ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮಲ್ಲಿರುವ ವಿಚಿತ್ರ ಹಿಡನ್ ಟ್ಯಾಲೆಂಟ್‌ವೊಂದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ನಾಲಿಗೆಯನ್ನು ಸುಮಾರು 360 ಡಿಗ್ರಿಯವರೆಗೆ ತಿರುಗಿಸಬಲ್ಲೆ ಎಂದು ನಟಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ನಟಿ ಜಾನ್ವಿ ಕಪೂರ್‌ ಎಂದರೆ ಸಿನಿಮಾ, ಗ್ಲಾಮರ್ ಹಾಗೂ ತಮ್ಮ ವಿಭಿನ್ನ ಲುಕ್‌ಗಳಿಂದ ಸದಾ ಸುದ್ದಿಯಲ್ಲಿರುವ ನಟಿ. ಆದರೆ ಇದೀಗ ಜಾನ್ವಿ ಕಪೂರ್‌ ಅವರ ಸಿನಿಮಾಗಳಿಗಿಂತಲೂ ಅವರು ಹೇಳಿಕೊಂಡಿರುವ ವಿಚಿತ್ರ ಟ್ಯಾಲೆಂಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಚರ್ಚೆಯಾಗುತ್ತಿದೆ. ತಮ್ಮಲ್ಲಿರುವ ಯಾರಿಗೂ ಗೊತ್ತಿರದ ವಿಶೇಷ ಪ್ರತಿಭೆಯೊಂದನ್ನು ನಟಿ ಬಹಿರಂಗಪಡಿಸಿದ್ದು, ಇದನ್ನು ಕೇಳಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಜಾನ್ವಿ ಕಪೂರ್‌ ಅವರ ಹಿಡನ್ ಟ್ಯಾಲೆಂಟ್ ಏನು?

ಇತ್ತೀಚಿನ ಸಂದರ್ಶನವೊಂದರಲ್ಲಿ ಜಾನ್ವಿ ಕಪೂರ್‌ ಅವರಿಗೆ ತಮ್ಮ ಬಗ್ಗೆ ಬಹುತೇಕರಿಗೆ ಗೊತ್ತಿರದ ಯಾವುದೇ ಟ್ಯಾಲೆಂಟ್ ಇದೆಯೇ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರಿಸಿದ ನಟಿ, ತಮ್ಮ ನಾಲಿಗೆಯನ್ನು ಸುಮಾರು 360 ಡಿಗ್ರಿಯವರೆಗೆ ತಿರುಗಿಸಬಲ್ಲೆ ಎಂದು ಹೇಳಿದ್ದಾರೆ.

ಆದರೆ ಈ ವಿಚಾರವನ್ನು ಜಾನ್ವಿ ಗಂಭೀರವಾಗಿ ಹೇಳಿಲ್ಲ. ಬದಲಾಗಿ, ಇದು ತನಗಿರುವ ‘ಅತ್ಯಂತ ವಿಚಿತ್ರ ಮತ್ತು ಅಷ್ಟೇನೂ ಉಪಯೋಗಕ್ಕೆ ಬಾರದ ಟ್ಯಾಲೆಂಟ್’ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಇದೀಗ ನಟಿಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಫನ್ನಿ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ಶಾಲೆಯಲ್ಲೇ ಗೊತ್ತಾಗಿತ್ತಂತೆ ಈ ವಿಚಿತ್ರ ಪ್ರತಿಭೆ!

ತಮ್ಮ ಈ ವಿಶೇಷ ಟ್ಯಾಲೆಂಟ್‌ ಚಿಕ್ಕಂದಿನಲ್ಲೇ ಗೊತ್ತಾಗಿತ್ತು ಎಂದು ಜಾನ್ವಿ ಹೇಳಿದ್ದಾರೆ. ಶಾಲೆಯಲ್ಲಿ ಓದುತ್ತಿದ್ದಾಗ ತಮ್ಮ ಸಹಪಾಠಿಗಳು ನಾಲಿಗೆಯನ್ನು ಮೂಗಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದರಂತೆ. ಅದನ್ನು ಹಲವರು ತಮ್ಮದೇ ಆದ ವಿಶೇಷ ಪ್ರತಿಭೆಯಂತೆ ಪ್ರದರ್ಶಿಸುತ್ತಿದ್ದರಂತೆ. ಜಾನ್ವಿಗೆ ಮಾತ್ರ ಹಾಗೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ‘ನನ್ನ ನಾಲಿಗೆಯಿಂದ ನಾನು ಬೇರೆ ಏನಾದರೂ ಮಾಡಬಹುದೇ?’ ಎಂದು ಸ್ವತಃ ಪ್ರಯತ್ನಿಸಲು ಆರಂಭಿಸಿದ್ದರಂತೆ.

ಆಗ ತಮ್ಮ ನಾಲಿಗೆಯನ್ನು ವಿಭಿನ್ನ ರೀತಿಯಲ್ಲಿ ತಿರುಗಿಸಲು ಸಾಧ್ಯವಾಗುತ್ತದೆ ಎಂಬುದು ಅವರಿಗೆ ತಿಳಿದುಬಂದಿದೆ. ಆ ಬಳಿಕ ಇದನ್ನೇ ಜಾನ್ವಿ ಕೆಲವೊಮ್ಮೆ ಪಾರ್ಟಿಗಳಲ್ಲಿ ಮೋಜಿಗಾಗಿ ‘ಪಾರ್ಟಿ ಟ್ರಿಕ್’ ಆಗಿಯೂ ಬಳಸುತ್ತಿದ್ದರಂತೆ. ಇದೀಗ ಇದೇ ವಿಚಾರವನ್ನು ನಟಿ ಬಹಿರಂಗಪಡಿಸಿರುವುದು ಅಭಿಮಾನಿಗಳಿಗೆ ಸಖತ್‌ ಇಂಟರೆಸ್ಟಿಂಗ್ ಎನಿಸಿದೆ.

‘ವಾವ್.. ಏನ್ ಟ್ಯಾಲೆಂಟ್ ಜಾನ್ವಿ!’ ಎಂದ ನೆಟ್ಟಿಗರು

ಜಾನ್ವಿ ಕಪೂರ್‌ ಅವರ ಈ ವಿಚಿತ್ರ ಪ್ರತಿಭೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕೆಲವರು, ‘ವಾವ್.. ಏನ್ ಟ್ಯಾಲೆಂಟ್ ಜಾನ್ವಿ!’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ತಮ್ಮ ನಾಲಿಗೆಯನ್ನೂ ಹಾಗೆ ತಿರುಗಿಸಲು ಸಾಧ್ಯವೇ ಎಂದು ಪ್ರಯತ್ನಿಸುತ್ತಿರುವುದಾಗಿ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಜಾನ್ವಿ ಅವರ ಈ ಹೇಳಿಕೆ ಅಭಿಮಾನಿಗಳ ನಡುವೆ ಕುತೂಹಲ ಮೂಡಿಸಿದ್ದು, ನಟಿಯ ಸಿನಿಮಾಗಳ ಹೊರತಾಗಿ ಅವರ ಈ ‘ಹಿಡನ್ ಟ್ಯಾಲೆಂಟ್’ ಕೂಡ ಸುದ್ದಿಯಲ್ಲಿದೆ.

‘ಚುಟ್ಟಮಲ್ಲೆ’ AI ವಿಡಿಯೋ ವಿಚಾರದಲ್ಲೂ ಜಾನ್ವಿ ಸುದ್ದಿಯಲ್ಲಿ

ಇನ್ನು ಜಾನ್ವಿ ಕಪೂರ್‌ ಇತ್ತೀಚೆಗೆ ಮತ್ತೊಂದು ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದರು. ಜೂನಿಯರ್ ಎನ್‌ಟಿಆರ್‌ ಜೊತೆ ನಟಿಸಿರುವ ‘ದೇವರ’ ಸಿನಿಮಾದ ‘ಚುಟ್ಟಮಲ್ಲೆ’ ಹಾಡಿಗೆ ಸಂಬಂಧಿಸಿದಂತೆ AI ಮೂಲಕ ಮಾರ್ಪಡಿಸಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕುರಿತು ಜಾನ್ವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. AI ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರನ್ನು ತಪ್ಪಾಗಿ ಅಥವಾ ಅಶ್ಲೀಲವಾಗಿ ಬಿಂಬಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ವ್ಯಕ್ತಿಯ ಅನುಮತಿಯಿಲ್ಲದೆ ಅವರ ಚಿತ್ರ ಅಥವಾ ವಿಡಿಯೋವನ್ನು ಬದಲಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ನೋವುಂಟು ಮಾಡುವ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದರು. ಹೀಗಾಗಿ, ಸದ್ಯ ಜಾನ್ವಿ ಕಪೂರ್‌ ತಮ್ಮ ಸಿನಿಮಾಗಳ ಜೊತೆಗೆ ಒಂದೆಡೆ AI ವಿಡಿಯೋ ವಿವಾದದಿಂದ, ಮತ್ತೊಂದೆಡೆ ತಮ್ಮ ಈ ವಿಚಿತ್ರ ‘ಹಿಡನ್ ಟ್ಯಾಲೆಂಟ್’ನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಚರ್ಚೆಯಲ್ಲಿದ್ದಾರೆ.