮದುವೆಯಲ್ಲಿ ನೂರೆಂಟು ವಿಘ್ನಗಳು ಬಂದಿವೆ. ಕಿಶನ್ ಜೊತೆ ಎಂಗೇಜ್ಮೆಂಟ್ ಆಗಿದ್ದರೂ, ಭಾಗ್ಯಳ ಲೈಫ್ನಲ್ಲಿ ಎಲ್ಲವೂ ಅಂದುಕೊಂಡಂಗೆ ಆಗುತ್ತಿಲ್ಲ. ಕಿಶನ್ ಅಣ್ಣ ಒಂದುಕಡೆ ಈ ಮದುವೆಗೆ ವಿರೊಧ ವ್ಯಕ್ತಪಡಿಸುತ್ತಿದ್ರೆ, ಅದೇ ಇನ್ನೊಂದೆಡೆ ಅತ್ತೆ ಕೂಡ ಸೇರಿಕೊಂಡಿದ್ದಾಳೆ. ಬಡವರ ಮನೆಯ ಹೆಣ್ಣಾಗಿರುವ ಕಾರಣ, ಇಂಥ ಸಂಬಂಧ ನಮಗೆ ಬೇಡ ಎನ್ನುತ್ತಿದ್ದಾರೆ. ಅದರಲ್ಲಿಯೂ ಭಾಗ್ಯ ಮತ್ತು ಆಕೆಯ ಅತ್ತೆ ಕುಸುಮಾ ಮಾಡಿರುವ ಎಡವಟ್ಟಿನಿಂದ ಕಿಶನ್ ಅಣ್ಣ ಆದಿಗೂ ಅವರ ಮೇಲೆ ಕೋಪ ಇದೆ. ಆದರೆ ಪೂಜಾ ಮಾತ್ರ ನನಗೆ ಅವರು ಎಷ್ಟೇ ಟಾರ್ಚರ್ ಕೊಟ್ಟರೂ ಪರವಾಗಿಲ್ಲ, ಕಿಶನ್ನನ್ನೇ ಮದುವೆಯಾಗೋದು ಅಂತಿದ್ದಾಳೆ. ಅದೇ ಇನ್ನೊಂದೆಡೆ ಅವರ ಅಂತಸ್ತಿಗೆ ತಕ್ಕಂತೆ ಮದುವೆಯ ಖರ್ಚು ಮಾಡುವ ಜವಾಬ್ದಾರಿ ಕೂಡ ಭಾಗ್ಯಳ ಮೇಲೆ ಇದು.
ಇದು ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್ ಕಥೆ. ಆದರೆ ಅದೇ ಇನ್ನೊಂದೆಡೆ, ಬಿಜಿ ಶೆಡ್ಯೂಲ್ ನಡುವೆಯೂ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಇರುತ್ತಾರೆ. ಆಗ್ಗಾಗ್ಗೆ ರೀಲ್ಸ್ಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಸೀರೆಯಲ್ಲಿ ಸುಷ್ಮಾಕಂಗೊಳಿಸಿದ್ದಾರೆ. ನಟಿಯನ್ನು ನೋಡಿ ಸೀರಿಯಲ್ ಪ್ರೇಮಿಗಳು ಕಾಲೆಳೆಯುತ್ತಿದ್ದಾರೆ. ಅಲ್ಲಿ ತಂಗಿಯ ಮದುವೆಗೆ ಹಣ ಹೊಂದಿಸೋದು ಬಿಟ್ಟು ಇಲ್ಲಿ ಬಿನ್ನಾಣ ಮಾಡ್ತಿದ್ದಿಯಾ ಎಂದು ತಮಾಷೆಯ ಕಮೆಂಟ್ ಹಾಕಿದ್ದಾರೆ.
ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.
ಇತ್ತೀಚಿಗೆ ಕುಂಭಮೇಳಕ್ಕೂ ಹೋಗಿ ಬಂದಿದ್ದರು ಸುಷ್ಮಾ. ಅದಾದ ಬಳಿಕ ಹಿಮಾಲಯದ ಟೂರ್ ಮಾಡಿ ಬಂದಿದ್ದಾರೆ. ಈ ಕುರಿತು ಅವರೇ ಖುದ್ದು ವಿಡಿಯೋ ಒಂದರಲ್ಲಿ ಹೇಳಿದ್ದರು. ಮೌಂಟ್ ಎವರೆಸ್ಟ್‌ನಲ್ಲಿ ಟ್ರೆಕ್ಕಿಂಗ್ ಮಾಡುವ ಆಸೆ ಹಲವು ವರ್ಷಗಳಿಂದ ಇತ್ತು. ಈ ಹಿನ್ನೆಲೆಯಲ್ಲಿ ಈಗ ಪ್ರಯಾಣ ಬೆಳೆಸಿರುವುದಾಗಿ ಹೇಳಿದ್ದರು. ಸೀರಿಯಲ್ನಿಂದ ಕೆಲವು ದಿನಗಳ ಮಟ್ಟಿಗೆ ರಜೆ ಪಡೆದು ಚಾರಣಕ್ಕೆ ಹೊರಟು ಬಂದಿದ್ದು, ಅವುಗಳ ವಿಡಿಯೋ ಕೂಡ ಶೇರ್ ಮಾಡುತ್ತಿರುತ್ತಾರೆ.
