ಇಷ್ಟು ಕಳಪೆ ಆಗಿ, ಯಾರೂ ಮಾಡಬಾರದ ರೀತಿಯಲ್ಲಿ ಇಂತಹ ಕೆಲಸ ಮಾಡಿದಾರಲ್ಲ, ಅಂಥವರಿಗೆ ನನ್ನ ಛೀಮಾರಿ ಇರ್ಲಿ.. ನಾನು ಘಟನೆ ನಡೆದಾಗ ಊರಲ್ಲಿ ಇರ್ಲಿಲ್ಲ, ಅನಾರೋಗ್ಯದ ನಿಮಿತ್ತ ಸ್ವಲ್ಪ ರೆಸ್ಟ್‌ನಲ್ಲಿ ಇದ್ದೆ. ಆದ್ರೂ ಕೂಡ ಈ ವಿಷ್ಯ ಗೊತ್ತಾದಾಗ ನಂಗೆ ತುಂಬಾ ನೋವಾಯ್ತು. ಅಂಥವ್ರಿಗೇ ಹೀಗೆ ಮಾಡಿದಾರೆ ಅಂದ್ರೆ 

ಕನ್ನಡದ ಮೇರುನಟ ವಿಷ್ಣುವರ್ಧನ್ ಅವರ, ಅಭಿಮಾನ್ ಸ್ಟೂಡಿಯೋದಲ್ಲಿದ್ದ ಸಮಾಧಿಯನ್ನು ನೆಲಸಮ ಮಾಡಿದ್ದು ಬಹುತೇಕರಿಗೆ ಗೊತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್, ವಿಜಯರಾಘವೇಂದ್ರ ಸೇರಿದಂತೆ ಕೆಲವು ನಟರು ಹಾಗೂ ನಟಿಯರಾದ ಸುಧಾರಾಣಿ, ಶ್ರುತಿ ಬೇಸರ ವ್ಯಕ್ತಪಡಿಸಿದ್ದಾರೆ. ನಟ ವಿಷ್ಣು ಅಭಿಮಾನಿಗಳಂತೂ ಈ ಬಗ್ಗೆ ಸಂಕಟ ಅನುಭವಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದೀಗ ನಟ ವಸಿಷ್ಠ ಸಿಂಹ (Vasishta Simha) ಅವರೂ ಕೂಡ ಈ ಬಗ್ಗೆ ಮಾತನ್ನಾಡಿದ್ದಾರೆ. ಹಾಗಿದ್ರೆ ಅವರೇನು ಹೇಳಿದ್ದಾರೆ? ಇಲ್ಲಿದೆ ನೋಡಿ..

ಈ ಬಗ್ಗೆ ನಟ ವಸಿಷ್ಠ ಸಿಂಹ ಅವರು 'ಇದು ಅತ್ಯಂತ ಹೀನಾಯವಾದ, ಘೋರವಾದ ಒಂದು ಕೃತ್ಯ, ಅಸಹ್ಯ ಹುಟ್ಟಿಸತಕ್ಕಂತ ವಿಷ್ಯ ನಡೆದಿದೆ ನಮ್ಮಲ್ಲಿ. ಇದಕ್ಕಾಗಿ ಬಹಳ ವರ್ಷಗಳ ಹೋರಾಟ ನಮ್ಮಲ್ಲಿ ನಡೆದಿದೆ. ಬಹಳ ವರ್ಷಗಳಿಂದ ಹಲವಾರು ಜನ ಬಹಳಷ್ಟು ರೀತಿಯಲ್ಲಿ ಪ್ರಯತ್ನಪಟ್ಟು ಕೂಡ, ಅದಕ್ಕೊಂದು ತಾರ್ಕಿಕ ಅಂತ್ಯ ಸಿಗದೇ ಉಳಿದಿರುವಂಥ ಪುಣ್ಯ ಸ್ಥಳ. ಅಭಿಮಾನ್ ಸ್ಟೂಡಿಯೋ, ಅದು ವಿಷ್ಣು ಸರ್‌ನ ಅಂತ್ಯಕ್ರಿಯೆ ಮಾಡಿದಂತ, ಸಮಾಧಿ ಮಾಡಿದಂತ ಜಾಗ.

ಇಂದಲ್ಲ ನಾಳೆ ಅಲ್ಲಿ ಒಂದು ಲಾಜಿಕಲ್ ಎಂಡ್ ಬರುತ್ತೆ, ಅಲ್ಲಿ ವಿಷ್ಣು ಸರ್‌ನ ನೆನಪಿಗೆ ಒಂದು ಸ್ಮಾರಕ, ಅಥವಾ ಅವ್ರನ್ನ ಅವ್ರ ಅಭಿಮಾನಿಗಳು ಪೂಜೆ ಮಾಡೋದಕ್ಕೆ, ಅವ್ರ ನೆನಪಿಗಾಗಿ ಹೋಗೋದಕ್ಕೆ ಇರೋ ಒಂದು ಜಾಗ ಅದು. ಅಲ್ಲಿ ಅದಕ್ಕೊಂದು ರೂಪ, ಆಕಾರ ಸಿಗುತ್ತೆ ಅಂತ ಎದುರು ನೋಡಿದ್ವಿ. ಆದರೆ, ಬೇರೆ ಬೇರೆ ಕಾರಣಕ್ಕೋ ಏನೋ, ಇದು ಆಗಲೇ ಇಲ್ಲ. ಮೊನ್ನೆ ಬೆಳಗಿನ ಜಾವ, ಯಾರಿಗೂ ಗೊತ್ತಾಗದಂತೆ, ಅಲ್ಲೊಂದು ಅಂತಹ ಜಾಗ ಇತ್ತು ಅನ್ನೋ ಕುರುಹೂ ಸಹ ಸಿಗದಂತೆ, ಅಲ್ಲಿನ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ಈ ಹೀನ ಕೃತ್ಯವನ್ನು ಒಳ್ಳೇ ಮಾತುಗಳಲ್ಲಂತೂ ಹೇಳೋದಕ್ಕೆ ಸಾಧ್ಯನೇ ಇಲ್ಲ.

ಅಂತಹ ಮೇರು ನಟನಿಗೆ ಈ ರೀತಿ ಅವಮಾನ ಮಾಡ್ಬೇಕಿತ್ತಾ ಅನ್ನೋದು ಒಂದು ವಿಷ್ಯ ಆದ್ರೆ, ಇನ್ನೊಂದು ಅಂದ್ರೆ, ಅಂತಹ ಸಾಧಕನಿಗೆ ಒಂದು ಜಾಗವನ್ನು ಮಾಡಿಕೊಡುವಲ್ಲಿ ಸಂಬಂಧಪಟ್ಟವರು ಸೋತುಹೋಗ್ಬಿಟ್ರಾ? ಇಷ್ಟು ಸಲಭವಾಗಿ ಕೈಬಿಟ್ಬಿಟ್ರಾ? ಇಲ್ಲಿ ಸಾಧನೆಗೆ ಬೆಲೆ ಇಲ್ವಾ? ವ್ಯಕ್ತಿತ್ವಕ್ಕೆ ಬೆಲೆ ಇಲ್ವಾ, ಅಥವಾ ಮೇರನಟ ಅನ್ನೋ ಸ್ಥಾನಕ್ಕೂ ಬೆಲೆ ಇಲ್ವಾ? ಆದರ್ಶಕ್ಕೆ ಬೆಲೆ ಇಲ್ವಾ? ಇಂತಹ ಹಲವಾರು ಪ್ರಶ್ನೆಗಳು ಬರುತ್ವೆ.. ತುಂಬಾ ದುಃಖ ಆಗುತ್ತೆ..ಎಂದಿದ್ದಾರೆ.

ಇಷ್ಟು ಕಳಪೆ ಆಗಿ, ಯಾರೂ ಮಾಡಬಾರದ ರೀತಿಯಲ್ಲಿ ಇಂತಹ ಕೆಲಸ ಮಾಡಿದಾರಲ್ಲ, ಅಂಥವರಿಗೆ ನನ್ನ ಛೀಮಾರಿ ಇರ್ಲಿ.. ನಾನು ಘಟನೆ ನಡೆದಾಗ ಊರಲ್ಲಿ ಇರ್ಲಿಲ್ಲ, ಅನಾರೋಗ್ಯದ ನಿಮಿತ್ತ ಸ್ವಲ್ಪ ರೆಸ್ಟ್‌ನಲ್ಲಿ ಇದ್ದೆ. ಆದ್ರೂ ಕೂಡ ಈ ವಿಷ್ಯ ಗೊತ್ತಾದಾಗ ನಂಗೆ ತುಂಬಾ ನೋವಾಯ್ತು. ಅಂಥವ್ರಿಗೇ ಹೀಗೆ ಮಾಡಿದಾರೆ ಅಂದ್ರೆ ಇನ್ನು ಬೇರೆಯವ್ರು ಯಾವ ಲೆಕ್ಕ? ಈ ಘಟನೆ ತೆರೆಯ ಹಿಂದೆ ಯಾರೇ ಇರ್ಲಿ, ಅವ್ರಿಗೆ ದೇವ್ರು ತುಂಬಾ ಒಳ್ಳೇದು ಮಾಡ್ಲಿ, ಇಂಥ ಕೆಲಸ ಮಾಡಿದವ್ರಿಗೆ ನನ್ನ ಧಿಕ್ಕಾರ..' ಎಂದಿದ್ದಾರೆ ವಿಶಿಷ್ಠ ಸ್ಥಾನ ಪಡೆದಿರುವ ನಟ ವಸಿಷ್ಠ ಸಿಂಹ.

View post on Instagram

ಮೊನ್ನೆ (08 August 2025) ಬೆಳಗಿನ ಜಾವ ಮೂರು ಗಂಟೆಗೆ ಬಾಲಣ್ಣ ಕುಟುಂಬ ಸಮಾಧಿ ತೆರವು ಕಾರ್ಯಾಚರಣೆ ಮಾಡಿದೆ. ಇದನ್ನು ಯಾರಿಗೂ ತಿಳಿಯದ ಹಾಗೆ ಮಾಡಲಾಗಿದೆ. ಕಾರಣ, ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೊತ್ತಾದರೆ ದೊಡ್ಡ ಸಮಸ್ಯೆ ಆಗುತ್ತೆ ಎಂದು ರಾತ್ರೋ ರಾತ್ರಿ ಸಮಾಧಿ ತೆರವು ಮಾಡಲಾಗಿದೆ ಎನ್ನಲಾಗಿದೆ. ಈಗ ಅಲ್ಲಿರುವ ಅಭಿಮಾನಿಗಳಿಗೆ ಪೊಲೀಸರು ಯಾವುದೇ ಗಲಾಟೆ ಮಾಡದಂತೆ ಹೊರಹೋಗಲು ಸೂಚಿಸುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ, ಸಮಾಧಿ ಇದ್ದ ಜಾಗದಲ್ಲಿ ಪ್ರೊಟೆಸ್ಟ್ ಮಾಡುತ್ತಿರುವವರನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಾರೆ. 'ಯಾವುದೇ ಕಾರಣಕ್ಕೂ ಅಭಿಮಾನ್ ಸ್ಟುಡಿಯೋ ಎದುರು ಧರಣಿ ಮಾಡೋ ಹಾಗಿಲ್ಲ' ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗುತ್ತಿದೆ. 'ಅಂಥ ಮೇರುನಟ ವಿಷ್ಣುವರ್ಧನ್ ಅವರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಒಂದು ಸಮಾಧಿ ಇಲ್ಲ. ಅದಕ್ಕೆ ಕೊಡುವಷ್ಟು ಜಾಗವಿಲ್ಲವೇ?' ಎಂದು ಪ್ರಶ್ನೆ ಕೇಳುತ್ತ ಡಾ ವಿಷ್ಣುವರ್ಧನ್ ಅಭಿಮಾನಿಗಳು ಕೊರಗುತ್ತಿದ್ದಾರೆ.