ಅಮರನ್ ಸಿನಿಮಾದಲ್ಲಿ ಸಾಯಿ ಪಲ್ಲವಿ ಮಲಯಾಳಂ ಮಾತನಾಡಿದ ಶೈಲಿಗೆ ವ್ಯಕ್ತವಾಗಿದ್ದ ಟೀಕೆಗಳಿಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ನಿರ್ದೇಶಕ ರಾಜ್ಕುಮಾರ್ ಪೆರಿಯಸ್ವಾಮಿ ಸೂಚನೆಯಂತೆ ಆ ರೀತಿ ಮಾತನಾಡಿದ್ದಾಗಿ ತಿಳಿಸಿದ್ದಾರೆ.
ಬ್ಲಾಕ್ಬಸ್ಟರ್ ಸಿನಿಮಾ ‘ಅಮರನ್’ನಲ್ಲಿ ಮಲಯಾಳಂ ಸಂಭಾಷಣೆಗಳನ್ನು ವಿಭಿನ್ನವಾಗಿ ಉಚ್ಚರಿಸಿದ್ದಕ್ಕೆ ವ್ಯಕ್ತವಾಗಿದ್ದ ಟೀಕೆಗಳಿಗೆ ನಟಿ ಸಾಯಿ ಪಲ್ಲವಿ ಇದೀಗ ಪ್ರತಿಕ್ರಿಯಿಸಿದ್ದಾರೆ. ಸಿನಿಮಾದಲ್ಲಿ ತಾವು ಬಳಸಿದ ಮಲಯಾಳಂ ಉಚ್ಚಾರಣೆ ಉದ್ದೇಶಪೂರ್ವಕವಾಗಿತ್ತು. ಅದು ನಿರ್ದೇಶಕ ರಾಜ್ಕುಮಾರ್ ಪೆರಿಯಸ್ವಾಮಿ ಅವರ ಸೂಚನೆಯಂತೆ ಮಾಡಿದ್ದ ಪ್ರಯೋಗ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ಸಾರ್ವಜನಿಕ ಸಂವಾದವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ಸಾಯಿ ಪಲ್ಲವಿ, ತಮಗೆ ಮಲಯಾಳಂ ಭಾಷೆಯನ್ನು ಸರಾಗವಾಗಿ ಮಾತನಾಡಲು ಬರುತ್ತದೆ ಎಂದು ತಿಳಿಸಿದ್ದಾರೆ. ‘ಅಮರನ್’ ಚಿತ್ರದ ಚಿತ್ರೀಕರಣದ ಮೊದಲ ದಿನವೇ ತಮ್ಮ ಪಾತ್ರವಾದ ಇಂದು ರೆಬೆಕ್ಕಾ ವರ್ಗೀಸ್ಗೆ ಹೆಚ್ಚು ಸಹಜತೆ ನೀಡುವ ಉದ್ದೇಶದಿಂದ ಸರಿಯಾದ ಮಲಯಾಳಂನಲ್ಲಿ ಸಂಭಾಷಣೆ ಹೇಳಲು ಕಲಿಯುವುದಾಗಲಿ, ಅಥವಾ ಶುದ್ಧ ತಮಿಳಿನಲ್ಲೇ ಮಾತನಾಡುವುದಾಗಲಿ ಮಾಡಬಹುದು ಎಂದು ನಿರ್ದೇಶಕರಿಗೆ ಹೇಳಿದ್ದರಂತೆ.
ತಮಿಳು ಭಾಷೆಯ ಸಿನಿಮಾ
ಆದರೆ, ನಿರ್ದೇಶಕ ರಾಜ್ಕುಮಾರ್ ಪೆರಿಯಸ್ವಾಮಿ ಇದಕ್ಕೆ ಒಪ್ಪಲಿಲ್ಲ. ಅದರ ಹಿಂದೆ ಒಂದು ನಿರ್ದಿಷ್ಟ ಸೃಜನಾತ್ಮಕ ಉದ್ದೇಶವಿತ್ತು. ‘ಅಮರನ್’ ಮುಖ್ಯವಾಗಿ ತಮಿಳು ಭಾಷೆಯ ಸಿನಿಮಾ ಆಗಿರುವುದರಿಂದ, ಚಿತ್ರದ ಪಾತ್ರ ಬೇರೆ ರಾಜ್ಯದಿಂದ ಬಂದವಳು ಎಂಬ ಭಾವನೆ ತಮಿಳು ಪ್ರೇಕ್ಷಕರಿಗೆ ಆರಂಭದಲ್ಲೇ ಮೂಡಬೇಕು ಎಂಬುದು ನಿರ್ದೇಶಕರ ಆಶಯವಾಗಿತ್ತು. ಜೊತೆಗೆ, ಆಕೆ ಅನುಭವಿಸುವ ಭೀಕರ ನಷ್ಟದ ನೋವು ಪ್ರೇಕ್ಷಕರಿಗೆ ತಲುಪಬೇಕು ಮತ್ತು ಆಕೆಯ ಮಾತುಗಳು ಸುಲಭವಾಗಿ ಅರ್ಥವಾಗಬೇಕು ಎಂಬ ಉದ್ದೇಶವೂ ಇತ್ತು.
ಹೀಗಾಗಿ, ಮಲಯಾಳಂ ಮಾತನಾಡುವಾಗ ಸ್ಥಳೀಯ ಭಾಷಾ ಸೊಗಡನ್ನು ತುಸು ಹೆಚ್ಚಾಗಿ, ವಿಭಿನ್ನ ಶೈಲಿಯಲ್ಲಿ ಬಳಸುವಂತೆ ಸಾಯಿ ಪಲ್ಲವಿಗೆ ನಿರ್ದೇಶಕರು ಸೂಚಿಸಿದ್ದರು. ಅದರಂತೆ ನಟಿ ಸಂಭಾಷಣೆಗಳನ್ನು ನಿರ್ವಹಿಸಿದ್ದರು. ಆದರೆ, ಈ ನಿರ್ಧಾರ ಕೇರಳದ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು. ಸಾಯಿ ಪಲ್ಲವಿ ಮಲಯಾಳಂ ಮಾತನಾಡಿದ ರೀತಿಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವು ಮಲಯಾಳಿ ಪ್ರೇಕ್ಷಕರಿಗೆ ಆ ಉಚ್ಚಾರಣೆ ಮತ್ತು ಸಂಭಾಷಣೆ ಹೇಳಿದ ರೀತಿ ಇಷ್ಟವಾಗಿರಲಿಲ್ಲ.
ಹೇಗಿರಬೇಕು ಎಂಬ ಚರ್ಚೆ
ಇನ್ನು ಕೆಲವರು, ಇತರ ಭಾಷೆ ಮತ್ತು ಭಾಷಿಕರನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಚಿತ್ರಿಸುವ ಪ್ರವೃತ್ತಿ ಕೆಲವು ತಮಿಳು ಚಿತ್ರಗಳಲ್ಲಿ ಕಾಣಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ, ಈ ವಿವಾದ ಕೇವಲ ಸಾಯಿ ಪಲ್ಲವಿ ಅವರ ಅಭಿನಯಕ್ಕೆ ಸೀಮಿತವಾಗದೆ, ತಮಿಳು ಸಿನಿಮಾಗಳಲ್ಲಿ ಇತರ ಭಾಷೆಗಳ ಪ್ರಾತಿನಿಧ್ಯ ಹೇಗಿರಬೇಕು ಎಂಬ ಚರ್ಚೆಗೂ ಕಾರಣವಾಗಿತ್ತು.
ಈ ಬಗ್ಗೆ ನಗುತ್ತಲೇ ಮಾತನಾಡಿದ ಸಾಯಿ ಪಲ್ಲವಿ, ತಮ್ಮ ಮಲಯಾಳಂ ಭಾಷಾ ಕೌಶಲದಿಂದ ಕೇರಳದ ಪ್ರೇಕ್ಷಕರನ್ನು ಮೆಚ್ಚಿಸಬಹುದು ಎಂದುಕೊಂಡಿದ್ದರಂತೆ. ಆದರೆ, ತಾವು ಆ ರೀತಿ ಏಕೆ ಮಾತನಾಡಿದೆವು ಎಂದು ಹಲವರು ಪ್ರಶ್ನಿಸಿದ್ದನ್ನು ಕಂಡು ಅಚ್ಚರಿಯಾಗಿದೆ ಎಂದು ಹೇಳಿದ್ದಾರೆ. ಕೊನೆಯಲ್ಲಿ ಈ ವಿವಾದಕ್ಕೆ ನಿರ್ದೇಶಕರೇ ಕಾರಣ ಎಂಬುದನ್ನು ತಮಾಷೆಯಾಗಿ ಹೇಳಿದ ಅವರು, 'ಹಾಗಾಗಿ, ಇದು ನನ್ನ ತಪ್ಪಲ್ಲ. ಯಾರನ್ನಾದರೂ ದೂಷಿಸಬೇಕೆಂದರೆ ನಿರ್ದೇಶಕರನ್ನೇ ದೂಷಿಸಿ!' ಎಂದು ನಗುತ್ತಾ ಪ್ರತಿಕ್ರಿಯಿಸಿದ್ದಾರೆ.












