ಗೋವಾದ ಪಣಜಿಯಲ್ಲಿ ನಡೆದ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಉದ್ಘಾಟನಾ ಸಮಾರಂಭದಲ್ಲಿ ನಟಿ ಸಾಯಿ ಪಲ್ಲವಿ ತಮ್ಮ ಸಾಂಪ್ರದಾಯಿಕ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಖ್ಯಾತ ನಟಿ ಸಾಯಿ ಪಲ್ಲವಿ ತಮ್ಮ ಸಹಜ ಸೌಂದರ್ಯ ಹಾಗೂ ಸರಳವಾದ ಸಾಂಪ್ರದಾಯಿಕ ಲುಕ್ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಗೋವಾದ ಪಣಜಿಯಲ್ಲಿ ನಡೆದ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI)ದ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಿಂಟ್ ಗ್ರೀನ್ ಬಣ್ಣದ ರೇಷ್ಮೆ ಸೀರೆಯುಟ್ಟು ಕಂಗೊಳಿಸಿದ್ದಾರೆ. ಚಿನ್ನದ ಜರಿಯ ಅಂಚು ಹಾಗೂ ಸುಂದರವಾದ ವಿನ್ಯಾಸಗಳಿಂದ ಕೂಡಿದ್ದ ಸೀರೆಯಲ್ಲಿ ಸಾಯಿ ಪಲ್ಲವಿ ಮಿಂಚಿದ್ದು, ಅವರ ಸಾಂಪ್ರದಾಯಿಕ ಲುಕ್ ರೆಡ್ ಕಾರ್ಪೆಟ್ನಲ್ಲಿ ವಿಶೇಷ ಆಕರ್ಷಣೆಯಾಯಿತು.
ಸೀರೆಯೊಂದಿಗೆ ಸಾಯಿ ಪಲ್ಲವಿ ಕ್ಲಾಸಿಕ್ ಗೋಲ್ಡ್ ಟೆಂಪಲ್ ಜ್ಯುವೆಲ್ಲರಿಯನ್ನು ಧರಿಸಿದ್ದರು. ಸದಾ ಕಾಣಿಸುವ ಅವರ ಆಪ್ತ ನಗು ಹಾಗೂ ಸರಳ ಅಲಂಕಾರ ನಟಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಯಾವುದೇ ಆಡಂಬರವಿಲ್ಲದೆ ತಮ್ಮದೇ ಆದ ಸ್ಟೈಲ್ನಲ್ಲಿ ಮಿಂಚಿದ ಸಾಯಿ ಪಲ್ಲವಿ ಅವರ ಲುಕ್ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
'ಸ್ಟೋರೀಸ್ ವಿದೌಟ್ ಬಾರ್ಡರ್ಸ್' ಥೀಮ್ನಲ್ಲಿ ಚಿತ್ರೋತ್ಸವಕ್ಕೆ ಚಾಲನೆ
ಈ ವರ್ಷದ 'ಸ್ಟೋರೀಸ್ ವಿದೌಟ್ ಬಾರ್ಡರ್ಸ್' (ಗಡಿಗಳಿಲ್ಲದ ಕಥೆಗಳು) ಎಂಬ ಏಕತೆಯ ಸಂದೇಶ ಸಾರುವ ಥೀಮ್ನೊಂದಿಗೆ ಒಂಬತ್ತು ದಿನಗಳ ಚಲನಚಿತ್ರೋತ್ಸವಕ್ಕೆ ನವೆಂಬರ್ 20ರಂದು ಚಾಲನೆ ನೀಡಲಾಯಿತು. ಗೋವಾದ ಪಣಜಿಯಲ್ಲಿರುವ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ಚಿತ್ರ ನಿರ್ಮಾಪಕರು ಹಾಗೂ ಸಿನಿಮಾಗಳನ್ನು ಮೆಚ್ಚುವ ಪ್ರೇಕ್ಷಕರ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಚಲನಚಿತ್ರೋತ್ಸವಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಇಂತಹ ವೇದಿಕೆಗಳು ಕಲಾವಿದರಿಗೆ ಸ್ಫೂರ್ತಿ ನೀಡುವುದರ ಜೊತೆಗೆ, ಅರ್ಥಪೂರ್ಣ ಸಿನಿಮಾಗಳನ್ನು ಮಾಡುವ ನಿಟ್ಟಿನಲ್ಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತವೆ ಎಂದು ಹೇಳಿದರು.
ಸ್ಟಾರ್ ನಟ-ನಟಿಯರ ಸಮಾಗಮ
IFFI ಉದ್ಘಾಟನಾ ಸಮಾರಂಭದಲ್ಲಿ ಸಾಯಿ ಪಲ್ಲವಿ ಮಾತ್ರವಲ್ಲದೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್, ಶ್ರದ್ಧಾ ಕಪೂರ್ ಹಾಗೂ ನಟ ರವಿ ಕಿಶನ್ ಕೂಡ ಭಾಗವಹಿಸಿದ್ದರು. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಚಿತ್ರೋತ್ಸವದ ನಿರ್ದೇಶಕ ಆಶುತೋಷ್ ಗೋವಾರಿಕರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
86 ದೇಶಗಳ 150ಕ್ಕೂ ಹೆಚ್ಚು ಸಿನಿಮಾಗಳ ಪ್ರದರ್ಶನ
ಇನ್ನು ನವೆಂಬರ್ 20ರಿಂದ 28ರವರೆಗೆ ನಡೆಯಲಿರುವ ಈ ಬಾರಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶ್ವದ 86 ದೇಶಗಳ 150ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇದರ ಜೊತೆಗೆ ಭಾರತೀಯ ಪನೋರಮಾ ವಿಭಾಗದಲ್ಲಿ 76 ಭಾರತೀಯ ಚಿತ್ರಗಳೂ ಪ್ರದರ್ಶನಕ್ಕೆ ಸಿದ್ಧವಾಗಿವೆ. ಜಾಗತಿಕ ಸಿನಿಮಾ ಸಂಭ್ರಮಕ್ಕೆ ಸಾಂಪ್ರದಾಯಿಕ ಸೊಬಗಿನ ಮೆರುಗು ನೀಡಿದ ಸಾಯಿ ಪಲ್ಲವಿ, ತಮ್ಮ ಸರಳವಾದ ಉಡುಗೆ ಹಾಗೂ ಸಹಜ ನಗುವಿನ ಮೂಲಕ IFFI ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಗಳಲ್ಲಿ ಒಬ್ಬರಾಗಿ ಗಮನ ಸೆಳೆದಿದ್ದಾರೆ.
















