ಅಜಯ್ ದೇವಗನ್ ಗುರುವಾರ ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ದಿನದಂದು ಅವರ ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಸ್ನೇಹಿತರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಗೈದಿದ್ದಾರೆ.
ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ತಮ್ಮ 57ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಕಾಜೋಲ್, 'ನಿಮ್ಮ ಕೇಕ್ ನೋಡಿದರೆ ಬೆಂಕಿ ಅವಘಡ ಆಗುವ ಹಾಗೆ ಕಾಣಿಸುತ್ತಿದೆ' ಎಂದು ತಮಾಷೆಯಾಗಿ ವಿಶ್ ಮಾಡಿದ್ದಾರೆ. ಸ್ನೇಹಿತ ಅಕ್ಷಯ್ ಕುಮಾರ್ ಕೂಡ 'ಗೋಲ್ಮಾಲ್ 5' ಸೆಟ್‌ನ ಫೋಟೋ ಹಂಚಿಕೊಂಡು ವಿಶೇಷವಾಗಿ ಶುಭ ಕೋರಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಗುರುವಾರ ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ದಿನದಂದು ಅವರ ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಸ್ನೇಹಿತರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಗೈದಿದ್ದಾರೆ. ಅದರಲ್ಲೂ, ಪತ್ನಿ ಕಾಜೋಲ್ ತಮ್ಮ ಪತಿಗೆ ನೀಡಿರುವ ಬರ್ತ್‌ಡೇ ವಿಶ್ ಸಖತ್ ಫನ್ನಿಯಾಗಿದೆ. ಕಾಜೋಲ್ ತಮ್ಮ ಪೋಸ್ಟ್‌ನಲ್ಲಿ ಅಜಯ್ ವಯಸ್ಸಿನ ಬಗ್ಗೆ ತಮಾಷೆ ಮಾಡಿದ್ದಾರೆ.
"ಒಂದು ಹಂತದ ನಂತರ ಕೇಕ್ ಮೇಲಿರುವ ಕ್ಯಾಂಡಲ್‌ಗಳನ್ನು ನೋಡಿದ್ರೆ, ಅದು ಸಂಭ್ರಮ ಅನ್ನೋದಕ್ಕಿಂತ ಬೆಂಕಿ ಅವಘಡದ ಎಚ್ಚರಿಕೆ ಕೊಟ್ಟ ಹಾಗೆ ಕಾಣಿಸುತ್ತೆ... ನೀವು ಆ ಹಂತ ತಲುಪಿದ್ದೀರಿ ಅನ್ಸುತ್ತೆ.. ಏನೇ ಇರಲಿ, ಹುಟ್ಟುಹಬ್ಬದ ಶುಭಾಶಯಗಳು... ನಿಮಗೆ ಯಾವಾಗಲೂ ಕೇಕ್ ಸಿಗಲಿ," ಎಂದು ಕಾಜೋಲ್ ಬರೆದುಕೊಂಡಿದ್ದಾರೆ. ಕಾಜೋಲ್ ಅವರ ಈ ತಮಾಷೆಯ ಪೋಸ್ಟ್‌ಗೆ ಅಜಯ್ ಕೂಡ ಸ್ವೀಟ್ ಆಗಿ ಉತ್ತರ ಕೊಟ್ಟಿದ್ದಾರೆ. "ನನ್ನ ಜೀವನದ ಪ್ರತಿಯೊಂದು ಬೆಂಕಿ ಅವಘಡದ ಹಂತದಲ್ಲೂ ನೀನು ಜೊತೆಗಿರುವುದಕ್ಕೆ ಖುಷಿ ಇದೆ" ಎಂದು ಅವರು ಕಾಮೆಂಟ್ ಮಾಡಿದ್ದಾರೆ.
ನಟ ಅಕ್ಷಯ್ ಕುಮಾರ್ ಕೂಡ ತಮ್ಮ ಸ್ನೇಹಿತ ಅಜಯ್‌ಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. 'ಗೋಲ್ಮಾಲ್ 5' ಸಿನಿಮಾದ ಸೆಟ್‌ನಲ್ಲಿನ ಒಂದು ತೆರೆಮರೆಯ ಫೋಟೋವನ್ನು ಅಕ್ಷಯ್ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಅಜಯ್ ಕೆನ್ನೆಗೆ ಬಲವಂತವಾಗಿ ಮುತ್ತು ಕೊಡುತ್ತಿರುವುದನ್ನು ಕಾಣಬಹುದು. "ದೋಸ್ತಿ ಇತ್ನಿ ಪುರಾನಿ... ಪ್ಯಾರ್ ತೋ ಹೋಗಾ ಹಿ. ಪ್ರೀತಿಯ ಅಜಯ್ ದೇವಗನ್‌ಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಅಕ್ಷಯ್ ಪೋಸ್ಟ್‌ಗೆ ಕ್ಯಾಪ್ಶನ್ ನೀಡಿದ್ದಾರೆ.
ಅಜಯ್ ದೇವಗನ್ ವೃತ್ತಿಜೀವನ ಮತ್ತು ಮುಂಬರುವ ಸಿನಿಮಾಗಳು
ಮೂರು ದಶಕಗಳಿಗೂ ಹೆಚ್ಚು ಕಾಲದ ತಮ್ಮ ಸಿನಿ ಕೆರಿಯರ್‌ನಲ್ಲಿ ಅಜಯ್ ದೇವಗನ್, ಗಂಭೀರ ಪಾತ್ರಗಳು ಮತ್ತು ಕಮರ್ಷಿಯಲ್ ಹಿಟ್‌ಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. 'ಜಖಂ,' 'ಕಂಪನಿ,' ಅಥವಾ 'ಓಂಕಾರ' ನಂತಹ ಸಿನಿಮಾಗಳಲ್ಲಿ ಅವರು ತಮ್ಮ ಅದ್ಭುತ ನಟನಾ ಪ್ರತಿಭೆಯನ್ನು ನಿರಂತರವಾಗಿ ಪ್ರದರ್ಶಿಸಿದ್ದಾರೆ. ಸದ್ಯ ಅಜಯ್ ದೇವಗನ್, ಇಂದ್ರ ಕುಮಾರ್ ನಿರ್ದೇಶನದ 'ಧಮಾಲ್ 4' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದಲ್ಲಿ ರಿತೇಶ್ ದೇಶಮುಖ್, ಅರ್ಷದ್ ವಾರ್ಸಿ, ಸಂಜಯ್ ಮಿಶ್ರಾ, ಜಾವೇದ್ ಜಾಫ್ರಿ, ಇಶಾ ಗುಪ್ತಾ, ಸಂಜೀದಾ ಶೇಖ್, ಅಂಜಲಿ ಆನಂದ್, ಉಪೇಂದ್ರ ಲಿಮಯೆ, ವಿಜಯ್ ಪಾಟ್ಕರ್ ಮತ್ತು ರವಿ ಕಿಶನ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಅಜಯ್ ದೇವಗನ್, ಭೂಷಣ್ ಕುಮಾರ್, ಕೃಷನ್ ಕುಮಾರ್, ಅಶೋಕ್ ಠಾಕೇರಿಯಾ, ಇಂದ್ರ ಕುಮಾರ್, ಆನಂದ್ ಪಂಡಿತ್ ಮತ್ತು ಕುಮಾರ್ ಮಂಗತ್ ಪಾಠಕ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ಧಮಾಲ್ 4' ಜನಪ್ರಿಯ ಧಮಾಲ್ ಫ್ರಾಂಚೈಸ್‌ನ ಮುಂದುವರಿದ ಭಾಗವಾಗಿದೆ. 2007ರಲ್ಲಿ ತೆರೆಕಂಡಿದ್ದ ಮೂಲ 'ಧಮಾಲ್' ಚಿತ್ರವನ್ನು ಇಂದ್ರ ಕುಮಾರ್ ನಿರ್ದೇಶಿಸಿದ್ದರು ಮತ್ತು ಅಶೋಕ್ ಠಾಕೇರಿಯಾ ನಿರ್ಮಿಸಿದ್ದರು.
ಗೋಲ್ಮಾಲ್ 5
ಅಜಯ್ ದೇವಗನ್ ಕೈಯಲ್ಲಿ 'ಗೋಲ್ಮಾಲ್ 5' ಸಿನಿಮಾ ಕೂಡ ಇದೆ. ಈ ಹೊಸ ಭಾಗದಲ್ಲಿ ಅಕ್ಷಯ್ ಕುಮಾರ್ ಕೂಡ ನಟಿಸುತ್ತಿದ್ದಾರೆ. ಈ ಫ್ರಾಂಚೈಸ್‌ಗೆ ಸೇರ್ಪಡೆಗೊಂಡ ಬಗ್ಗೆ ಅಕ್ಷಯ್ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ, "ಹುಟ್ಟುಹಬ್ಬದ ಶುಭಾಶಯಗಳು @itsrohitshetty. ನಿಮ್ಮ ಹುಟ್ಟುಹಬ್ಬದಂದು, ಈ ಕ್ರೇಜ್ ಇನ್ನಷ್ಟು ದೊಡ್ಡದಾಗಿದೆ. 'ಗೋಲ್ಮಾಲ್ 5'ನ ಈ ಕ್ರೇಜಿ ಕುಟುಂಬವನ್ನು ಸೇರಲು ಉತ್ಸುಕನಾಗಿದ್ದೇನೆ! ಹಂಗಾಮ ಶುರುವಾಗಲಿ!" ಎಂದು ಬರೆದುಕೊಂಡಿದ್ದರು.
ರೋಹಿತ್ ಶೆಟ್ಟಿ ನಿರ್ದೇಶನದ ಗೋಲ್ಮಾಲ್ ಫ್ರಾಂಚೈಸ್ ಸುಮಾರು ಎರಡು ದಶಕಗಳಿಂದ ಪ್ರೇಕ್ಷಕರನ್ನು ನಗಿಸುತ್ತಿದೆ. 2006ರಲ್ಲಿ ತೆರೆಕಂಡ ಮೊದಲ ಭಾಗ 'ಗೋಲ್ಮಾಲ್: ಫನ್ ಅನ್‌ಲಿಮಿಟೆಡ್' ಭರ್ಜರಿ ಹಿಟ್ ಆಗಿತ್ತು. ಇದರಲ್ಲಿ ಅಜಯ್ ದೇವಗನ್, ಶರ್ಮನ್ ಜೋಶಿ, ಅರ್ಷದ್ ವಾರ್ಸಿ ಮತ್ತು ತುಷಾರ್ ಕಪೂರ್ ನಟಿಸಿದ್ದರು. ಪರೇಶ್ ರಾವಲ್ ಮತ್ತು ರಿಮಿ ಸೇನ್ ಕೂಡ ಮೊದಲ ಚಿತ್ರದ ಭಾಗವಾಗಿದ್ದರು. ವರ್ಷಗಳು ಕಳೆದಂತೆ, ಗೋಲ್ಮಾಲ್ ಸರಣಿಯು ಭಾರತದ ಅತ್ಯಂತ ಜನಪ್ರಿಯ ಕಾಮಿಡಿ ಫ್ರಾಂಚೈಸ್‌ಗಳಲ್ಲಿ ಒಂದಾಗಿದೆ.


