Bollywood actress Neena Gupta: ನೀನಾ ಗುಪ್ತಾ ಬಹುಶಃ ಯಾರಿಗೂ ತಿಳಿದಿರದ ಜೀವನದ ಒಂದು ಕಹಿ ಸತ್ಯವನ್ನ ತಮ್ಮ ಅಭಿಮಾನಿಗಳಿಗಾಗಿ ಬಹಿರಂಗಪಡಿಸಿದ್ದಾರೆ. ಜೊತೆಗೆ ಸಮಾಜದಲ್ಲಿ ಪುರುಷರ ಮನಸ್ಥಿತಿಯ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಖ್ಯಾತ ಬಾಲಿವುಡ್ ನಟಿ ನೀನಾ ಗುಪ್ತಾ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ಅವರ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿದ್ದರೆ, ಮತ್ತೆ ಕೆಲವೊಮ್ಮೆ ಅವರ ಉಡುಪುಗಳಿಂದಾಗಿಯೇ ಸುದ್ದಿಯಲ್ಲಿರುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಸಮಾಜ ಏನಂದುಕೊಳ್ಳುತ್ತದೆ ಎಂಬುದನ್ನು ಕೇರ್ ಮಾಡದೆ ತಮ್ಮ ಜೀವನದ ಅತ್ಯಂತ ವೈಯಕ್ತಿಕ ಮತ್ತು ನೋವಿನ ಕಥೆಗಳನ್ನು ಹಂಚಿಕೊಳ್ಳುವ ಜನರಲ್ಲಿ ನೀನಾ ಕೂಡ ಒಬ್ಬರು. ಸದ್ಯ ನೀನಾ ತಮ್ಮ ಮದುವೆ, ಸಮಾಜದ ದ್ವಂದ್ವ ಮಾನದಂಡಗಳು ಮತ್ತು ತನ್ನ ಜೀವನದಲ್ಲಾದ ನೋವಿನ ಘಟನೆಯ ಬಗ್ಗೆ ಮುಲಾಜಿಲ್ಲದೆ ಮಾತನಾಡಿದ್ದಾರೆ.

ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆ (Humans of Bombay) ಜೊತೆ ಮಾತನಾಡಿದ ನೀನಾ ಗುಪ್ತಾ, ತಮ್ಮ ಜೀವನದ ಬಗ್ಗೆ, ನಿಜವಾದ, ಯಾರೂ ಕೇಳಿರದ ಕಥೆಯನ್ನು ಹಂಚಿಕೊಂಡಿದ್ದಾರೆ. ಅದು ಇನ್ನೂ ಅವರನ್ನು ಕಾಡುತ್ತಿದೆಯಂತೆ. ನಿಶ್ಚಿತಾರ್ಥ ಮಾಡಿಕೊಂಡಿದ್ದ ನೀನಾ ಗುಪ್ತಾ ಮದುವೆಯ ಬಗ್ಗೆ ಭಾರೀ ಉತ್ಸುಕರಾಗಿದ್ದರು. ಕುಟುಂಬವನ್ನು ಪ್ರಾರಂಭಿಸಲು ಸಿದ್ಧರಾಗಿದ್ದರು. ಬಟ್ಟೆ ಮತ್ತು ಆಭರಣಗಳನ್ನು ಖರೀದಿಸಲು ದೆಹಲಿಗೆ ಹೋಗಿದ್ದರು. ಆದರೆ ಇದ್ದಕ್ಕಿದ್ದಂತೆ ಮದುವೆಗೆ ಸ್ವಲ್ಪ ಮೊದಲು ಅವರಿಗೆ ಬಂದ ಫೋನ್ ಕರೆ ಎಲ್ಲವನ್ನೂ ಛಿದ್ರಗೊಳಿಸಿತು. ಆ ವ್ಯಕ್ತಿ ಸ್ಪಷ್ಟ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಸಂಬಂಧವನ್ನು ಮುರಿದುಕೊಂಡರು. ನೀನಾಗೆ "ಈಗ ಮದುವೆ ಆಗುತ್ತಿಲ್ಲ" ಎಂದು ಕರೆ ಬಂತು. ಏನಾಯಿತು ಎಂದು ಕೇಳಿದ್ದಕ್ಕೆ ಸೈನಸ್ ಆಪರೇಷನ್ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಇಲ್ಲಿಯವರೆಗೆ ಮದುವೆ ಮುರಿದುಬಿದ್ದ ಹಿಂದಿನ ನಿಜವಾದ ಕಾರಣ ನನಗೆ ತಿಳಿದಿಲ್ಲ. ಏನಾಯಿತು ಎಂದು ನಾನು ಹೆತ್ತವರನ್ನು ಕೇಳುತ್ತಲೇ ಇದ್ದೆ. ಆದರೆ ಅವರು ನನಗೆ ಇದುವರೆಗೂ ಹೇಳಿಲ್ಲ ಎಂದಿರುವ ನೀನಾ ಗುಪ್ತಾ, ಆ ಸಮಯದಲ್ಲಿ ತಾನು ತುಂಬಾ ದುಃಖಿತಳಾಗಿದ್ದೆ. ಆದರೆ ಕಥೆ ಅಲ್ಲಿಗೆ ಮುಗಿಯಲಿಲ್ಲ. ಸುಮಾರು ಆರು ತಿಂಗಳ ನಂತರ ಅದೇ ವ್ಯಕ್ತಿ ಮತ್ತೆ ತನ್ನನ್ನು ಸಂಪರ್ಕಿಸಿ ಮದುವೆಯ ಪ್ರಸ್ತಾಪ ಮಾಡಿದರು ಎಂದು ತಿಳಿಸಿದ್ದಾರೆ. ಆದರೆ ಆ ಹೊತ್ತಿಗೆ ನೀನಾ ತನ್ನ ಮನಸ್ಸನ್ನು ಬದಲಾಯಿಸಿದ್ದರು. ತನ್ನ ಘನತೆಯನ್ನು ಹೃದಯದಲ್ಲಿಟ್ಟುಕೊಂಡು ಆ ಪ್ರಸ್ತಾಪವನ್ನು ತಿರಸ್ಕರಿಸಿದರಂತೆ. 

ಸಮಾಜವು ಸ್ವಾವಲಂಬಿ ಮಹಿಳೆಯರನ್ನು ಸ್ವೀಕರಿಸುವುದಿಲ್ಲವೇ?

ಸಂದರ್ಶನದ ಸಮಯದಲ್ಲಿ ನೀನಾ, ಮಹಿಳೆಯರು ತಮ್ಮದೇ ಆದ ರೀತಿಯಲ್ಲಿ ಬದುಕುವುದನ್ನು ನೋಡಿ ಜನರು ಇನ್ನೂ ಅನಾನುಕೂಲಪಡುವ ಸಾಮಾಜಿಕ ಮನಸ್ಥಿತಿಯ ಬಗ್ಗೆಯೂ ಮಾತನಾಡಿದ್ದಾರೆ. 95% ಪುರುಷರು ವಿಧೇಯರಾಗಿರುವ ಮಹಿಳೆಯರನ್ನೇ ಬಯಸುತ್ತಾರೆ. ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿರದ ಮತ್ತು ತಮ್ಮ ವೃತ್ತಿಜೀವನಕ್ಕೆ ಸಂಪೂರ್ಣವಾಗಿ ಸಮರ್ಪಿತರಾಗದ ಮಹಿಳೆಯರು" ಎಂದು ಅವರು ಹೇಳಿದರು. ಪುರುಷ ಪ್ರಾಬಲ್ಯದ ಸಮಾಜದಲ್ಲಿ ಸ್ವತಂತ್ರ ಮಹಿಳೆಯನ್ನು ಹೆಚ್ಚಾಗಿ ಮದುವೆಗೆ "ಸೂಕ್ತ" ಎಂದು ಪರಿಗಣಿಸಲಾಗುವುದಿಲ್ಲ ಎಂದು ನೀನಾ ನಂಬುತ್ತಾರೆ.

ತಾನು ಪ್ರತಿಯೊಬ್ಬ ಪುರುಷನ ಬಗ್ಗೆ ಹೀಗೆ ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು , ಅವರ ದೀರ್ಘ ಅನುಭವದ ಆಧಾರದ ಮೇಲೆ ಸಮಾಜವು ಇನ್ನೂ ಬಲಿಷ್ಠ ಮಹಿಳೆಯರನ್ನು ಸಂಪೂರ್ಣವಾಗಿ ಸ್ವೀಕರಿಸಲು ಸಿದ್ಧವಾಗಿಲ್ಲ ಎಂದು ತಿಳಿಸಿದರು.

ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಲೇ ಇದೆ ಈ ವಿಷಯ

ನೀನಾ ಗುಪ್ತಾ ಅವರ ವೈಯಕ್ತಿಕ ಜೀವನವು ಯಾವಾಗಲೂ ಎಲ್ಲರ ಗಮನ ಸೆಳೆಯುತ್ತದೆ. 1980 ರಲ್ಲಿ ಸಿಂಗಲ್ ಮದರ್ ಆಗಿರುವ ಅವರ ನಿರ್ಧಾರ ಇಂದಿಗೂ ಚರ್ಚೆಯ ವಿಷಯವಾಗಿದೆ. ಹಲವು ವರ್ಷಗಳ ನಂತರವೂ ಈ ವಿಷಯವು ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಆದರೆ ನೀನಾ ಎಂದಿಗೂ ಹಿಂತಿರುಗಿ ನೋಡಿಲ್ಲ. ಇಂದಿಗೂ ಜನರು ಇದನ್ನು ಉಲ್ಲೇಖಿಸಿದಾಗ ನೀನಾ ಇದನ್ನು ಸಾಂಪ್ರದಾಯಿಕ ರೂಢಿಗಳಿಂದ ಮುಕ್ತರಾಗಲು ಸಾಧ್ಯವಾಗದ ಸಾಮಾಜಿಕ ಮನಸ್ಥಿತಿಯ ಪ್ರತಿಬಿಂಬವೆಂದು ಪರಿಗಣಿಸುತ್ತಾರೆ.