ಅಮೃತಧಾರೆ ಗೌತಮ್ ಉರ್ಫ್ ರಾಜೇಶ್ ನಟರಂಗ ಅವರು ತಮ್ಮ ಮೊದಲ ಕ್ರಷ್ ಬಗ್ಗೆ ಹೇಳಿದ್ದಾರೆ. ಅವರು ಹೇಳಿದ್ದೇನು?
ರಾಜೇಶ್ ನಟರಂಗ ಎನ್ನುವುದಕ್ಕಿಂತಲೂ ಸದ್ಯ ಸಾಕಷ್ಟು ಫೇಮಸ್ ಆಗಿರೋರುವವರು ಅಮೃತಧಾರೆ ಡುಮ್ಮಾ ಸರ್ ಉರ್ಫ್ ಗೌತಮ್. ಮಿಲೇನಿಯರ್ ಬಿಜಿನೆಸ್‌ಮೆನ್. ಯಾವುದೇ ವ್ಯವಹಾರವನ್ನು ಫಟಾಫಟ್ ಮಾಡಬಲ್ಲ. ಆದರೆ ಪ್ರೀತಿಯ ವಿಷಯ ಬಂದಾಗ ಮಾತ್ರ ಜೀರೋ ಇದ್ದ ಗೌತಮ್ ಈಗ ಪ್ರೀತಿಯಲ್ಲಿಯೂ ಹೀರೋ ಆಗಿದ್ದಾನೆ. ಗೌತಮ್ ಮತ್ತು ಭೂಮಿಕಾ ಪ್ರೀತಿಗೆ ಮನಸೋಲದವರೇ ಇಲ್ಲ ಎನ್ನಬಹುದೇನೋ. ಇದ್ದರೆ ಇಂಥ ಕಪಲ್ ಇರಬೇಕು ಎನ್ನುವವರೇ ಹೆಚ್ಚು. ಅದರಲ್ಲಿಯೂ ಇದ್ದರೆ ಗೌತಮ್ನಂಥ ಪತಿ ಇರಬೇಕು, ಎಲ್ಲರಿಗೂ ಇಂಥ ಪತಿ ಸಿಗಲಿ ಎಂದೇ ಹಲವು ಹೆಣ್ಣುಮಕ್ಕಳು ಅಂದುಕೊಳ್ಳುವುದು ಉಂಟು. ರಿಯಲ್ ಲೈಫ್ನಲ್ಲಿಯೂ ಇಷ್ಟೇ ಬೆಸ್ಟ್ ದಾಂಪತ್ಯ ನಡೆಸುತ್ತಿದ್ದಾರೆ ಡುಮ್ಮ ಸರ್ ಅಂದ್ರೆ ರಾಜೇಶ್ ನಟರಂಗ ಅವರು. ರಿಯಲ್ ಲೈಫ್ನಲ್ಲಿ ಚೈತ್ರಾ ಮಡಿಯಾಗಿದ್ದು, ಮಗಳೂ ಇದ್ದಾಳೆ.
ಸುವರ್ಣ ಪಾಡಕಾಸ್ಟ್ನಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ ರಾಜೇಶ್ ಅವರಿಗೆ ನಿಮ್ಮ ಮೊದಲ ಕ್ರಷ್ ಯಾರು ಎಂದು ಕೇಳಿದಾಗ, ಕಾಲೇಜ್ ಡೇಸ್ನಲ್ಲಾ ಎಂದು ಪ್ರಶ್ನಿಸಿದರು. ಕೊನೆಗೆ ಇಲ್ಲಪ್ಪಾ, ಕಾಲೇಜ್ ಡೇಸ್ನಲ್ಲಿ ಛಾನ್ಸೇ ಇಲ್ಲ. ದಿನ ಬೆಳಗಾದ್ರೆ ಕ್ರಿಕೆಟ್, ಸ್ಪೋರ್ಟ್ಸ್, ಟ್ರೆಕ್ಕಿಂಗ್ ಅಂತೆಲ್ಲಾ ಒಳ್ಳೆ ಕಾಡುಮನುಷ್ಯನ ಥರ ಇರ್ತಿದ್ದೆ. ಹಾಗಾಗಿ, ಕಾಲೇಜಿನಲ್ಲಿ ಯಾರೂ ಇಲ್ಲ. ಇನ್ನು ಸಿನಿಮಾ ಹೀರೋಯಿನ್ಸ್ ಬಗ್ಗೆ ಹೇಳೋದಾದ್ರೆ ಆಫ್ಕೋರ್ಸ್ ತುಂಬಾ ಜನ ಇದ್ದಾರೆ ಎಂದು ಬಾಲಿವುಡ್ನ ಹಳೆಯ ಒಂದಿಷ್ಟು ನಟಿಯರ ಹೆಸರು ಹೇಳಿದ್ರು. ರವೀನಾ ಟಂಡನ್, ಮಾಧುರಿ, ರಾಣಿ ಮುಖರ್ಜಿ, ಕಾಜೋಲ್ ಹೀಗೆ ಫಸ್ಟ್ ಟೈಂ ಎಂಟ್ರಿ ಕೊಟ್ಟವರೆಲ್ಲಾ ಇಷ್ಟ, ಅವರೆಲ್ಲರೂ ಕ್ರಷೇ ಎಂದರು. ಕೊನೆಗೆ ಸ್ಯಾಂಡಲ್ವುಡ್ನಲ್ಲಿ ಯಾರು ಎಂದು ಕೇಳಿದಾಗ ಮಾತ್ರ ತುಂಬಾ ಯೋಚನೆ ಮಾಡಿದ ರಾಜೇಶ್ ಅವರು ನಿವೇದಿತಾ ಜೈನ್ ಹೆಸರು ಹೇಳಿದರು. 1998ರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ನಟಿ ಇವರು. 19ನೇ ವಯಸ್ಸಿನಲ್ಲಿ ಮಹಡಿಯಿಂದ ಕಾಲುಜಾರಿ ಬಿದ್ದು ಸಾವನ್ನಪ್ಪಿದ ನಟಿ ಅದಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿ ಖ್ಯಾತನಾಮರಾಗಿದ್ದರು. ಶಿವರಂಜಿನಿ, ಸೂತ್ರಧಾರ, ಪ್ರೇಮ ರಾಗ ಹಾಡು ಗೆಳತಿ, ಬಾಳಿನ ದಾರಿ, ಬಾಳಿದ ಮನೆ, ಅಮೃತವರ್ಷಿಣಿ, ನೀ ಮುಡಿದಾ ಮಲ್ಲಿಗೆ ಇತ್ಯಾದಿ ಚಿತ್ರಗಳಲ್ಲಿ ನಟಿಸಿ ಮನೆಮಾತಾದವರು. ಇವರ ಬಗ್ಗೆ ರಾಜೇಶ್ ನಟರಂಗ ಹೇಳಿದ್ದಾರೆ.
ಇನ್ನು ರಾಜೇಶ್ ನಟರಂಗ ಕುರಿತು ಹೇಳುವುದಾದರೆ, ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮ್ ಪಾತ್ರಕ್ಕೆ ಜೀವ ತುಂಬಿರುವ ರಾಜೇಶ್, ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ.
ಈ ಹಿಂದೆ ಅವರು ತಮ್ಮ ಮನೆಯ ಕುತೂಹಲದ ಹೆಸರು 'ಮ Na' ಬಗ್ಗೆ ಮಾತನಾಡಿದ್ದರು. ಇದರ ಬಗ್ಗೆ ಮಾಹಿತಿ ನೀಡಿದ್ದ ರಾಜೇಶ್ ಅವರು ಇದು ನನ್ನ ಅಪ್ಪನವರ ಜಾಗ. ಅದೇ ಕಾರಣಕ್ಕೆ ಅಪ್ಪ-ಅಮ್ಮನ ಹೆಸರು ಇಟ್ಟಿದ್ದೇವೆ. ಮಂಜುಳಾ ಮತ್ತು ನಾಗರಾಜ್ ಎನ್ನುವುದು ಇದರ ಅರ್ಥ ಎಂದು ತಿಳಿಸಿದ್ದಾರೆ. ಬೆಂಗಳೂರಿನ ಸೀತಾ ಸರ್ಕಲ್ ಬಳಿ ತಮ್ಮ ಮನೆ ಇದೆ ಎಂಬ ಗುಟ್ಟನ್ನೂ ಬಿಚ್ಚಿಟ್ಟಿದ್ದರು. ಈ ಮೊದಲು ರಾಜೇಶ್ ಅವರು ತಮಗೆ ಯಾರೂ ಹೆಣ್ಣು ಕೊಡಲು ಮುಂದೆ ಬರಲಿಲ್ಲ ಎನ್ನುವ ಸ್ಟೋರಿ ಹೇಳಿದ್ದರು. 2005 ಮನೆಯವರಿಂದ, ಗೆಳೆಯರಿಂದ ನನ್ನ ಮದ್ವೆಗೆ ಧರಣಿ ನಡೀತಿದ್ದು. ಆದ್ರೆ ಊರಿನಲ್ಲಿ ಇರೋ ಯಾವ ಹೆಣ್ಣುಮಕ್ಕಳೂ ನನ್ನನ್ನು ಮದ್ವೆಯಾಗೋಕೆ ರೆಡಿನೇ ಇರಲಿಲ್ಲ. ಜೀವನದಲ್ಲಿ ಜಿಗುಪ್ಸೆ ಹುಟ್ಟಿತ್ತು. ಆಗ ನನ್ನ ಬ್ಯಾಚುಲರ್ಸ್ ಫ್ರೆಂಡ್ಸ್ ನನಗೆ ಜತೆಯಾದ್ರು. ಬೇಜಾರು ಮಾಡ್ಕೋಬೇಡ ಕಣೋ. ಯಾಕೆ ಮದುವೆಯಾಗಬೇಕು, ಮದ್ವೆಯಾಗದೇ ಆರಾಮಾಗಿ ಇರಬಹುದು ಎಂದ್ರು. ಆ ಟೈಮ್ನಲ್ಲಿ ಕರ್ನಾಟಕದ ದಕ್ಷಿಣ ಭಾಗದಿಂದ ಒಂದು ಫೋಟೋ ಬಂತು. ಈ ಹುಡುಗಿಯನ್ನು ಒಮ್ಮೆ ನೋಡಿ ಅಂತ. ಇದೇ ಕೊನೆ ಫೋಟೋ, ಮತ್ತೆ ಮದ್ವೆನೇ ಬೇಡ ಅಂದ್ಕೊಂಡು ಆ ಫೋಟೋ ನೋಡಿದೆ ಎಂದು ಆ ದಿನಗಳನ್ನುನೆನಪಿಸಿಕೊಂಡಿದ್ದರು ರಾಜೇಶ್ ನಟರಂಗ. ಈಗ ಅದೇ ಹುಡುಗಿಯ ಜೊತೆ ಮದ್ವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ.
