ಚಿತ್ರ ವಿಮರ್ಶೆ: ಕೆಂಪೇಗೌಡ 2
ಕಳೆದ ಎರಡು ವರ್ಷಗಳಿಂದ ರಾಜ್ಯದ ರಾಜಕಾರಣದಲ್ಲಿ ಏನೆಲ್ಲ ಚರ್ಚೆಗಳು ನಡೆದಿವೆ? ಲೋಕಸಭಾ ಚುನಾವಣೆ, ಹಣ ಹಂಚಿಕೆ, ಇವಿಎಂಗಳನ್ನು ಹ್ಯಾಕ್ ಮಾಡಿದ್ದಾರೆಂಬ ಅರೋಪ, ಚುನಾವಣೆ ಆಯೋಗ, ಕಾರ್ಪೋರೇಟ್ ಧಣಿಗಳು, ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷಾಂತರ ಮಾಡುವ ಶಾಸಕರು, ಸರ್ಕಾರವನ್ನೇ ಬದಲಾಯಿಸುವುದಕ್ಕೆ ಬರುವ ಪವರ್ ಬ್ರೋಕರ್, ಇದ್ದಕ್ಕಿದ್ದಂತೆ ಬೆಂಬಲ ವಾಪಸ್ಸು ಪಡೆಯುವ ಪಕ್ಷ.... ಹೀಗೆ ಹಲವು ಸಂಗತಿಗಳು ನೇರ ಪ್ರಸಾರವಾಗಿವೆ. ‘ಕೆಂಪೇಗೌಡ 2’ ಚಿತ್ರದ್ದು ಕೂಡ ಇದೇ ಲೈವ್ ಘಟನೆಗಳ ಒಟ್ಟು ಚಿತ್ರಣ.
ಆರ್. ಕೇಶವಮೂರ್ತಿ
ಕೋಮಲ್ ಅವರ ಮೇಕ್ ಓವರ್ ನೋಡಕ್ಕೆ ಸೂಪರ್. ತಾವು ಕಮರ್ಷಿಯಲ್ ಹೀರೋ ಎಂಬುದನ್ನು ಹೇಳುವುದಕ್ಕಾಗಿಯೇ ಎನ್ನುವಂತೆ ‘ಕೆಂಪೇಗೌಡ 2’ ಚಿತ್ರಕ್ಕೆ ಇನ್ನಿಲ್ಲದ ಶ್ರದ್ಧೆ ಮತ್ತು ಶ್ರಮ ಎರಡನ್ನೂ ವ್ಯಯಿಸಿದ್ದಾರೆ.
‘ಕೆಂಪೇಗೌಡ 2’ ಚಿತ್ರದಲ್ಲಿ ಅತಿಥಿ ನಟರ ದಂಡು!
ಅದು ತೆರೆ ಮೇಲೂ ಕಾಣುತ್ತದೆ. ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ರಾಜಕೀಯ ಪಕ್ಷಗಳ ಆಟದ ವಸ್ತುವಾಗುವುದು, ದೂರದ ದೇಶಕ್ಕೆ ದುಡಿಯಲು ಹೋದ ಯುವಕ ನಿಗೂಢವಾಗಿ ಸಾಯುವುದು, ವಿದೇಶದಲ್ಲೇ ಕೂತು ರಾಜ್ಯದ ಆಡಳಿತವನ್ನು ನಿರ್ಧರಿಸುವ ಬ್ಯುಸಿನೆಸ್ ಮ್ಯಾನ್, ತಮ್ಮ ತಂದೆ ಕಟ್ಟಿದ ಪಕ್ಷದಲ್ಲಿ ತಮಗೇ ಸ್ಥಾನ ಸಿಗದೆ ಹುಚ್ಚನ ಪಟ್ಟದಕ್ಕಿಸಿಕೊಳ್ಳುವ ವ್ಯಕ್ತಿ, ಇದನ್ನೆಲ್ಲ ನೋಡಿ ಸಿಟ್ಟಾಗುವ ಆತನ ಮಗ ಮುಂದೆ ಕಾರ್ಪೋರೇಟ್ ಸಾಮ್ರಾಜ್ಯ ಕಟ್ಟಿತಾನೇ ಮುಖ್ಯಮಂತ್ರಿ ಆಗುವುದು, ಈ ಎಲ್ಲ ಘಟನೆಗಳಿಗೂ ಅಡ್ಡಿಯಾಗಿ ನಿಲ್ಲುವ ಕೆಂಪೇಗೌಡ. ಈ ಎಲ್ಲದರ ನಡುವೆ ಸಿಎಂ ಹಾಗೂ ವಿದೇಶಕ್ಕೆ ಹೋದ ಯುವಕನ ಸಾವು ಕೆಂಪೇಗೌಡನನ್ನು ಕೆರಳಿಸುತ್ತದೆ. ಈ ಎರಡು ಪ್ರಕರಣಗಳ ಹಿಂದೆ ಹೊರಟ ಕೆಂಪೇಗೌಡನಿಗೆ ಹ್ಯಾಕರ್ ದಂಧೆ ತೆರೆದುಕೊಳ್ಳುತ್ತದೆ. ಈ ಹ್ಯಾಕರ್ ಮಾಸ್ಟರ್ ಮುಂದೆ ಸಿಎಂ ಕೂಡ ಆಗುತ್ತಾನೆ. ನಂತರ ಏನು ಎಂಬುದನ್ನು ನೀವು ಚಿತ್ರ ನೋಡಬೇಕು.
ತಾರಾಗಣ: ಕೋಮಲ್, ಶ್ರೀಶಾಂತ್, ಯೋಗೀಶ್, ನಾಗಬಾಬು, ರಕ್ಷಿಕ ಶರ್ಮಾ, ಆಲಿ, ಚೇತನ್ ಶರ್ಮ, ಸುಚೇಂದ್ರ ಪ್ರಸಾದ್, ಲೋಹಿತಾಶ್ವ, ದತ್ತಣ್ಣ
ನಿರ್ದೇಶನ: ಶಂಕರೇಗೌಡ
ನಿರ್ಮಾಣ: ಎ ವಿನೋದ್
ಛಾಯಾಗ್ರಹಣ: ಮೋಹನ್
ಸಂಗೀತ: ವರುಣ್ ಉನ್ನಿ
ಪೊಲೀಸ್ ಪಾತ್ರಕ್ಕೆ ಬೇಕಾದ ಖಡಕ್ ತಯಾರಿ ಮಾಡಿಕೊಂಡು ಹೊಸ ರೀತಿಯಲ್ಲಿ ಕೋಮಲ್ ಇಲ್ಲಿ ಕೆಂಪೇಗೌಡನಾಗಿ ಮಿಂಚಿದ್ದಾರೆ ಎಂಬುದೇ ಚಿತ್ರದ ಹೈಲೈಟ್. ಕ್ರಿಕೆಟಿಗ ಶ್ರೀಶಾಂತ್, ಯೋಗೀಶ್ ಅವರು ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
‘ಮಣ್ಣಲ್ಲಿ ಹೂತಿಟ್ಟ ಸತ್ಯ ಹೊರ ತೆಗಿತೀನಿ’ ಎಂದ ಕಾಮಿಡಿ ಕಿಂಗ್!
ಹಿನ್ನೆಲೆ ಸಂಗೀತ, ಮೋಹನ್ ಛಾಯಾಗ್ರಹಣ ಹಾಗೂ ಮೇಕಿಂಗ್ ಚಿತ್ರದಲ್ಲಿ ಹೆಚ್ಚು ಗಮನ ಸೆಳೆಯುತ್ತದೆ. ಹೊಸ ಕೋಮಲ್‌ರನ್ನು ನೋಡಬೇಕು ಎಂದುಕೊಳ್ಳುವವರಿಗೆ ರುಚಿಸುವ ಸಿನಿಮಾ ಇದು. ಉಳಿದ ಪಾತ್ರಗಳಿಗೆ ಹೆಚ್ಚಿನ ಮಹತ್ವ ಇಲ್ಲ. ಎಡಿಟಿಂಗ್ ಹಾಗೂ ಸಂಭಾಷಣೆಯಲ್ಲಿ ಮತ್ತಷ್ಟುಖಡಕ್ ಬೇಕಿತ್ತು. ಪರಭಾಷಿಗರ ಪಾತ್ರಗಳಲ್ಲಿ ಕನ್ನಡದವರೇ ಇದ್ದಿದ್ದರೆ ಸಿನಿಮಾ ಇಷ್ಟುನೋಡುಗನಿಗೆ ಸನಿಹವಾಗುತ್ತಿತ್ತು.