ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಾಯಕನಾಗಿ ನಟಿಸಿ ನಿರ್ದೇಶಿಸಲಿರುವ ಹೊಸ ಪ್ಯಾನ್ ಇಂಡಿಯಾ ದೇಶಭಕ್ತಿ ಸಿನಿಮಾಗೆ ನವೆಂಬರ್ 27ರಂದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದೆ.
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ದೇಶಭಕ್ತಿ ಚಿತ್ರಕ್ಕೆ ಸಿದ್ಧತೆ ಜೋರಾಗಿದೆ. ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನವೆಂಬರ್ 27ರಂದು ಅದ್ಧೂರಿಯಾಗಿ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆಯನ್ನೂ ಘೋಷಿಸಲು ಚಿತ್ರತಂಡ ಯೋಜಿಸಿದೆ.
ತಮ್ಮ ವಿಭಿನ್ನ ಅಭಿನಯ ಹಾಗೂ ಮೈನವಿರೇಳಿಸುವ ಆಕ್ಷನ್ ದೃಶ್ಯಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಗುರುತಿಸಿಕೊಂಡಿರುವ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತೊಂದು ಮಹತ್ವದ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ನಾಯಕನಾಗಿ ಮಾತ್ರವಲ್ಲದೆ, ನಿರ್ದೇಶಕರಾಗಿಯೂ ಅವರು ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಪ್ರೆಸಿಡೆನ್ಷಿಯಲ್ ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಅನೂಪ್ ಮೋಹನ್ ಈ ಬೃಹತ್ ಬಜೆಟ್ನ ದೇಶಭಕ್ತಿ ಪ್ರಧಾನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿಶೇಷವೆಂದರೆ, ನವೆಂಬರ್ 27ರಂದು ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಚಿತ್ರದ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ದಿನ ಸಿನಿಮಾದ ಟೈಟಲ್ ಕೂಡ ಅಧಿಕೃತವಾಗಿ ಅನಾವರಣಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.
ಇತಿಹಾಸದಲ್ಲಿ ವಿಶೇಷ ಘಟನೆ
ಯಾವುದೇ ರಾಜಿ ಮಾಡಿಕೊಳ್ಳದೆ ಅದ್ಧೂರಿಯಾಗಿ ನಿರ್ಮಾಣವಾಗಲಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಚಿತ್ರದ ಪೂಜಾ ಕಾರ್ಯಕ್ರಮ ನಡೆಯುತ್ತಿರುವುದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ವಿಶೇಷ ಘಟನೆಯಾಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.
ಈ ಸಿನಿಮಾದಲ್ಲಿ ಬಾಲಿವುಡ್ ಸೇರಿದಂತೆ ವಿವಿಧ ಪ್ರಾದೇಶಿಕ ಚಿತ್ರರಂಗಗಳ ಖ್ಯಾತ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಲಿದ್ದಾರೆ. ಹೀಗಾಗಿ ಇದು ಬೃಹತ್ ತಾರಾಗಣ ಮತ್ತು ತಾಂತ್ರಿಕ ತಂಡವನ್ನು ಒಳಗೊಂಡ ಬಹುಭಾಷಾ ಪ್ಯಾನ್ ಇಂಡಿಯಾ ಚಿತ್ರವಾಗಿ ರೂಪುಗೊಳ್ಳುತ್ತಿದೆ. ಚಿತ್ರಕ್ಕೆ ಅನೂಪ್ ಮೋಹನ್ ಬಂಡವಾಳ ಹೂಡುತ್ತಿದ್ದರೆ, ಜೋಸ್ ಎಂ. ಥಾಮಸ್ ರಾಯ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ನಿವೃತ್ತ ಸೇನಾಧಿಕಾರಿ ಮೇಜರ್ ವಿಜಯ್ ಭಾರ್ಗವನ್ ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದಾರೆ.
ವಿಭಿನ್ನ ಸಿನಿಮೀಯ ಅನುಭವ
ದೇಶಭಕ್ತಿ, ಧೈರ್ಯ, ಸಾಹಸ, ತ್ಯಾಗ ಹಾಗೂ ಭಾರತದ ಮಹತ್ವವನ್ನು ಸಾರುವ ಬಲವಾದ ಕಥಾಹಂದರದೊಂದಿಗೆ ಸಿನಿಮಾ ಮೂಡಿಬರಲಿದೆ ಎನ್ನಲಾಗಿದೆ. ಅದ್ಧೂರಿ ತಾರಾಗಣ ಮತ್ತು ಉನ್ನತ ತಾಂತ್ರಿಕ ಗುಣಮಟ್ಟದ ಮೂಲಕ ಪ್ರೇಕ್ಷಕರಿಗೆ ವಿಭಿನ್ನ ಸಿನಿಮೀಯ ಅನುಭವ ನೀಡುವುದು ಚಿತ್ರತಂಡದ ಉದ್ದೇಶ.
ಇನ್ನು ಅರ್ಜುನ್ ಸರ್ಜಾ ಅವರ ಈ ಹೊಸ ಪ್ರಯತ್ನದ ಮೇಲೆ ಸಿನಿಪ್ರಿಯರ ಕುತೂಹಲ ಹೆಚ್ಚಾಗಿದೆ. ನವೆಂಬರ್ 27ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಮುಹೂರ್ತ ಸಮಾರಂಭದ ಜೊತೆಗೆ ಚಿತ್ರದ ಟೈಟಲ್ ಕೂಡ ಬಹಿರಂಗವಾಗಲಿರುವುದರಿಂದ, ಸಿನಿಮಾದ ಮುಂದಿನ ಅಪ್ಡೇಟ್ಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರೆಸಿಡೆನ್ಷಿಯಲ್ ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಪ್ರತಿಷ್ಠಿತ ಸಿನಿಮಾ ಇದಾಗಿದೆ.
















