ಈ ವಿಚಾರಣೆಯ ನಂತರ, ದರ್ಶನ್ ಸೇರಿದಂತೆ ಜಾಮೀನು ಪಡೆದ ಎಲ್ಲ 7 ಆರೋಪಿಗಳ ಭವಿಷ್ಯ ಪ್ರಶ್ನಾರ್ಹವಾಗಿದೆ. ಸುಪ್ರೀಂ ಕೋರ್ಟ್ ಈ ಸಂಬಂಧ ಒಂದು ವಾರದ ಸಮಯ ನೀಡಿದ್ದು, ಬಳಿಕ ಅಂತಿಮ ಆದೇಶ ನೀಡಲಾಗುತ್ತದೆ. ಮುಂದೆ ಈ ಕೇಸ್ ತೀರ್ಪು ಏನಿರಬಹುದು ಎಂಬ ಕುತೂಹಲ ಮನೆಮಾಡಿದೆ.
ಸ್ಯಾಂಡಲ್‌ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ (Ramya) ಅವರು ಫೋಸ್ಟ್ ಮಾಡಿದ್ದಾರೆ. ಬಹಳಷ್ಟು ಜನರು ಊಹೆ ಮಾಡಿದಂತೆ, ಇಂದು ನಟ ದರ್ಶನ್ ತೂಗುದೀಪ (Darshan Thoogudeepa) ಕೇಸ್ ಬಗ್ಗೆ ಸುಪ್ರಿಂ ಕೋರ್ಟ್‌ನಲ್ಲಿ ವಿಚಾರಣೆ ಆಗಿ ಸುದ್ದಿ ಹೊರಬರುತ್ತಿದ್ದಂತೆ ನಟಿ ರಮ್ಯಾ ಅವರು ಅದನ್ನು ಸ್ವಾಗತಿಸಿದ್ದಾರೆ. ಈ ಮೊದಲು ಕೂಡ ನಟಿ ರಮ್ಯಾ ಅವರು ನಟ ದರ್ಶನ್ ಅವರಿಗೆ ಶಿಕ್ಷೆ ಆಗಬೇಕು, ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದರು. ಈಗ ಕೂಡ ಅದೇ ಧಾಟಿಯಲ್ಲಿ ರಮ್ಯಾ ಮಾತನಾಡಿದ್ದು, ಪೋಸ್ಟ್ ಸ್ವಲ್ಪ ವಿಭಿನ್ನವಾಗಿದೆ. ಹಾಗಿದ್ದರೆ ನಟಿ ರಮ್ಯಾ ಹೇಳಿದ್ದೇನು ನೋಡಿ..
ರೇಣುಕಾಸ್ವಾಮಿ ಪರ ಧ್ವನಿಯೆತ್ತಿದ ರಮ್ಯಾ:
ಹೌದು, ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ನಡೆದ ವಿಚಾರಣೆಯನ್ನ ನೋಡಿ, ನಟಿ ರಮ್ಯಾ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದು, 'ಸುಪ್ರೀಂ ಕೋರ್ಟ್ ಭಾರತದ ಸಾಮಾನ್ಯ ಜನರ ಪಾಲಿಗೆ ಆಶಾಕಿರಣ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇದೆ ಅಂತ ಬರೆದುಕೊಂಡಿದ್ದಾರೆ. ಒನ್ಸ್ ಅಗೈನ್ ದರ್ಶನ್ಗೆ ಶಿಕ್ಷೆಯಾಗಲಿ ಅಂತ ಬಹಿರಂಗವಾಗಿ ಧ್ವನಿ ಎತ್ತಿದ್ದಾರೆ.' ಇದೀಗ ನಟಿ ರಮ್ಯಾ ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇಂದು ಆಗಿದ್ದೇನು?
ನಟ ದರ್ಶನ್ ಸೇರಿ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ ಜಾಮೀನು ಆದೇಶದ ಕುರಿತು ಸುಪ್ರೀಂ ಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಸಾಕ್ಷ್ಯಾಧಾರಗಳಿಗಿಂತ ಹೆಚ್ಚು ವಿಮರ್ಶೆ ಇಲ್ಲದೆ ಜಾಮೀನು ನೀಡಿರುವ ಹೈಕೋರ್ಟ್ ತೀರ್ಪು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ನ ಪರ್ದಿವಾಲಾ ಪೀಠ ತಿಳಿಸಿದೆ. ಸಾಕ್ಷ್ಯಾಧಾರಗಳ ಲಭ್ಯತೆ ಇದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೇ ಜಾಮೀನು ನೀಡಲಾಗಿದೆ ಎಂಬಾರ್ಥದಲ್ಲಿ ಹೈಕೋರ್ಟ್ ಜಾಮೀನು ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿಕಾರಿದೆ.
ಸುಪ್ರೀಂ ಕೋರ್ಟ್‌ನಲ್ಲಿ 1.40 ನಿಮಿಷಗಳ ಕಾಲ ನಡೆದ ವಿಚಾರಣೆಯಲ್ಲಿ, ಪೀಠವು ಪ್ರಕರಣದ ಸಾಕ್ಷ್ಯಾಧಾರಗಳು, ಎಫ್‌ಎಸ್‌ಎಲ್ ವರದಿ, ಸ್ಥಳ ಪರಿಶೀಲನೆ ವರದಿಗಳು ಎಲ್ಲವೂ ಸ್ಪಷ್ಟವಾಗಿರುವಾಗ, ಹೈಕೋರ್ಟ್ ಯಾಕೆ ಇಂತಹ ತೀರ್ಪು ನೀಡಿತು ಎಂಬ ಪ್ರಶ್ನೆ ಎತ್ತಿದೆ. ಅನೇಕ ಕರೆ ವಿವರಗಳು, ಪ್ರಮುಖ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, ಹಾಗೂ ಇತರ ಮೌಲ್ಯಮಾಪನಗಳ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟತೆ ಕೇಳಿದೆ. ದರ್ಶನ್ (ಎ1) ಹಾಗೂ ಎರಡನೇ (ಎ2) ಆರೋಪಿ ಪವಿತ್ರಾ ಗೌಡಗೆ ಇರುವ ಸಂಬಂಧವನ್ನು ಪ್ರಶ್ನೆ ಮಾಡಲಾಗಿದೆ. ಅವರ ನಡುವೆ ನಡೆದ ಕರೆ ಸಂವಹನದ ವಿವರಗಳನ್ನು ಕೋರಿ, ತನಿಖಾ ವರದಿಗಳನ್ನು ಮತ್ತೆ ಪರಿಶೀಲಿಸಲು ಸೂಚಿಸಲಾಗಿದೆ.
ಹೈಕೋರ್ಟ್ ಜಾಮೀನು ಆದೇಶಕ್ಕೆ ತೀವ್ರ ಅಸಮಾಧಾನ:
ಸಂಪೂರ್ಣ ವಾದ ಆಲಿಸಿದ ನ್ಯಾ. ಪರ್ದೀವಾಲಾ ನೇತೃತ್ವದ ಸುಪ್ರೀಂ ಪೀಠ, ಹೈಕೋರ್ಟ್ ಜಾಮೀನು ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಸಿದೆ. ಹೈಕೋರ್ಟ್ 7 ಆರೋಪಿಗಳನ್ನು ನಿರ್ದೋಷಿ ಎಂದು ನಿರ್ಧರಿಸಿದೆಯೇ ?. ಎಲ್ಲಾ ಜಾಮೀನು ಆದೇಶಗಳಲ್ಲಿ ಹೈಕೋರ್ಟ್ ಹೀಗೆ ಹೇಳುತ್ತಾ? ಹೈಕೋರ್ಟ್ ನ್ಯಾಯಮೂರ್ತಿ ಹೀಗೆ ತಪ್ಪು ಮಾಡಬಹುದೇ ಎಂದು ಪ್ರಶ್ನಿಸಿದೆ. ಹೀಗಾಗಿ ದರ್ಶನ್ ಗ್ಯಾಂಗ್ ಬೇಲ್ ಕ್ಯಾನ್ಸಲ್ ಆಗುತ್ತಾ ಎಂಬ ಪ್ರಶ್ನೆ ಎದ್ದಿದ್ದು, ಮುಂದಿನ ವಾರ ಈ ಪ್ರಶ್ನೆಗೆ ಉತ್ತರ ತಿಳಿಯಲಿದೆ.
ದರ್ಶನ್ ಕೇಸ್ ಜಾಮೀನು ಪ್ರಕರಣದ ಹಿನ್ನೆಲೆ:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್, ಆತನ ಸ್ನೇಹಿತೆ ಪವಿತ್ರಾ ಗೌಡ ಸೇರಿ 17 ಜನರು ಜೈಲು ಸೇರಿದ್ದರು. ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಿದೆ. ಆದರೆ, ಪ್ರಕರಣದ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಎಲ್ಲ ಆರೋಪಿಗಳಿಗೂ ಜಾಮೀನು ನೀಡಿತ್ತು. ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನೆ ಮಾಡಿದ್ದ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಜಾಮೀನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಇದೀಗ ದರ್ಶನ್ ಸಿನಿಮಾ ಶೂಟಿಂಗ್‌ಗೆ ವಿದೇಶಕ್ಕೆ ತೆರಳಿದ್ದಾರೆ.
ಇನ್ನು ಈ ಹಿಂದೆ ಜು. 17ರಂದು ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಬೇಲ್ ಅರ್ಜಿ ವಿಚಾರಣೆ ನಡೆದಿತ್ತು. ಬೇಲ್ ನೀಡಲು ಹೈಕೋರ್ಟ್ ಕಾರಣಗಳು ಸಮಂಜಸವಾಗಿಲ್ಲ ಎಂದು ಮುಂದಿನ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿಕೆ ಮಾಡಿತ್ತು. ಜು.22ರಂದು ದರ್ಶನ್ ಪರ ಕಪಿಲ್ ಸಿಬಲ್ ವಾದಿಸಬೇಕಿತ್ತು. ಆದರೆ ಕಪಿಲ್ ಸಿಬಲ್ ಬಾರದೇ ಎರಡು ದಿನ ಕಾಲಾವಕಾಶ ಕೇಳಲಾಗಿತ್ತು. ದರ್ಶನ್ ಪರ ವಕೀಲರಾಗಿದ್ದ ಕಪಿಲ್ ಸಿಬಲ್ ವಾದ ಮಂಡನೆ ಮಾಡದೇ ಇರೋದು ಕೂಡ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜು. 17ರಂದು ಸರ್ಕಾರದ ವಾದ ಮುಗಿದಿದ್ದು, ದರ್ಶನ್ ಪರ ವಕೀಲರು ಇಂದು ಪ್ರತಿವಾದ ಮಂಡಿಸಿದ್ದರು. ಬೇಲ್ ರದ್ದಾಗುವ ಭೀತಿ ಆವರಿಸಿ ಕೊನೆ ಗಳಿಗೆಯಲ್ಲಿ ದರ್ಶನ್ ವಕೀಲರ ಬದಲಾವಣೆಯಾಗಿದ್ದು ಸಿದ್ದಾರ್ಥ್ ದಾವೆ ವಾದ ಮಂಡಿಸಿದ್ದರು.
ಜಾಮೀನು ಭವಿಷ್ಯ ಅನಿಶ್ಚಿತತೆ:
ಈ ವಿಚಾರಣೆಯ ನಂತರ, ದರ್ಶನ್ ಸೇರಿದಂತೆ ಜಾಮೀನು ಪಡೆದ ಎಲ್ಲ 7 ಆರೋಪಿಗಳ ಭವಿಷ್ಯ ಪ್ರಶ್ನಾರ್ಹವಾಗಿದೆ. ಸುಪ್ರೀಂ ಕೋರ್ಟ್ ಈ ಸಂಬಂಧ ಒಂದು ವಾರದ ಸಮಯ ನೀಡಿದ್ದು, ಬಳಿಕ ಅಂತಿಮ ಆದೇಶ ನೀಡಲಾಗುತ್ತದೆ. ಸುಪ್ರೀಂ ಕೋರ್ಟ್ ಇಡೀ ವಿಚಾರಣೆಯ ಮರು ಪರಿಶೀಲನೆ ನಡೆಸುತ್ತಿದೆ. ಮುಂದೆ ಈ ಕೇಸ್ ತೀರ್ಪು ಏನಿರಬಹುದು ಎಂಬ ಕುತೂಹಲ ಮನೆಮಾಡಿದೆ.
