ಕಾರ್ತಿ ನಟನೆಯ 'ಸರ್ದಾರ್ 2' ಸಿನಿಮಾ ಥಿಯೇಟರ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆದರೆ, ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನಂಬರ್ 1 ಟ್ರೆಂಡಿಂಗ್‌ನಲ್ಲಿದ್ದು, ಮತ್ತೆ ಸುದ್ದಿಯಲ್ಲಿದೆ.

ಪಿ.ಎಸ್. ಮಿತ್ರನ್ ನಿರ್ದೇಶನದಲ್ಲಿ ಕಾರ್ತಿ ನಾಯಕರಾಗಿ ನಟಿಸಿರುವ 'ಸರ್ದಾರ್ 2' ಸಿನಿಮಾ ಈಗ ಒಟಿಟಿಯಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಸ್ಪೈ ಥ್ರಿಲ್ಲರ್ ಚಿತ್ರದಲ್ಲಿ ಮಾಳವಿಕಾ ಮೋಹನನ್, ಆಶಿಕಾ ರಂಗನಾಥ್ ಮತ್ತು ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಥಿಯೇಟರ್‌ನಲ್ಲಿ ರಿಲೀಸ್ ಆದಾಗ ಚಿತ್ರಕ್ಕೆ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆದರೆ, ಈಗ ಒಟಿಟಿಯಲ್ಲಿ ಚಿತ್ರದ ಕಥೆ ಬದಲಾದಂತೆ ಕಾಣುತ್ತಿದೆ.

ಅಮೆಜಾನ್ ಪ್ರೈಮ್‌ನಲ್ಲಿ ನಂಬರ್ 1

ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ ಟ್ರೆಂಡಿಂಗ್ ಲಿಸ್ಟ್‌ನಲ್ಲಿ 'ಸರ್ದಾರ್ 2' ಮೊದಲ ಸ್ಥಾನಕ್ಕೇರಿದೆ. ಒಟಿಟಿಯಲ್ಲಿ ಸಿಗುತ್ತಿರುವ ಈ ಭರ್ಜರಿ ರೆಸ್ಪಾನ್ಸ್‌ನಿಂದಾಗಿ ಸಿನಿಮಾ ಮತ್ತೆ ಚರ್ಚೆಯಲ್ಲಿದೆ. ಥಿಯೇಟರ್‌ನಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದ ಈ ಚಿತ್ರಕ್ಕೆ, ಡಿಜಿಟಲ್ ರಿಲೀಸ್ ಬಳಿಕ ಹೊಸ ವೀಕ್ಷಕರು ಸಿಕ್ಕಿದ್ದಾರೆ. ಒಟಿಟಿ ಮೂಲಕ ಸಿನಿಮಾ ದೊಡ್ಡ ಮಟ್ಟದ ಪ್ರೇಕ್ಷಕರನ್ನು ತಲುಪುತ್ತಿದೆ.

ಸಿನಿಮಾಗೆ ಸಿಕ್ಕ ಎರಡನೇ ಅವಕಾಶ

ಥಿಯೇಟರ್ ರನ್ ಮುಗಿದ ಬಳಿಕ ಒಟಿಟಿಯಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ 'ಸರ್ದಾರ್ 2' ಚಿತ್ರತಂಡಕ್ಕೆ ದೊಡ್ಡ ರಿಲೀಫ್ ಕೊಟ್ಟಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿರುವ ಕಾರಣ, ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರುವಂತಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಚಿತ್ರದ ವೀಕ್ಷಕರ ಸಂಖ್ಯೆ ಮುಂದಿನ ದಿನಗಳಲ್ಲಿ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ದೊಡ್ಡ ತಾರಾಗಣದ ಸರ್ದಾರ್ 2

ಈ ಚಿತ್ರದಲ್ಲಿ ಮಾಳವಿಕಾ ಮೋಹನನ್, ಎಸ್.ಜೆ. ಸೂರ್ಯ ಜೊತೆಗೆ ಆಶಿಕಾ ರಂಗನಾಥ್, ರಾಶಿ ಖನ್ನಾ, ಯೋಗಿಬಾಬು, ನಾಜರ್, ಆಶಿಶ್ ವಿದ್ಯಾರ್ಥಿ, ಅಚ್ಯುತ್ ಕುಮಾರ್ ಮತ್ತು ಬಾಬು ಆಂಟನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರಿನ್ಸ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾಗೆ ಯುವನ್ ಶಂಕರ್ ರಾಜಾ ಸಂಗೀತ ನೀಡಿದ್ದಾರೆ. ಕಾರ್ತಿ ಹಾಗೂ ಪಿ.ಎಸ್. ಮಿತ್ರನ್ ಕಾಂಬಿನೇಷನ್‌ನ ಈ ಸ್ಪೈ ಥ್ರಿಲ್ಲರ್, ಥಿಯೇಟರ್‌ಗಿಂತ ಒಟಿಟಿಯಲ್ಲೇ ಹೆಚ್ಚು ಸದ್ದು ಮಾಡುತ್ತಿದೆ.

ಕಾರ್ತಿ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು

ಸದ್ಯ ಕಾರ್ತಿ ಹಲವು ಕುತೂಹಲಕಾರಿ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. 'ಕೈದಿ 2' ಸಿನಿಮಾ ಬರುವುದು ಪಕ್ಕಾ ಎಂದು ಅವರು ಈಗಾಗಲೇ ಅಧಿಕೃತವಾಗಿ ಹೇಳಿದ್ದಾರೆ. ಇದರ ಜೊತೆಗೆ 'ಮಾರ್ಷಲ್' ಹಾಗೂ 'ಕಾರ್ತಿ 30' ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ. ತೆಲುಗಿನ 'ಹಿಟ್ 4' ಚಿತ್ರದ ಮೂಲಕವೂ ಕಾರ್ತಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.