MBBS ಪರೀಕ್ಷೆಗಳೇ ಮೊದಲ ಆದ್ಯತೆಯಾಗಿದ್ದವು. ನನ್ನ ಭಾಗದ ಚಿತ್ರೀಕರಣ ಮುಗಿದ ತಕ್ಷಣವೇ ಪ್ರಾಯೋಗಿಕ ಪರೀಕ್ಷೆಗಳಿಗೆ ತೆರಳುತ್ತಿದ್ದೆ. ಮತ್ತೆ ಸಮಯ ಸಿಕ್ಕಾಗ ಸೆಟ್‌ಗೆ ಹಿಂದಿರುಗಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೆ ಎಂದರು ಶ್ರೀಲೀಲಾ.

ಸಿನಿಮಾ ಮತ್ತು ವೈದ್ಯಕೀಯ ಶಿಕ್ಷಣ ಎರಡನ್ನೂ ಸಮತೋಲನದಿಂದ ನಿಭಾಯಿಸಿ ಯಶಸ್ಸು ಸಾಧಿಸಿರುವ ಕಿಸ್ ನಟಿ ಶ್ರೀಲೀಲಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕನ್ನಡ, ತೆಲುಗು ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ, ಇತ್ತೀಚೆಗಷ್ಟೇ ತಮ್ಮ ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಟನೆಯ 'ಜೂನಿಯರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಸಿನಿಮಾ ಮತ್ತು ವೈದ್ಯಕೀಯ ಶಿಕ್ಷಣವನ್ನು ಒಟ್ಟಿಗೆ ಹೇಗೆ ನಿಭಾಯಿಸಿದರು ಎಂಬ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿನ್ನೆ ವೈದ್ಯರ ದಿನದ ಅಂಗವಾಗಿ ಮಾತನಾಡಿದ ಶ್ರೀಲೀಲಾ, ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ವೈದ್ಯೆಯಾಗುವ ತಮ್ಮ ಕನಸನ್ನು ಎಂದಿಗೂ ಕೈಬಿಡಲಿಲ್ಲ ಎಂದು ಹೇಳಿದರು. ಸಿನಿಮಾ ಸೆಟ್ ಮತ್ತು ಪರೀಕ್ಷೆಗಳ ನಡುವೆ ಸಮಯವನ್ನು ಸಮರ್ಪಕವಾಗಿ ಹಂಚಿಕೊಂಡು, ಎರಡಕ್ಕೂ ಸಮಾನ ಆದ್ಯತೆ ನೀಡಿದ್ದಾಗಿ ಅವರು ವಿವರಿಸಿದರು.

'ವೈದ್ಯೆಯಾಗುವುದು ನನ್ನ ಬಾಲ್ಯದ ಕನಸು. ವೈದ್ಯಕೀಯ ಶಿಕ್ಷಣದ ಬಗ್ಗೆ ನನಗೆ ಅಪಾರ ಆಸಕ್ತಿ ಇತ್ತು. 'ವೈರಲ್ ವಯ್ಯಾರಿ' ಹಾಡಿನ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿಯೂ ನನ್ನ ಎಂಬಿಬಿಎಸ್ ಪರೀಕ್ಷೆಗಳೇ ಮೊದಲ ಆದ್ಯತೆಯಾಗಿದ್ದವು. ನನ್ನ ಭಾಗದ ಚಿತ್ರೀಕರಣ ಮುಗಿದ ತಕ್ಷಣವೇ ಪ್ರಾಯೋಗಿಕ ಪರೀಕ್ಷೆಗಳಿಗೆ ತೆರಳುತ್ತಿದ್ದೆ. ಮತ್ತೆ ಸಮಯ ಸಿಕ್ಕಾಗ ಸೆಟ್‌ಗೆ ಹಿಂದಿರುಗಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೆ. ಇದು ಅಷ್ಟು ಸುಲಭವಾಗಿರಲಿಲ್ಲ. ಆದರೆ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸುವುದು ನನ್ನ ಜೀವನದ ಮಹತ್ವದ ಗುರಿಯಾಗಿತ್ತು' ಎಂದು ಶ್ರೀಲೀಲಾ ಹೇಳಿದರು.

'ವೈರಲ್ ವಯ್ಯಾರಿ' ಹಾಡು ಕನ್ನಡ–ತೆಲುಗು ದ್ವಿಭಾಷಾ ರೊಮ್ಯಾಂಟಿಕ್ ಎಂಟರ್‌ಟೈನರ್ 'ಜೂನಿಯರ್' ಚಿತ್ರದ ವಿಶೇಷ ಆಕರ್ಷಣೆಯಾಗಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿರುವ ಈ ಹಾಡಿನಲ್ಲಿ ಕಿರೀಟಿ ರೆಡ್ಡಿ ಮತ್ತು ಶ್ರೀಲೀಲಾ ಅವರ ಜೋಡಿಯ ಅದ್ಭುತ ನೃತ್ಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ಅನೇಕ ಯುವಕರಿಗೆ ಸ್ಫೂರ್ತಿ

ರಾಧಾ ಕೃಷ್ಣ ರೆಡ್ಡಿ ಕಥೆ ಬರೆದು ನಿರ್ದೇಶಿಸಿರುವ 'ಜೂನಿಯರ್' ಚಿತ್ರವನ್ನು ಸಾಯಿ ಕೊರ್ರಪಾಟಿ ಅವರು ವಾರಾಹಿ ಚಲನ ಚಿತ್ರಂ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದರು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾದಲ್ಲಿ ಜೆನಿಲಿಯಾ ಡಿಸೋಜಾ ಮತ್ತು ರವಿಚಂದ್ರನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಜುಲೈ 18, 2025ರಂದು ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಪ್ರದರ್ಶನ ಕಂಡಿತ್ತು. ಇನ್ನು ಸಿನಿಮಾ ವೃತ್ತಿಜೀವನದ ಜೊತೆಗೆ ವೈದ್ಯಕೀಯ ಶಿಕ್ಷಣವನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಶ್ರೀಲೀಲಾ ಅವರ ಈ ಸಾಧನೆ, ಅನೇಕ ಯುವಕರಿಗೆ ಸ್ಫೂರ್ತಿಯಾಗುವಂತಿದೆ.