ಅಮೇಥಿ(ಮೇ.08): ರಾಜೀವ್ ಗಾಂಧಿ ಭ್ರಷ್ಟಾಚಾರಿ ನಂ.1 ಎಂಬ ಹಣೆಪಟ್ಟಿ ಹೊತ್ತು ಜೀವನವನ್ನು ಅಂತ್ಯಗೊಳಿಸಿದರು ಎಂಬ ಪ್ರಧಾನಿ ಮೋದಿ ಹೇಳಿಕೆ ಸೃಷ್ಟಿಸಿರುವ ವಾದ-ವಿವಾದ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ.

ಆದರೆ ಚುನಾವಣಾ ಆಯೋಗ ರಾಜೀವ್ ಗಾಂಧಿ ಕುರಿತಾದ ಪ್ರಧಾನಿ ಮೋದಿ ಹೇಳಿಕೆಗೆ ಕ್ಲಿನ್ ಚಿಟ್ ನೀಡಿದೆ. ಆದರೆ ಈ ಕುರಿತು ಕಾಂಗ್ರೆಸ್ ಸುಪ್ರಿಂಕೋರ್ಟ್ ಮೆಟ್ಟಿಲೇರಿದೆ.

ಈ ಮಧ್ಯೆ ಮಾಜಿ ಪ್ರಧಾನಿ ಕುರಿತ ಪ್ರಧಾನಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಅಮೇಥಿಯ ಮನೋಜ್ ಕಶ್ಯಪ್ ಎಂಬುವವರು, ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ್ದು, ದೇಶಕ್ಕಾಗಿ ಅವರು ಅನೇಕ ಕೊಡುಗೆ ನೀಡಿದ್ದಾರೆ. ಪ್ರಮುಖವಾಗಿ ಮತದಾನದ ವಯಸ್ಸನ್ನು 18 ವರ್ಷಕ್ಕೆ ಇಳಿಸಿದ್ದು, ಕಂಪ್ಯೂಟರ್ ಕ್ರಾಂತಿ, ಪಂಚಾಯತ್ ರಾಜ್ ವ್ಯವಸ್ಥೆ ಗೆ ಬಲ ತುಂಬಿದ ಶ್ರೇಯಸ್ಸು ರಾಜೀವ್ ಗಾಂಧಿಗೆ ಸಲ್ಲಬೇಕು ಎಂದು ಮನೋಜ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಇಂತಹ ಮಹಾನ್ ನಾಯಕನಿಗೆ ಪ್ರಧಾನಿ ಮೋದಿ ಅವಮಾಣನಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು, ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಬರೆದ ಪತ್ರದಲ್ಲಿ ಮನೋಜ್ ಕಶ್ಯಪ್ ಒತ್ತಾಯಿಸಿದ್ದಾರೆ.

ರಾಜೀವ್ ಗಾಂಧಿ ಕುರಿತು ಅವಹೇಳನಕಾರಿಯಾಗಿ ಮಾತನಾಡುವವರು ಅವರನ್ನು ಕೊಂದ ಪಾಪಿಗಳಷ್ಟೇ ದುಷ್ಟರು ಎಂದು ಅಮೇಥಿ ಜನ ಭಾವಿಸುತ್ತಾರೆ ಎಂದೂ ಮನೋಜ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ