ಫ್ರೀಡಂ ಪಾರ್ಕ್ನಲ್ಲಿ ₹15,000 ಗೌರವಧನಕ್ಕಾಗಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನಟ ಪ್ರಥಮ್ ಮತ್ತು ಮಹಿಳಾ ಆಟೋ ಚಾಲಕಿಯರು ಬೆಂಬಲ ನೀಡಿದ್ದಾರೆ. ಸರ್ಕಾರಕ್ಕೆ ಸಿದ್ದರಾಮಯ್ಯ ಅವರ ಭರವಸೆಯನ್ನು ನೆನಪಿಸಿದ ಪ್ರಥಮ್, ಮಹಿಳೆಯರ ಬೇಡಿಕೆಯನ್ನು ಶೀಘ್ರವಾಗಿ ಈಡೇರಿಸಲು ಆಗ್ರಹಿಸಿದರು.
ಬೆಂಗಳೂರು (ನ.26): ಫ್ರೀಡಂ ಪಾರ್ಕ್ನಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಹಾಗೂ ಸಿಲಿಕಾನ್ ಸಿಟಿಯ ಮಹಿಳಾ ಆಟೋ ಚಾಲಕಿಯರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಭರ್ಜರಿ ಬೆಂಬಲ ಸೂಚಿಸಿದ್ದಾರೆ! ತಮ್ಮ ನ್ಯಾಯಯುತ ಬೇಡಿಕೆಯಾದ ಮಾಸಿಕ ₹15,000 ಗೌರವಧನಕ್ಕಾಗಿ ಚಳಿ-ಗಾಳಿ ಲೆಕ್ಕಿಸದೆ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಭೇಟಿಯಾದ ನಟ ಪ್ರಥಮ್, ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಪ್ರತಿಭಟನಾನಿರತ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದ ನಟ ಪ್ರಥಮ್, ಸರ್ಕಾರಕ್ಕೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತನ್ನು ನೆನಪಿಸಿ ಸರ್ಕಾರಕ್ಕೆ ಮನವಿ ಮಾಡಿದರು. ನಾನು ಒಂದೇ ಮಾತು ಹೇಳುವುದು. ನೀವು 10 ದಿನಗಳಿಂದ ಹೋರಾಟ ಮಾಡುತ್ತಿದ್ದೀರಾ. ನಿಜ ಹೇಳಬೇಕೆಂದರೆ ನೀವು ₹15 ಸಾವಿರ ಅಲ್ಲ, ₹30 ಸಾವಿರ ಕೇಳಬೇಕಿತ್ತು. ಈಗ ಏನೇ ಆಗಲಿ, ₹15 ಸಾವಿರ ಇಸ್ಕೊಂಡೇ ಮನೆಗೆ ಹೋಗಿ. ನಿಮ್ಮ ಪರಿಸ್ಥಿತಿ ನೋಡಿ ತುಂಬಾ ಬೇಜಾರಾಗುತ್ತಿದೆ ಎಂದು ಹೇಳಿದ್ದಾರೆ. ಸಿನಿಮಾ ಪ್ರಮೋಷನ್ಗಳಿಗೆ ನಾವು ದುಡ್ಡು ಇಸ್ಕೊಂಡು ಹೋಗುತ್ತೇವೆ. ಆದರೆ ಇಂತಹ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನೀವೆಲ್ಲಾ ಹಳ್ಳಿಯ ಹೆಣ್ಣು ಮಕ್ಕಳು. ಮಗುವಿನ ಆರೈಕೆ ಮಾಡುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ₹15 ಸಾವಿರ ಕೊಡಲೇಬೇಕು. ಎಲ್ಲರಿಗೂ ನಿಮ್ಮ ಮೇಲೆ ಕಾಳಜಿ ಇದೆ ಎಂದಿದ್ದಾರೆ.
ಸಿದ್ದರಾಮಣ್ಣ ಮೊದಲೇ ನಿಮಗೆ ಪ್ರಾಮಿಸ್ ಮಾಡಿದ್ದರು. ಮಾತು ಕೊಟ್ಟಿದ್ದೀರಾ, ಅದರಂತೆ ನಡೆದುಕೊಳ್ಳಿ. ಲಕ್ಷಾಂತರ ಕೋಟಿ ರೂಪಾಯಿ ಬಜೆಟ್ ಇದೆ ಸರ್ಕಾರಕ್ಕೆ ₹20 ಕೋಟಿ ಕೊಡೋಕೆ ಆಗುತ್ತಿಲ್ಲವಾ? ಸರ್ಕಾರ ಬೇಗ ಆಶಾಗಳಿಗೆ ಸ್ಪಂದಿಸಬೇಕು. ನೀವು ಬೇಗ ತೀರ್ಮಾನ ತೆಗೆದುಕೊಂಡರೆ ಆಶಾಗಳು ಬೇಗ ಮನೆಗೆ ಹೋಗುತ್ತಾರೆ. ಯಾವುದೇ ಸರ್ಕಾರ ಆಗಿರಲಿ ಮಹಿಳೆಯರಿಗೆ ತೊಂದರೆ ಕೊಡಬೇಡಿ. ನಾನು ನಿಮ್ಮ ಪರವಾಗಿ ಸಿದ್ದರಾಮಣ್ಣ ಅವರನ್ನೂ ಕೇಳಿಕೊಳ್ಳುತ್ತೇನೆ" ಎಂದು ಪ್ರಥಮ್ ತಿಳಿಸಿದರು. ಮಳೆ ಅಲ್ಲ ಸುನಾಮಿ ಬರಲಿ, ನಿಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಇಲ್ಲಿಂದ ಹೋಗಬೇಡಿ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ಸಹ ಇವರಿಗೆ ಸಪೋರ್ಟ್ ಮಾಡಬೇಕು ಎಂದು ಪ್ರಥಮ್ ಕರೆ ನೀಡಿದರು.
ಆಶಾ ಹೋರಾಟಕ್ಕೆ ಸಿಲಿಕಾನ್ ಸಿಟಿ ಮಹಿಳಾ ಆಟೋ ಚಾಲಕಿಯರ ಮಾನವೀಯ ಸಾಥ್
ಮತ್ತೊಂದೆಡೆ, ಕಳೆದ ಹತ್ತು ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಬೀಡುಬಿಟ್ಟಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನ ಮಹಿಳಾ ಆಟೋ ಚಾಲಕಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹಿಳಾ ಸಬಲೀಕರಣ ಮತ್ತು ದುಡಿಯುವ ಮಹಿಳೆಯರ ಪರವಾಗಿ ನಿಂತಿರುವ ಆಟೋ ಚಾಲಕಿಯರು, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಆಶಾ ಕಾರ್ಯಕರ್ತೆಯರ ಊಟೋಪಚಾರಕ್ಕೆ ಅನುಕೂಲವಾಗುವಂತೆ ದಿನಸಿ ಸಾಮಾನುಗಳನ್ನು ನೀಡಿ ಹೋರಾಟಕ್ಕೆ ಸಹಕಾರ ನೀಡಿದ್ದಾರೆ.
















