ಕನ್ನಡ ಚಿತ್ರೋದ್ಯಮ ಮತ್ತೊಂದು ಪರ್ವಕಾಲದಲ್ಲಿದೆ. ಆರಂಭದಿಂದಲೂ ಅದು ಇಂತಹ ಅನೇಕ ಸಂಕ್ರಮಣದ ಕಾಲಘಟ್ಟಗಳನ್ನು ದಾಟಿದೆ. ಆಯಾ ಕಾಲಘಟ್ಟಗಳಲ್ಲಿ ತಾಂತ್ರಿಕತೆ, ಕಥಾ ವಸ್ತುಗಳ ಆಯ್ಕೆ, ದೊಡ್ಡ ತಾರಾಗಣದ ಜತೆಗೆ ನಿರ್ಮಾಣ ಶೈಲಿಯಲ್ಲೂ ಹಲವು ಬಗೆಯ ಪ್ರಯೋಗಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಭಾರತೀಯ ಚಿತ್ರರಂಗದಲ್ಲೂ ಗಮನ ಸೆಳೆದಿದ್ದು ಇತಿಹಾಸ. ಈಗ ಮತ್ತೊಂದು ಮನ್ವಂತರಕ್ಕೆ ಚಿತ್ರೋದ್ಯಮ ತೆರೆದುಕೊಂಡಿದೆ. ಅದೇ ಕನ್ನಡ ಸಿನಿಮಾಗಳ ಪ್ಯಾನ್‌ ಇಂಡಿಯಾ ರಿಲೀಸ್‌ ಟ್ರೆಂಡ್‌.

ಕನ್ನಡ ಚಿತ್ರಗಳ ಪ್ಯಾನ್‌ ಇಂಡಿಯಾ ರಿಲೀಸ್‌ ಸ್ಯಾಂಡಲ್‌ವುಡ್‌ ಮಟ್ಟಿಗೀಗ ಹೊಸ ಟ್ರೆಂಡ್‌. ಸಾಲು ಸಾಲು ಚಿತ್ರಗಳು ಈಗ ಪ್ಯಾನ್‌ ಇಂಡಿಯಾ ರಿಲೀಸ್‌ ಸಿದ್ಧತೆಯಲ್ಲಿವೆ. ‘ ಪೈಲ್ವಾನ್‌’ ಬೆನ್ನಲೇ ‘ಪೊಗರು’,‘ಭಜರಂಗಿ 2’,‘ಅವನೇ ಶ್ರೀಮನ್ನಾರಾಯಣ’ ಹಾಗೂ ‘ರಾಬರ್ಟ್‌’ ಕೂಡ ಅದೇ ನಿಟ್ಟಿನಲ್ಲಿ ರೆಡಿ ಆಗುತ್ತಿವೆ ಎನ್ನುವುದು ಸುದ್ದಿ.

ಬಾಲಿವುಡ್‌ನಿಂದ ಹಾರಿ ’ರಾಬರ್ಟ್’ ಗಾಗಿ ಹಾರಿ ಬಂದ ಭದ್ರಾವತಿ ಹುಡುಗಿ!

‘ಕೆಜಿಎಫ್‌ 2’ ಕೂಡ ದೊಡ್ಡ ಮಟ್ಟದಲ್ಲಿ ಬರುವ ಸಾಧ್ಯತೆ ಇದೆ. ಇದು ಪ್ರೇಕ್ಷಕರ ವಲಯದಲ್ಲಿ ಸಾಕಷ್ಟುನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿದೆ. ಇಲ್ಲಿನ ಮತ್ತೊಂದು ಇಂಟರೆಸ್ಟಿಂಗ್‌ ಸಂಗತಿ ಅಂದ್ರೆ, ಪ್ಯಾನ್‌ ಇಂಡಿಯಾ ರಿಲೀಸ್‌ ಎನ್ನುವುದು ಕನ್ನಡ ಚಿತ್ರಗಳ ಮಟ್ಟಿಗೆ ಬರೀ ಪ್ರಚಾರವೋ, ಲಾಭದಾಯಕ ಮಾರುಕಟ್ಟೆಯ ಹೊಸ ದಾರಿಯೋ ಎನ್ನುವುದು.

ಅದು ಕೆಜಿಎಫ್‌ ಎಬ್ಬಿಸಿದ ಹವಾ!

ಸ್ಯಾಂಡಲ್‌ವುಡ್‌ ಮಟ್ಟಿಗೆ ಪ್ಯಾನ್‌ ಇಂಡಿಯಾ ರಿಲೀಸ್‌ ಟ್ರೆಂಡ್‌ ಶುರುವಾಗಿದ್ದು ಇತ್ತೀಚೆಗೆ. ಅದು ‘ಕೆಜಿಎಫ್‌’ ಮೂಲಕ ಬಂದ ಬಲಾವಣೆಯ ಹೊಸ ಪರ್ವವೇ ಹೌದು. ಈ ಮೊದಲು ಸೂಪರ್‌ ಹಿಟ್‌ ಎನಿಸಿಕೊಂಡ ಕನ್ನಡ ಸಿನಿಮಾಗಳು ರಿಮೇಕ್‌ ರೂಪದಲ್ಲೋ ಅಥವಾ ಡಬ್ಬಿಂಗ್‌ ಶೈಲಿಯಲ್ಲೋ ಪರ ಭಾಷೆಗಳಿಗೂ ಹೋಗಿದ್ದು ಹೊಸತಲ್ಲ. ಆದರೆ ಕನ್ನಡ ಸಿನಿಮಾವೊಂದು ಏಕಕಾಲದಲ್ಲೇ ಬಹುಭಾಷೆಗಳಲ್ಲಿ ರಿಲೀಸ್‌ ಆಗುವಂತಹ ಸಾಹಸ ಮಾತ್ರ ಇದೇ ಮೊದಲು ಆಗಿದ್ದು.

ದರ್ಶನ್ ‘ರಾಬರ್ಟ್’ ಚೆಲುವೆ, ಏನ್ ಸಂದಾಗವ್ಳೆ!

ಅದೊಂದು ಸಕ್ಸಸ್‌ಫುಲ್‌ ಸಾಹಸವೂ ಹೌದು. ಬಹುಭಾಷೆಯಲ್ಲಿ ರಿಲೀಸ್‌ ಅಗಿದ್ದರ ಪ್ರಯತ್ನ ಗಳಿಕೆಯಲ್ಲೂ ಫಲ ತಂದುಕೊಟ್ಟಿತು. ಚಿತ್ರಮಂದಿರಗಳಲ್ಲಿನ ಪ್ರದರ್ಶನದ ಮೂಲಕವೇ ‘ಕೆಜಿಎಫ್‌’ ಪರಭಾಷೆಗಳಲ್ಲೂ ಧೂಳೆಬ್ಬಿಸಿತು. ಜತೆಗೆ ಆಯಾ ಭಾಷೆಗಳಲ್ಲಿನ ಡಿಜಿಟಲ್‌ ಹಾಗೂ ಸ್ಯಾಟಲೈಟ್‌ ರೈಟ್ಸ್‌ ಅತ್ಯಧಿಕ ಮೊತ್ತಕ್ಕೆ ಸೇಲ್‌ ಆದವು.

ಚಿತ್ರಮಂದಿರಗಳ ಕಲೆಕ್ಷನ್‌ ಜತೆಗೆ ಎಲ್ಲಾ ಭಾಷೆಗಳಲ್ಲಿನ ಡಿಜಿಟಲ್‌, ಸ್ಯಾಟಲೈಟ್‌ ರೈಟ್ಸ್‌ಗಳಿಂದ ‘ಕೆಜಿಎಫ್‌’ನ ಒಟ್ಟು ಗಳಿಕೆ ಸರಿ ಸುಮಾರು 200 ಕೋಟಿಗೂ ಅಧಿಕ. ಇದೆಲ್ಲ ಆಗಿದ್ದು ಹೊಸ ಸಾಧ್ಯತೆಯ ಮೂಲಕ.

ಕೆಜಿಎಫ್‌ ಮಾದರಿಯಲ್ಲೇ ಕುರುಕ್ಷೇತ್ರ

ಕನ್ನಡ ಚಿತ್ರರಂಗಕ್ಕೆ ‘ಕೆಜಿಎಫ್‌’ ಹೊಸ ಹುರುಪು ನೀಡಿದ ಸಿನಿಮಾ. ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾ. ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಮಾರುಕಟ್ಟೆಯ ಬಾಗಿಲು ‘ಕೆಜಿಎಫ್‌’ ಮೂಲಕವೇ ತೆರೆದುಕೊಂಡಿತು. ಹೊಸ ಸಾಧ್ಯತೆಗಳು ಗರಿಗೆದರಿದವು. ಅದರ ಮುಂದುವರಿಕೆ ಎನ್ನುವ ಹಾಗೆ ಕನ್ನಡದ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಕೂಡ ಕನ್ನಡದ ಜತೆಗೆ ತೆಲುಗು, ತಮಿಳಿನಲ್ಲೂ ತೆರೆ ಕಂಡಿತು.

ಇದು ಕೂಡ ಪಂಚ ಭಾಷೆಗಳಲ್ಲಿ ರಿಲೀಸ್‌ ಆಗುವ ಸಿದ್ಧತೆಯಲ್ಲಿತ್ತಾದರೂ, ಕೊನೆಗಳಿಗೆಯಲ್ಲಿ ಅದರ ಯೋಚನೆ ಮತ್ತು ಯೋಜನೆಗಳು ಬದಲಾದವು. ಹಿಂದಿ ಮತ್ತು ಮಲಯಾಳಂನಲ್ಲಿ ಅದು ತೆರೆಗೆ ಬರಲು ಸಾಧ್ಯವಾಗಲಿಲ್ಲ. ಆದರೂ ಕನ್ನಡ ಸೇರಿ ತೆಲುಗು ಮತ್ತು ತಮಿಳಿನಲ್ಲಿ ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಕನ್ನಡದಲ್ಲಿ ಸಕ್ಸಸ್‌ಫುಲ್‌ ಸಿನಿಮಾವೇ ಆಗಿದೆ. ಚಿತ್ರತಂಡದ ಮೂಲಗಳ ಪ್ರಕಾರ ಈಗಾಗಲೇ ಈ ಚಿತ್ರ. 100 ಕೋಟಿ ಗಳಿಕೆ ಕಂಡಿದೆ.

ಅದರಲ್ಲಿ ತೆಲುಗು, ತಮಿಳು ಅವತರಣಿಕೆಗಳಿಂದಲೂ ಬಂದ ಗಳಿಕೆಯ ಪಾಲು ಇದೆ. ಅದರ ಜತೆಗೆ ಆಯಾ ಭಾಷೆಗಳಲ್ಲಿನ ಡಿಜಿಟಲ್‌ ಹಾಗೂ ಸ್ಯಾಟಲೈಟ್‌ ಹಕ್ಕುಗಳ ಮಾರಾಟದಿಂದಲೂ ಹೆಚ್ಚಿನ ಲಾಭ ಸಿಕ್ಕಿದೆ. ಇದು ಕನ್ನಡದ ಮತ್ತಷ್ಟುಬಿಗ್‌ ಮತ್ತು ಸ್ಟಾರ್‌ ಸಿನಿಮಾಗಳ ಮೇಲೂ ಪ್ರಭಾವ ಬೀರಿದೆ.

ಆ ಮಟ್ಟಿಗೆ ಅದರ ಪ್ಯಾನ್‌ ಇಂಡಿಯಾ ರಿಲೀಸ್‌ ಪ್ರಯತ್ನವೂ ‘ಮುನಿರತ್ನ ಕುರುಕ್ಷೇತ್ರ’ದಲ್ಲೂ ಫಲಿಸಿದೆ. ಆರಂಭಿಕ ನಿರೀಕ್ಷೆ ಹುಸಿಯಾಗಿದ್ದರೂ, ಚಿತ್ರದ ನಿರ್ಮಾಣಕ್ಕೆ ಹಾಕಿದ ಬಂಡವಾಳ ನಷ್ಟವಾಗಿಲ್ಲ. ಬಹುಭಾಷೆಯ ರಿಲೀಸ್‌ ಒಂದು ಪ್ರಯತ್ನವಾಗಿ ಗಮನ ಸೆಳೆದಿದೆ.

‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಮೈಸೂರಿನ ಸಿಂಹ, ಯುವಜನತೆಯ ಸೂರ್ಯ!

ಒಂದರ ಹಿಂದೆ ಒಂದು

ಸದ್ಯಕ್ಕೀಗ ಪ್ಯಾನ್‌ ಇಂಡಿಯಾ ರಿಲೀಸ್‌ ಟ್ರೆಂಡ್‌ನಲ್ಲಿ ಹೆಚ್ಚು ಸುದ್ದಿಯಲ್ಲಿರುವುದು ಪೈಲ್ವಾನ್‌ ಚಿತ್ರ. ಕನ್ನಡ ಸೇರಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಇದು ತೆರೆಗೆ ಬರುತ್ತಿದೆ. ಕಿಚ್ಚ ಸುದೀಪ್‌ ಈ ಚಿತ್ರದ ನಾಯಕ ನಟರಾಗಿರುವುದು ದೊಡ್ಡ ಪ್ಲಸ್‌ ಪಾಯಿಂಟ್‌. ಈಗಾಗಲೇ ಅವರು ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಚಿರಪರಿಚಿತರು. ಅದು ಈ ಚಿತ್ರದ ದೊಡ್ಡ ಮಟ್ಟದ ರಿಲೀಸ್‌ಗೆ ವರವಾಗುತ್ತಿದೆ. ಅದಕ್ಕೆ ಪೂರಕವಾಗಿಯೇ ಚಿತ್ರದ ಪ್ರಚಾರ ಅದ್ಧೂರಿಯಾಗಿ ಸಾಗಿದೆ. ಎಲ್ಲಾ ಭಾಷೆಗಳಲ್ಲೂ ಅದು ದೊಡ್ಡ ಕ್ರಿಯೇಟ್‌ ಮಾಡುವ ನಿರೀಕ್ಷೆಯಿದೆ.

ಇನ್ನು ಧ್ರವ ಸರ್ಜಾ ಅಭಿನಯದ ‘ಪೊಗರು ’ ಪ್ಯಾನ್‌ ಇಂಡಿಯಾ ರಿಲೀಸ್‌ ಪ್ಲಾನ್‌ ಹಾಕಿಕೊಂಡಿದೆ. ಶಿವರಾಜ್‌ ಕುಮಾರ್‌ ಅಭಿನಯದ ‘ಭಜರಂಗಿ 2’ ಕೂಡ ಅದೇ ಹಾದಿಯಲ್ಲಿದೆ. ಇದೀಗಷ್ಟೇ ದರ್ಶನ್‌ ಅಭಿನಯದ ‘ರಾಬರ್ಟ್‌’ ಕೂಡ ಪ್ಯಾನ್‌ ಇಂಡಿಯಾ ರಿಲೀಸ್‌ ಸಿದ್ಧತೆಯಲ್ಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಒಂದರ ಹಿಂದೆ ಒಂದು ಸಿನಿಮಾಗಳು ಪ್ಯಾನ್‌ ಇಂಡಿಯಾ ರಿಲೀಸ್‌ಗೆ ರೆಡಿ ಆಗುತ್ತಿರುವುದನ್ನು ನೋಡಿದರೆ, ಕನ್ನಡ ಚಿತ್ರೋದ್ಯಮಕ್ಕೆ ಇದು ಟ್ರೆಂಡ್‌ ಆಗುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ. ಕುತೂಹಲ ಇರುವುದು ಇದರಿಂದ ಕನ್ನಡ ಸಿನಿಮಾಗಳಿಗೆ ದೊಡ್ಡ ಲಾಭ ಇದೆಯಾ ಅಂತ.

ಖಂಡಿತಾ ಲಾಭದಾಯಕ

ಪ್ಯಾನ್‌ ಇಂಡಿಯಾ ರಿಲೀಸ್‌ ಎನ್ನುವುದು ಕನ್ನಡ ಸಿನಿಮಾಗಳ ಮಟ್ಟಿಗೆ ಖಂಡಿತಾ ಲಾಭದಾಯಕ. ಅದಕ್ಕೆ ಸ್ಪಷ್ಟಸಾಕ್ಷಿ ಈಗಾಗಲೇ ತೆರೆ ಕಂಡ ಎರಡು ಚಿತ್ರಗಳು. ಸರಿಯಾದ ರೀತಿಯಲ್ಲಿ ಚಿತ್ರಗಳ ನಿರ್ಮಾಣ ಮತ್ತು ಪ್ರಚಾರ ಆಗಬೇಕು ಅಷ್ಟೇ. ಅಂತಹ ಪ್ರಯತ್ನದಲ್ಲಿ ಮೊದಲು ಸಕ್ಸಸ್‌ ಆಗಿದ್ದು ‘ಕೆಜಿಎಫ್‌’ ಚಿತ್ರ. ಅದಕ್ಕೆ ವ್ಯವಸ್ಥಿತವಾದ ಪ್ರಚಾರ ನಡೆಯಿತು. ಅದರ ನಿರ್ಮಾಣ ಹಂತದಿಂದಲೇ ಬಹುಭಾಷೆಗಳಲ್ಲಿ ಬರುತ್ತಿರುವ ಸಿನಿಮಾ ಅಂತಲೇ ಸುದ್ದಿ ಆಯಿತು. ಅದಕ್ಕೆ ಪೂರಕವಾಗಿಯೇ ಸಿನಿಮಾ ನಿರ್ಮಾಣವಾಯಿತು.

ಎಲ್ಲಾ ಹಂತದಲ್ಲೂ ಗುಣಮಟ್ಟಕಾಯ್ದುಕೊಳ್ಳಲಾಯಿತು. ಪ್ರಮೋಷನ್‌ಗೆ ಅಂತಲೇ ಚಿತ್ರತಂಡ ಎಲ್ಲಾ ಕಡೆಗೂ ಹೋಗಿ ಬಂತು. ಸಹಜವಾಗಿಯೇ ಅದು ಫಲ ನೀಡಿತು. ಕನ್ನಡಕ್ಕೂ ದೊಡ್ಡ ಮಾರುಕಟ್ಟೆಇದೆ ಎನ್ನುವುದು ತೋರಿಸಿಕೊಟ್ಟಿತು. ಈಗ ಅಷ್ಟೇ ದೊಡ್ಡ ಮಟ್ಟದಲ್ಲಿ ಪೈಲ್ವಾನ್‌ ಕೂಡ ಸುದ್ದಿ ಮಾಡುವ ನಿರೀಕ್ಷೆ ಇದೆ.

ಸುದೀಪ್‌ ಬಹುಭಾಷಾ ನಟರಾಗಿ ಪರಿಚಿತರಾಗಿವುದು ಅದಕ್ಕೆ ಕಾರಣ. ನಿರ್ಮಾಣದಲ್ಲೂ ಅಷ್ಟೇ ಎಚ್ಚರಿಕೆ ವಹಿಸಲಾಗಿದೆ. ಇದೆಲ್ಲವನ್ನು ಎಚ್ಚರಿಕೆಯಿಂದ ನೋಡಿಕೊಂಡರೆ ಕನ್ನಡ ಸಿನಿಮಾಗಳ ಪ್ಯಾನ್‌ ಇಂಡಿಯಾ ರಿಲೀಸ್‌ ಎನ್ನುವುದು ನಿಜಕ್ಕೂ ಲಾಭದಾಯಕ ಎನ್ನುತ್ತಾರೆ ನಿರ್ಮಾಪಕ ಹಾಗೂ ವಿತರಕ ಜಾಕ್‌ ಮಂಜು.

ಲಾಭದ ಅವಕಾಶಗಳೇ ಹೆಚ್ಚು

ಸಿನಿಮಾ ಎನ್ನುವುದು ಈಗ ಬರೀ ಚಿತ್ರಮಂದಿರಗಳನ್ನೇ ನಂಬಿಕೊಂಡಿಲ್ಲ. ಸ್ಯಾಟಲೈಟ್‌ ಹಕ್ಕುಗಳ ಮಾರಾಟದ ಜತೆಗೆ ಡಿಜಿಟಲ್‌ ಸೇಲ್‌ ಈಗಿರುವ ಮತ್ತೊಂದು ಹೊಸ ಮಾರುಕಟ್ಟೆ. ಪ್ಯಾನ್‌ ಇಂಡಿಯಾ ರಿಲೀಸ್‌ ಪ್ಲಾನ್‌ ಮೂಲಕ ಬರುವ ಯಾವುದೇ ಸಿನಿಮಾಗಳಿಗೆ ಈ ಮೂರು ಅವಕಾಶಗಳು ಈಗ ಲಭ್ಯ. ಅದೆಲ್ಲವೂ ಸಿಗಬೇಕಾದರೆ ಗುಣಮಟ್ಟಮುಖ್ಯ. ಈ ಪೈಕಿ ಅತೀ ಮುಖ್ಯ ಎನ್ನುವುದು ಚಿತ್ರದ ಕಂಟೆಂಟ್‌.ಫ್ಯಾನ್‌ ಇಂಡಿಯಾ ರಿಲೀಸ್‌ ಅನ್ನೋದು ಸಿನಿಮಾ ಅಲ್ಲ, ಅದು ಕಂಟೆಂಟ್‌.

ಯುನಿವರ್ಷಲ್‌ ಕಂಟೆಂಟ್‌ ಇರುವಂತಹ ಯಾವುದೇ ಸಿನಿಮಾವು ಬಹುಭಾಷೆಗಳಲ್ಲಿ ಬರಬಹುದು. ಯಾಕಂದ್ರೆ ಇವತ್ತು ಪ್ರೇಕ್ಷಕರ ಮನಸ್ಥಿತಿ ಬದಲಾಗಿದೆ. ಯಾವ ಸ್ಟಾರ್‌ ಸಿನಿಮಾ ಎನ್ನುವುದಕ್ಕಿಂತ ಆ ಸಿನಿಮಾದ ಏನು ಎನ್ನುವುದರ ಮೇಲೆ ನೋಡಬೇಕೋ , ಬೇಡವೋ ಎನ್ನುವುದನ್ನು ಡಿಸೈಡ್‌ ಮಾಡುತ್ತಿದ್ದಾರೆ.

ಅದಕ್ಕೆ ಪೂರಕವಾಗಿಯೇ ನಾನು ‘ಭಜರಂಗಿ 2’ ಸಿನಿಮಾ ಮಾಡುತ್ತಿದ್ದೇನೆ. ಇದು ಯಾರು ಮುಟ್ಟದ ಸೆಬ್ಜೆಕ್ಟ್. ಫ್ಯಾಮಿಲಿ, ಲವ್‌. ಆ್ಯಕ್ಷನ್‌ ಎನ್ನುವ ಎಲಿಮೆಂಟ್ಸ್‌ಗಿಂತ ಎಲ್ಲಾ ತರಹದ ಆಡಿಯನ್ಸ್‌ಗೆ ಕನೆಕ್ಟ್ ಆಗುವಂತಹ ಕತೆ. ಜತೆಗೆ ಬಹುತೇಕ ಹೊಸ ಕಲಾವಿದರು ಇಲ್ಲಿದ್ದಾರೆ. ಪ್ರೇಕ್ಷಕರಿಗೂ ಅವರೆಲ್ಲ ಪ್ರೆಶ್‌ ಆಗಿ ಕಾಣಿಸಿಕೊಳ್ಳುತ್ತಾರೆ. ಈ ಧೈರ್ಯದಿಂದಲೇ ನಿರ್ಮಾಪಕರು ಫ್ಯಾನ್‌ ಇಂಡಿಯಾ ಪ್ಲಾನ್‌ ಮಾಡಿಕೊಂಡಿದ್ದಾರೆನ್ನುತ್ತಾರೆ ನಿರ್ದೇಶಕ ಹರ್ಷ.

- ದೇಶಾದ್ರಿ ಹೊಸ್ಮನೆ