ಚಾಮರಾಜನಗರದಲ್ಲಿ ನಡೆದ ದಸರಾ ಮಹೋತ್ಸವದಲ್ಲಿ ನಟ ಧನ್ವೀರ್ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಗಳು 'ಡಿ ಬಾಸ್' ಎಂದು ಜೈಕಾರ ಹಾಕಿದಾಗ, ನಟ ದರ್ಶನ್ ಪರವಾಗಿ ಧನ್ವೀರ್ ಖಡಕ್ ಮಾತುಗಳನ್ನಾಡಿದ್ದಾರೆ. ದರ್ಶನ್ ವಿರೋಧಿಗಳಿಗೆ ವೇದಿಕೆ ಮೇಲಿಂದಲೇ ಎಚ್ಚರಿಕೆ ನೀಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.

ಚಾಮರಾಜನಗರ (ಅ.18): ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ದಸರಾ ಮಹೋತ್ಸವದ ವೇದಿಕೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಅವರ ಪರವಾಗಿ ಜಯಘೋಷಗಳು ಮುಗಿಲು ಮುಟ್ಟಿವೆ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ನಟ ಧನ್ವೀರ್ (Actor Dhanveerah) ಆಗಮಿಸುತ್ತಿದ್ದಂತೆ, ಅಭಿಮಾನಿಗಳು 'ಡಿ ಬಾಸ್... ಡಿ ಬಾಸ್...' ಎಂದು ಕೂಗಿ ಜೈಕಾರ ಹಾಕಿದ್ದು, ಈ ವೇಳೆ ದರ್ಶನ್ ಬಗ್ಗೆ ಧನ್ವೀರ್ ಆಡಿದ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.

ವೇದಿಕೆ ಏರುತ್ತಿದ್ದಂತೆ ಡಿ ಬಾಸ್ ಕಹಳೆ!

ಚಾಮರಾಜನಗರ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ಯಾಂಡಲ್‌ವುಡ್ ಯುವ ನಟ ಧನ್ವೀರ್ ಗೌಡ ವೇದಿಕೆಗೆ ಆಗಮಿಸಿದರು. ಅವರು ಮೈಕ್ ಕೈಗೆತ್ತಿಕೊಳ್ಳುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಅಭಿಮಾನಿಗಳು ದರ್ಶನ್ ಅವರ ಪರವಾಗಿ ಘೋಷಣೆ ಕೂಗಲಾರಂಭಿಸಿದರು. ಅಭಿಮಾನಿಗಳ ಪ್ರೀತಿಯನ್ನು ಕಂಡು ಭಾವುಕರಾದ ಧನ್ವೀರ್, ಎಲ್ಲರಿಗೂ ದಸರಾ ಹಬ್ಬದ ಶುಭಾಶಯ ಕೋರಿದರು. 'ಎಲ್ಲರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡದೇವತೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನಮ್ಮ ಮೇಲೆ ಸದಾ ಹೀಗೇ ಇರಲಿ. ನನಗೂ ಮತ್ತು ಚಾಮರಾಜನಗರಕ್ಕೂ ಅವಿನಾಭಾವ ಸಂಬಂಧವಿದೆ, ಏಕೆಂದರೆ ನಾನು ಯಾವಾಗಲೂ ನನ್ನ ಸಿನಿಮಾಗಳ ಪ್ರಮೋಷನ್ ಇಲ್ಲಿಂದಲೇ ಆರಂಭಿಸುತ್ತೇನೆ. ಈ ಜಿಲ್ಲೆಯಲ್ಲಿ ನನಗೆ ಮಾದಪ್ಪನ ಬೆಟ್ಟ ಎಂದರೆ ತುಂಬಾ ಇಷ್ಟ' ಎಂದು ಹೇಳಿದರು.

'ಯಾವ ನಾಯಿ-ನರಿಗಳ ಕುತಂತ್ರವೂ ನಡೆಯಲ್ಲ: ಧನ್ವೀರ್ ಖಡಕ್ ಮಾತು!

ಈ ಸಂದರ್ಭದಲ್ಲಿ ನೆರೆದಿದ್ದ ಯುವಕರು ಮತ್ತೆ 'ಡಿ ಬಾಸ್' ಪರ ಘೋಷಣೆಗಳನ್ನು ಕೂಗುತ್ತಾ ಧನ್ವೀರ್ ಅವರ ಗಮನ ಸೆಳೆದರು. ಆಗ ಮಾತನಾಡಿದ ಧನ್ವೀರ್, ದರ್ಶನ್ ವಿರೋಧಿಗಳಿಗೆ ವೇದಿಕೆ ಮೇಲಿಂದಲೇ ಖಡಕ್ ಸಂದೇಶ ರವಾನಿಸಿದರು. 'ಯಾವ ನಾಯಿ-ನರಿಗಳು ಎಷ್ಟೇ ಕುತಂತ್ರ ಮಾಡಿದ್ರೂ ಸಹ ಅವರನ್ನು (ದರ್ಶನ್) ಏನೂ ಮಾಡಲಿಕ್ಕೆ ಆಗಲ್ಲ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಅವರ ಮೇಲಿದೆ. ದರ್ಶನ್ ಅವರು ಜೈಲಿನಿಂದ ಹೊರಗಡೆ ಬಂದೇ ಬರ್ತಾರೆ' ಎಂದು ಗರ್ಜಿಸಿದರು. ಧನ್ವೀರ್ ಅವರ ಈ ಮಾತನ್ನು ಕೇಳಿದ ದರ್ಶನ್ ಅಭಿಮಾನಿಗಳು ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದರು.

ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಆಪ್ತರಾಗಿರುವ ನಟ ಧನ್ವೀರ್, ಮೊದಲಿನಿಂದಲೂ ದರ್ಶನ್ ಪರವಾಗಿ ಗಟ್ಟಿಯಾಗಿ ನಿಂತುಕೊಂಡಿದ್ದಾರೆ. ಇದೀಗ ಚಾಮರಾಜನಗರ ದಸರಾ ವೇದಿಕೆಯಲ್ಲೂ ಬಹಿರಂಗವಾಗಿ ದರ್ಶನ್ ಪರ ಬ್ಯಾಟ್ ಬೀಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮನಗೆದ್ದಿದೆ.