ಲಕ್ನೋ[ಮೇ.05]: ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ತಮ್ಮ ವ್ಯಕ್ತಿತ್ವ್ಕೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಿರುವ ಮೋದಿ, ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿ ವಿರುದ್ಧ ಪರೋಕ್ಷವಾಗಿ ಕಿಡಿ ಕಾರುತ್ತಾ 'ಮಿಸ್ಟರ್ ಕ್ಲೀನ್' ಜೀವನ 'ಭ್ರಷ್ಟಾಚಾರಿ ನಂಬರ್ ವನ್' ಆಗಿ ಕೊನೆಯಾಗಿತ್ತು ಎಂದಿದ್ದಾರೆ. 

ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಸಮಾವೇಶವನ್ನುದ್ದೇಶಿಸಿ ರಾಹುಲ್ ಗಾಂಧಿ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ 'ನಿಮ್ಮ ತಂದೆಯನ್ನು ನಿಮ್ಮ ಮನೆತನದವರು ಮಿಸ್ಟರ್ ಕ್ಲೀನ್ ಎಂದು ಬಿಂಬಿಸಿದ್ದರು. ಆದರೆ ನೋಡ ನೋಡುತ್ತಿದ್ದಂತೆಯೇ ಭ್ರಷ್ಟಾಚರಿ ನಂಬರ್ 1 ಅಗಿ ಅವರ ಜೀವನ ಮುಕ್ತಾಯವಾಯ್ತು. ನಿಮ್ಮ ಅಹಂಕಾರವೇ ನಿಮಗೆ ಮುಳುವಾಗಲಿದೆ. ಈ ದೇಶ ತಪ್ಪುಗಳನ್ನು ಕ್ಷಮಿಸುತ್ತದೆ. ಆದರೆ ಮೋಸಗರರನ್ನು ಕ್ಷಮಿಸುವುದಿಲ್ಲ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿರುವ ಮೋದಿ ಕಾಂಗ್ರೆಸ್ ಪಕ್ಷ ಮೊದಲ ಹಂತದ ಚುನಾವಣೆಗೂ ಮುನ್ನ ತನ್ನನ್ನು ತಾನು ಪ್ರಧಾನಿ ಸ್ಥಾನದ ಅಭ್ಯರ್ಥಿಯಾಗಿ ಬಿಂಬಿಸಿಕೊಂಡಿತ್ತು. ಆದರೀಗ ನಾವು ಉತ್ತರ ಪ್ರದೇಶದಲ್ಲಿ ಮತಗಳನ್ನು ಧ್ರುವೀಕರಿಸಲು ಚುನಾವಣಾ ಕಣಕ್ಕಿಳಿದಿದ್ದೇವೆ ಎಂದು ಒಪ್ಪಿಕೊಳ್ಳುತ್ತಿದೆ. ಕಾಂಗ್ರೆಸ್ ಎಷ್ಟರ ಮಟ್ಟಿಗೆ ಪತನಗೊಂಡಿದೆ ಎಂಬುವುದಕ್ಕೆ ಇದುವೇ ಜೀವಂತ ಉದಾಹರಣೆ ಎಂದಿದ್ದಾರೆ.