'ಏಕ್ ದಿನ್' ಚಿತ್ರದ ಸಂಗೀತ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ವೇದಿಕೆ ಏರಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ. ಗಾಯಕಿ ಮೇಘನಾ ಮಿಶ್ರಾ ಜೊತೆ ಸೇರಿ ಚಿತ್ರದ ಟೈಟಲ್ ಸಾಂಗ್ ಹಾಡಿದ್ದಾರೆ. ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ನಟನೆಯ ಈ ಸಿನಿಮಾ 2026ರ ಮೇ 1 ರಂದು ತೆರೆಗೆ ಬರಲಿದೆ.
‘ಏಕ್ ದಿನ್’ ಸಿನಿಮಾ ರಿಲೀಸ್‌ಗೆ ಹತ್ತಿರವಾಗ್ತಿದ್ದಂತೆ, ಚಿತ್ರತಂಡ ‘ಏಕ್ ದಿನ್ ಕಿ ಮೆಹಫಿಲ್’ ಅನ್ನೋ ವಿಶೇಷ ಸಂಗೀತ ಕಾರ್ಯಕ್ರಮವನ್ನ ಆಯೋಜಿಸಿತ್ತು. ಆದರೆ, ಈ ಕಾರ್ಯಕ್ರಮದ ಅತಿದೊಡ್ಡ ಹೈಲೈಟ್ ಆಗಿದ್ದು ಆಮಿರ್ ಖಾನ್. ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ನಟನೆಯ ಈ ರೊಮ್ಯಾಂಟಿಕ್ ಡ್ರಾಮಾ ಸಿನಿಮಾದ ಹಾಡುಗಳನ್ನ ಸಂಭ್ರಮಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಕಾದಿತ್ತು.
ಆಮಿರ್ ಖಾನ್, ಗಾಯಕಿ ಮೇಘನಾ ಮಿಶ್ರಾ ಜೊತೆ ವೇದಿಕೆ ಏರಿ ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿದರು. ಈ ಹಾಡನ್ನು ಮೂಲತಃ ಅರಿಜಿತ್ ಸಿಂಗ್ ಜೊತೆ ಸೇರಿ ಮೇಘನಾ ಮಿಶ್ರಾ ಹಾಡಿದ್ದರು. ಈ ಕಾರ್ಯಕ್ರಮದ ವಿಡಿಯೋಗಳು ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಆಮಿರ್ ಅವರ ಸಹಜ ಮತ್ತು ಮನಮುಟ್ಟುವ ಗಾಯನಕ್ಕೆ ಅನೇಕರು ಭೇಷ್ ಎಂದಿದ್ದಾರೆ. ಚಿತ್ರತಂಡ ಕೂಡ ಈ ವಿಡಿಯೋ ಕ್ಲಿಪ್ ಶೇರ್ ಮಾಡಿಕೊಂಡು, "ಯಾರಿಗೆ ಗೊತ್ತಿತ್ತು... ಏಕ್ ದಿನ್, ಆಮಿರ್ ಖಾನ್ ಹಾಡುತ್ತಾರೆ ಅಂತ. #EkDin ಸಿನಿಮಾ ಮೇ 1, 2026 ರಂದು ಥಿಯೇಟರ್‌ಗಳಲ್ಲಿ ಮಾತ್ರ ನೋಡಿ" ಎಂದು ಬರೆದುಕೊಂಡಿದೆ.
ಭಾವನಾತ್ಮಕ ಪ್ರೇಮಕಥೆ
ಇತ್ತೀಚೆಗೆ ಚಿತ್ರತಂಡ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿತ್ತು. ಪ್ರಾಮಾಣಿಕವಾಗಿ ಗಂಟೆ ಬಾರಿಸಿದರೆ ನಿಜವಾದ ಪ್ರೀತಿ ಸಿಗುತ್ತದೆ ಎಂಬ ನಂಬಿಕೆಯಿರುವ 'ಫಾರ್ಚೂನ್ ಬೆಲ್' ಸುತ್ತ ಈ ಕಥೆ ಸಾಗುತ್ತದೆ. ಟ್ರೇಲರ್‌ನಲ್ಲಿ, ಜುನೈದ್ ಖಾನ್ ಪಾತ್ರವು ಸಾಯಿ ಪಲ್ಲವಿ ಪಾತ್ರವಾದ ಮೀರಾಳಿಗಾಗಿ ಪ್ರಾರ್ಥಿಸುವುದನ್ನು ಕಾಣಬಹುದು. 'ಒಂದೇ ದಿನಕ್ಕಾದರೂ ಈ ಆಸೆ ನಿಜವಾಗಲಿ' ಎಂದು ಆತ ಹೇಳುತ್ತಾನೆ. ಈ ಝಲಕ್, ಒಂದು ಸುಂದರ ಮತ್ತು ಭಾವನಾತ್ಮಕ ಪ್ರೇಮಕಥೆಯ ಸುಳಿವು ನೀಡಿದ್ದು, ಪ್ರೇಕ್ಷಕರು ಮುಖ್ಯ ಜೋಡಿಯ ಕೆಮಿಸ್ಟ್ರಿಯನ್ನು ಮೆಚ್ಚಿಕೊಂಡಿದ್ದಾರೆ.
ನಾಯಕನಾಗಿ ಜುನೈದ್ ಖಾನ್ ಅವರ ಮೂರನೇ ಪ್ರಮುಖ ಸಿನಿಮಾ ಇದಾಗಿದೆ. ಇನ್ನು, ಈ ಚಿತ್ರದ ಮೂಲಕ ಸಾಯಿ ಪಲ್ಲವಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆಮಿರ್ ಖಾನ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಸುನಿಲ್ ಪಾಂಡೆ ನಿರ್ದೇಶಿಸಿದ್ದಾರೆ. ಸಿನಿಮಾ 2026ರ ಮೇ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.


