ತಮ್ಮದೇ ಚಿತ್ರವನ್ನು ನೋಡಿದ ಜನ ಹೇಗೆ ರೆಸ್ಪಾನ್ಸ್ ಮಾಡುತ್ತಾರೆ ಎಂದು ನೋಡುವ ಸಲುವಾಗಿ ಈ ಖ್ಯಾತ ನಟ ಸಿನಿಮಾಮಂದಿರದ ಮುಂದೆ ನಿಂತು ಮಾಸ್ಕ್ ಧರಿಸಿ ಪ್ರಶ್ನೆ ಕೇಳಿದ್ದಾರೆ. ಯಾರೀ ನಟ? ಜನ ಏನಂದ್ರು ನೋಡಿ!
ಯಾವುದಾದರೂ ಹೊಸ ಸಿನಿಮಾ ರಿಲೀಸ್ ಆದಾಗ, ಪತ್ರಕರ್ತರು ಸಿನಿಮಾ ಮಂದಿರಗಳ ಎದುರಿಗೆ ಹೋಗಿ ಜನರ ವಿಮರ್ಶೆ ಕೇಳುವುದು ಸಹಜ. ಆದರೆ ಇಲ್ಲೊಬ್ಬ ನಟ, ತಮ್ಮದೇ ಚಿತ್ರದ ವಿಮರ್ಶೆಯನ್ನು ಇದೇ ರೀತಿ ಪಡೆದುಕೊಂಡಿದ್ದಾರೆ! ಆದ್ರೆ ಸ್ವಲ್ಪ ಡಿಫರೆಂಟ್ ಆಗಿ ಅವರು ಪಡೆದುಕೊಂಡಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಅಲ್ಲಿರುವ ಜನರಿಗೆ ಚಿತ್ರದ ಬಗ್ಗೆ ಹಾಗೂ ನಾಯಕನ ಬಗ್ಗೆ ಅರ್ಥಾತ್ ತಮ್ಮದೇ ಬಗ್ಗೆ ಕೇಳಿದ್ದಾರೆ. ಆದರೆ ಕುತೂಹಲ ಹಾಗೂ ವಿಚಿತ್ರ ಎಂದರೆ ಅಲ್ಲಿ ರಿಯಾಕ್ಟ್ ಮಾಡಿದ ಯಾರಿಗೂ ಇವರೇ ತಮ್ಮ ನೆಚ್ಚಿನ ಹೀರೋ ಎಂದು ತಿಳಿಯಲೇ ಇಲ್ಲ. ಈ ವಿಡಿಯೋ ನೋಡಿದ ಮೇಲೆ ನಿಜವಾದ ಅರಿವಾಗಿ ಅವರು ತಲೆ ತಲೆ ಚಚ್ಚಿಕೊಂಡರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಈ ನಟ ತಮ್ಮದೇ ಚಿತ್ರದ ವಿಮರ್ಶೆಯನ್ನು ಫಸ್ಟ್ ಹ್ಯಾಂಡ್ ರಿಪೋರ್ಟರ್ ಆಗಿ ಪಡೆದುಕೊಂಡಿದ್ದಾರೆ.
ಹಾಗಿದ್ದರೆ ಈ ಮೇಲಿನ ಫೋಟೋ ನೋಡಿದ ಮೇಲೆ ಅವರು ಯಾರೆಂದು ನಿಮಗೆ ತಿಳಿದಿದ್ಯಾ? ಅವರೇ ನಟ ಅಕ್ಷಯ ಕುಮಾರ್. ಅವರ, ʻಹೌಸ್‌ಫುಲ್ 5ʼ ಸಿನಿಮಾ ಜೂನ್ 6ರಂದು ಬಿಡುಗಡೆಗೊಂಡಿದೆ. ಒಂದರ ಮೇಲೊಂದರಂತೆ ಹಲವು ಫ್ಲಾಪ್ ಚಿತ್ರಗಳನ್ನೇ ನೀಡ್ತಿರೋ ನಟನಿಗೆ ಈ ಚಿತ್ರ ಸ್ವಲ್ಪ ರಿಲ್ಯಾಕ್ಸ್ ನೀಡಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆದರೆ ತಮ್ಮ ಚಿತ್ರಕ್ಕೆ ಜನರು ಹೇಗೆ ರೆಸ್ಪಾನ್ಸ್ ಮಾಡುತ್ತಿದ್ದಾರೆ ಎನ್ನುವುದನ್ನು ಅರಿಯಲು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಥಿಯೇಟರ್ ಮುಂದೆ ನಟ ಹೋದರೂ ಅಭಿಮಾನಿಗಳು ಗುರುತೇ ಹಿಡಿಯಲಿಲ್ಲ. ಕೆಲವರು ಚೆನ್ನಾಗಿದೆ ಎಂದರೆ, ಮತ್ತೆ ಕೆಲವರು ಓಕೆ ಎಂದು ಸುಮಾರಾಗಿದೆ ಎನ್ನುವಂತೆ ಪೋಸ್ ಕೊಟ್ಟು ಹೋಗಿದ್ದಾರೆಯೇ ವಿನಾ ಅವರಿಗೆ ಇವರು ಯಾರು ಎಂದು ತಿಳಿಯಲಿಲ್ಲ! ಎಷ್ಟೋ ಅಭಿಮಾನಿಗಳು ಚಿತ್ರನಟರನ್ನೇ ತಮ್ಮ ದೇವರು ಎಂದುಕೊಂಡಿರುತ್ತಾರೆ. ಆದರೆ ಅವರೆಲ್ಲರೂ ಕಣ್ಣೆದುರೇ ದೇವತೆಯೇ ನಿಂತಲೂ ಗುರುತಿಸಲೇ ಇಲ್ಲ!
ಈ ವಿಡಿಯೋವನ್ನು ಸ್ವತಃ ಅಕ್ಷಯ್ ಕುಮಾರ್ ಅವರೇ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, “ನಾನು ಕಿಲ್ಲರ್ ಮುಖವಾಡ ಧರಿಸಲು ನಿರ್ಧರಿಸಿ, ಇಂದು ಬಾಂದ್ರಾದಲ್ಲಿ ʻಹೌಸ್‌ಫುಲ್ 5ʼ ಸಿನಿಮಾವನ್ನು ವೀಕ್ಷಿಸಿ ಥಿಯೇಟರ್‌ನಿಂದ ಹೊರಬರುತ್ತಿರುವ ಜನರನ್ನು ಸಂದರ್ಶಿಸಿದೆ. ಆರಂಭದಲ್ಲಿ ನನ್ನನ್ನು ಯಾರೂ ಕಂಡು ಹಿಡಿಯಲಿಲ್ಲ. ಆದರೂ ಕೆಲವರಿಗೆ ಗೊತ್ತಾಗಿಬಿಟ್ಟಿತು, ಎಲ್ಲರೂ ಬಂದು ನನ್ನನ್ನು ಮುತ್ತಿಕೊಳ್ಳುವ ಮೊದಲೇ ನಾನು ಅಲ್ಲಿಂದ ಕಾಲು ಕಿತ್ತೆ” ಎಂದು ಬರೆದುಕೊಂಡಿದ್ದಾರೆ. ಕೆಲವರು ಅಲ್ಲಿ ಅಕ್ಷಯ್ ಕುಮಾರ್ ಅಕ್ಷಯ್ ಕುಮಾರ್ ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ಆದರೆ ನಟ ಯಾರನ್ನು ಮಾತನಾಡಿಸಿದ್ದರೋ ಅವರಿಗೆ ಯಾರಿಗೂ ತಿಳಿಯಲಿಲ್ಲ ಎನ್ನುವುದೇ ಸೋಜಿಗ. ನಟ ದನಿಯನ್ನು ಬದಲಾಯಿಸಿ ಮಾತನಾಡಿಸಿದ್ದರು. ಆದರೂ ಕೆಲವೇ ಕೆಲವರು ಗುರುತು ಹಿಡಿದರು.
ಅಂದಹಾಗೆ ಈ ಚಿತ್ರ, ಕಾಮಿಡಿ ಥ್ರಿಲ್ಲರ್ ರೋಲರ್ ಕಾಸ್ಟರ್ ಆಗಿದ್ದು, ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಉತ್ತಮ ಓಪನಿಂಗ್ ಕಂಡಿದೆ. ಬಿಡುಗಡೆಯಾದ ಎರಡು ದಿನಗಳಲ್ಲಿ ಭಾರತದಲ್ಲಿ 55 ಕೋಟಿ ಮತ್ತು ವಿಶ್ವಾದ್ಯಂತ 87 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ತರುಣ್ ಮನ್ಸುಖಾನಿ ನಿರ್ದೇಶನದ ಈ ಚಿತ್ರದಲ್ಲಿ ಆಕ್ಷನ್ ಅಕ್ಷಯ್ ಕುಮಾರ್ ಸೇರಿದಂತೆ ಫರ್ದೀನ್ ಖಾನ್, ಸಂಜಯ್ ದತ್, ಶ್ರೇಯಸ್ ತಲ್ಪಡೆ, ನಾನಾ ಪಾಟೇಕರ್, ಡಿನೋ ಮೋರಿಯಾ, ಜಾಕಿ ಶ್ರಾಫ್, ಚಿತ್ರಾಂಗದಾ ಸಿಂಗ್, ಚಂಕಿ ಪಾಂಡೆ, ಸೋನಮ್ ಬಜ್ವಾ, ನರ್ಗಿಸ್ ಫಕ್ರಿ, ಅಭಿಷೇಕ್ ಬಚ್ಚನ್, ಜಾಕ್ವೆಲಿನ್ ಫರ್ನಾಂಡಿಸ್, ನಿಕಿತಿನ್ ಧೀರ್, ರಿತೇಶ್ ದೇಶ್‌ಮುಖ್ ಸಂದರ್ಯ ಶರ್ಮಾ ಮತ್ತು ಜಾನಿ ಲಿವರ್ ಮುಂತಾದವರು ನಟಿಸಿದ್ದಾರೆ.
