ಕೋವಿಡ್ನಿಂದ ಪತಿ ಸಾವಿನ ಬಳಿಕ ಎರಡನೆಯ ಮದುವೆಯಿಂದಾಗಿಯೇ ಸಾಕಷ್ಟು ಸದ್ದು ಮಾಡ್ತಿರೋ ಬಹುಭಾಷಾ ನಟಿ ಮೀನಾ, ತಮ್ಮ ಕ್ರಷ್ ಬಗ್ಗೆ ಮಾತನಾಡಿರೋ ವಿಡಿಯೋ ವೈರಲ್ ಆಗಿದೆ. ಅವರು ಹೇಳಿದ್ದೇನು?
ಬಹುಭಾಷಾ ನಟಿ ಮೀನಾ ದುರೈರಾಜ್ ಸದಾ ಸದ್ದು ಮಾಡುತ್ತಲೇ ಇರುತ್ತಾರೆ. ವಯಸ್ಸು 48 ಆದರೂ, ಮಾಸದ ಚೆಲುವಿನಿಂದ ಈಗಲೂ 28ರ ಯುವತಿಯಂತೆ ಕಂಗೊಳಿಸುತ್ತಾರೆ ನಟಿ. 3 ದಶಕಗಳಿಗೂ ಹೆಚ್ಚು ಕಾಲ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಜನಪ್ರಿಯ ನಾಯಕಿಯಾಗಿ ಮಿಂಚುತ್ತಿದ್ದಾರೆ. 6 ವರ್ಷವಿದ್ದಾಗಲೇ ಚಿತ್ರರಂಗ ಪ್ರವೇಶಿಸಿದ ಮೀನಾ ನಟಿಯಾಗಿ 42 ವರ್ಷ ಪೂರೈಸಿದ್ದಾರೆ. ಕೋವಿಡ್ ಸೋಂಕಿನಿಂದ ವಿದ್ಯಾಸಾಗರ್ ಅವರು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರು. ಶ್ವಾಸಕೋಶ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾ ಸಾಗರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆಗಿನಿಂದಲೂ ನಟಿ ಎರಡನೆಯ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಕೆಲ ವರ್ಷಗಳಿಂದ ಕೇಳುತ್ತಲೇ ಬಂದಿವೆ. ತೀರಾ ಇತ್ತೀಚಿಗೆ ಇವರ ಹೆಸರು ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಮಾಜಿ ಅಳಿಯ ಧನುಷ್ ಜೊತೆ ಕೇಳಿಬಂದಿತ್ತು. ಇವರಿಬ್ಬರ ಮದುವೆಯಾಗುತ್ತದೆ ಎನ್ನಲಾಗಿತ್ತು. ಗಾಳಿಸುದ್ದಿಗೆ ಏನಂತೆ? ಎರಡನೆಯ ಮದುವೆಯ ಕುರಿತು ನಟಿ ಸ್ಪಷ್ಟನೆ ಕೊಟ್ಟೂ ಕೊಟ್ಟೂ ಸಾಕಾಗಿ ಹೋಗಿದೆ. ಈಗ ಮೀನಾ ಅದರ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ಆದರೆ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಅವರು ತಮ್ಮ ಜೀವನದ ಕೆಲವೊಂದು ಕುತೂಹಲದ ವಿಷಯಗಳನ್ನು ಮೀನಾ ತೆರೆದಿಟ್ಟಿದ್ದಾರೆ.
ತಮಿಳು ಚಾನೆಲ್ ಸಿನಿ ಉಲಗಂನಲ್ಲಿ ನಟಿ ಸುಹಾಸಿನಿ ನಡೆಸಿಕೊಡುವ ಚಾಟ್ ಷೋಗೆ ಆಗಮಿಸಿದ್ದ ಮೀನಾ ತಮ್ಮ ಕ್ರಷ್ ಕುರಿತು ಹೇಳಿಕೊಂಡಿದ್ದಾರೆ. ವಿದ್ಯಾ ಸಾಗರ್ ಅವರನ್ನು ಮದುವೆಯಾಗುವ ಮುನ್ನ ತಮ್ಮ ಕ್ರಷ್ ಯಾರಾಗಿದ್ದರು, ಕೊನೆಗೆ ಏನಾಯ್ತು ಎಂಬ ಕುತೂಹಲದ ವಿಷಯವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಆ ನಟ ಮದುವೆಯಾದಾಗ ನನ್ನ ಹಾರ್ಟ್ ಬ್ರೇಕ್ ಆಗಿತ್ತು ಎಂದೂ ನಟಿ ಹೇಳಿದ್ದಾರೆ. 'ನನಗೆ ಬಾಲಿವುಡ್ ನಟನ ಮೇಲೆ ಕ್ರಷ್ ಆಗಿತ್ತು. ಅವರ ಮದುವೆಯ ಸುದ್ದಿ ನನ್ನ ಹಾರ್ಟ್ ಬ್ರೇಕ್ ಮಾಡಿತ್ತು' ಎಂದು ಮೀನಾ ಮುಲಾಜಿಲ್ಲದೇ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಮೀನಾ ಅವರಿಗೆ ಕ್ರಷ್ ಆಗಿದ್ದ ನಟ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅಂತೆ! ನನ್ನ ಕ್ರಷ್ ಆಗಿದ್ದರು ಹೃತಿಕ್ ಎಂದಿದ್ದಾರೆ ಮೀನಾ. ಅವರ ಮೇಲಿನ ಪ್ರೀತಿಯ ಕುರಿತು ಮಾತನಾಡಿದ ಮೀನಾ, 'ನಾನು ಹೃತಿಕ್ ರೋಷನ್ ಅವರನ್ನು ತುಂಬಾ ಪ್ರೀತಿಸುತ್ತಿದ್ದೆ. ನನಗೆ ಅವರಂಥ ಹುಡುಗ ಬೇಕು ಎಂದು ಅಮ್ಮನಿಗೆ ಹೇಳುತ್ತಿದ್ದೆ. ನನಗೆ ಅಗಿನ್ನೂ ಮದುವೆಯಾಗಿರಲಿಲ್ಲ. ಮನೆಯಲ್ಲಿ ಮದುವೆಯ ಪ್ರಸ್ತಾಪ ಮಾಡುತ್ತಿದ್ದ ವೇಳೆ, ಅಮ್ಮನಿಗೆ ಇದೇ ವಿಷಯ ಹೇಳುತ್ತಿದ್ದೆ. ಆದರೆ ಈ ಬಗ್ಗೆ ಹೃತಿಕ್ ಅವರ ಮುಂದೆ ಎಂದಿಗೂ ಹೇಳಿಕೊಂಡಿರಲಿಲ್ಲ.ಆದರೆ ಅವರ ಮೇಲೆ ಪ್ರೀತಿ ಇದದ್ದಂತೂ ನಿಜ' ಎಂದಿರುವ ಮೀನಾ, ಹೃತಿಕ್ ಮದುವೆಯ ದಿನದಂದು ನನ್ನ ಹಾರ್ಟ್ ಬ್ರೇಕ್ ಆಗಿತ್ತು ಎಂದಿದ್ದಾರೆ. ಇದೇ ವೇಳೆ, ನಟಿ ಸುಹಾಸಿನಿ ಅವರು ಮೀನಾ, ಹೃತಿಕ್ ಅವರನ್ನು ಭೇಟಿಯಾದ ಹಳೆಯ ಫೋಟೋವನ್ನು ಶೇರ್ ಮಾಡಿಕೊಂಡರು.
ಇದೇ ವೇಳೆ ಮಗಳು ನೈನಿಕಾ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮೀನಾ ಮಾತನಾಡಿದ್ದಾರೆ. ಈ ಬಗ್ಗೆ ನನಗೆ ಖುಷಿ ಇದೆ. ವಿಜಯ್ ಅಭಿನಯದ ತೇರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿತ್ತು. ನನಗೆ ಇದು ತುಂಬಾ ಹೆಮ್ಮೆ ವಿಷಯವಾಗಿದೆ ಎಂದಿದ್ದಾರೆ. ಇದೇ ವೇಳೆ ತಮ್ಮ ಸಿನಿ ಪಯಣದ ಕುರಿತೂ ಮಾತನಾಡಿದ ಅವರು, ಪಡಯಪ್ಪ ಚಿತ್ರದಲ್ಲಿ ರಮ್ಯಾ ಕೃಷ್ಣನ್ ನಿರ್ವಹಿಸಿದ ನೆಗೆಟಿವ್ ಪಾತ್ರಕ್ಕೆ ತನ್ನನ್ನು ಮೊದಲು ಆಯ್ಕೆ ಮಾಡಿದ್ದರು. ಆದರೆ ಆ ಪಾತ್ರ ಮಾಡಬೇಡ ಎಂದು ನನ್ನ ತಾಯಿ ಹೇಳಿದ್ರು ಹೀಗಾಗಿ ಮಾಡಿಲ್ಲ ಎಂದು ಹೇಳಿದರು. ನಾಯಕಿ ಪಾತ್ರಗಳಲ್ಲಿ ಮಿಂಚುತ್ತಿರುವಾಗ ವಿಲನ್ ಆಗಿ ನಟಿಸಿದರೆ ಸಿನಿ ಜರ್ನಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಅಮ್ಮ ಒಪ್ಪಿರಲಿಲ್ಲ. ಆದರೆ ನಂತರ ಆ ಪಾತ್ರ ಮಾಡಬೇಕಿತ್ತು ಎಂದು ನನಗೂ ಅನಿಸಿತ್ತು ಎಂದು ಮೀನಾ ಹೇಳಿದ್ದಾರೆ.
