ಬೆಂಗಳೂರು (ಮಾ. 19): ಲೋಕಸಭಾ ಟಿಕೆಟ್‌ ಹಂಚಿಕೆಗಾಗಿ ಅಮಿತ್‌ ಶಾ, ರಾಮಲಾಲ್ ಜೊತೆಗಿನ ಸಭೆಗಾಗಿ ಬೆಂಗಳೂರಿನ ಕೋರ್‌ ಕಮಿಟಿ ಸಭೆಯ ನಂತರ ಯಡಿಯೂರಪ್ಪ ಒಬ್ಬರೇ ದಿಲ್ಲಿಗೆ ಬರುವವರಿದ್ದರು.

ದೊಡ್ಡಗೌಡರ ಗಾಳಕ್ಕೆ ಸಿಕ್ಕ ಮೀನಿನಂತಾಗಿದೆ ಕಾಂಗ್ರೆಸ್!

ಆದರೆ ರಾಮಲಾಲ್ ಅವರು ಅರುಣ್‌ ಕುಮಾರ್‌ಗೆ ಫೋನ್‌ ಮಾಡಿ, ಈಶ್ವರಪ್ಪ, ಶೆಟ್ಟರ್‌, ಪ್ರಹ್ಲಾದ್‌ ಜೋಶಿ, ಲಿಂಬಾವಳಿ, ಸಿ ಟಿ ರವಿಯನ್ನು ಕರೆದುಕೊಂಡು ಬನ್ನಿ ಎಂದು ಹೇಳಿದ್ದು ಯಡಿಯೂರಪ್ಪ ಅವರಿಗೆ ಸ್ವಲ್ಪ ಕಿರಿಕಿರಿ ಮಾಡಿದೆ. ಒಂದು ವೇಳೆ ಇವರೆಲ್ಲ ಅಮಿತ್‌ ಶಾ ಎದುರು ಶೋಭಾ ಕರಂದ್ಲಾಜೆ ಟಿಕೆಟ್‌ಗೆ ವಿರೋಧ ಮಾಡಿ ತಪ್ಪಿಸಿದರೆ ಏನು ಮಾಡಬೇಕು ಎನ್ನುವ ಆತಂಕ ಅವರದು.

ಸಿ ಟಿ ರವಿ ಅಂತೂ ಶೋಭಾಗೆ ಯಾಕೆ ಟಿಕೆಟ್‌ ಕೊಡಬಾರದು ಎಂದು ದಿಲ್ಲಿ ನಾಯಕರಿಗೆ ತಿಳಿಸಿ ಹೇಳುತ್ತಿದ್ದು, ಇದು ಒಂದು ವೇಳೆ ಕ್ಲಿಕ್‌ ಆದರೆ ಬಿಜೆಪಿ ಒಳಜಗಳ ಇನ್ನಷ್ಟುಮುಂದೆ ಹೋಗಲಿದೆ. ಶೋಭಾಗೆ ಟಿಕೆಟ್‌ ತಪ್ಪಿದರೆ ತಮ್ಮ ಬುಡಕ್ಕೂ ಬರಬಹುದು ಎನ್ನುವ ಆತಂಕ ಭಗವಂತ್‌ ಖೂಬಾ, ನಳಿನ್‌ ಕಟೀಲು ಮತ್ತು ಸುರೇಶ್‌ ಅಂಗಡಿ ಅವರಿಗಿದೆ. ಶೋಭಾ ವಿರುದ್ಧ ಏನೇ ದೂರುಗಳು ಇದ್ದರೂ ವಿನಾಕಾರಣ ಯುದ್ಧಕಾಲದಲ್ಲಿ ಕಲಹ ಬೇಡ ಎಂದು ಅಮಿತ್‌ ಶಾ ಟಿಕೆಟ್‌ ಕೊಟ್ಟರೂ ಕೊಡಬಹುದು.

ನೀವು #ಪಪ್ಪು ಅಂತಾ ಬರ್ಕೊಳ್ಳಿ: ಬಿಜೆಪಿ ಸಚಿವರ ಹೇಳಿಕೆಗೆ ಉರ್ಕೊಂಡ ಕಾಂಗ್ರೆಸ್!

ಈಶ್ವರಪ್ಪ ಶಾಪಿಂಗ್‌ ಟೈಮ್…!

ದಿಲ್ಲಿಗೆ ಬಂದರೂ ಪರ್ರಿಕರ್‌ ನಿಧಾನದಿಂದಾಗಿ ಬಿಜೆಪಿ ಸಭೆ ನಡೆಯದೆ ಖಾಲಿ ಇದ್ದ ಈಶ್ವರಪ್ಪ ಕನಾಟ್‌ ಪ್ಲೇಸ್‌, ಯಶವಂತ್‌ ಮಾರ್ಕೆಟ್‌ನಲ್ಲಿ ಶಾಪಿಂಗ್‌ ಮಾಡುತ್ತಾ ಓಡಾಡುತ್ತಿದ್ದರು. ಬ್ರ್ಯಾಂಡ್‌ ಅಂಗಡಿಗಳಲ್ಲಿ ಲೆದರ್‌ ಬ್ಯಾಗ್‌ ಹುಡುಕಿದ ಈಶ್ವರಪ್ಪ ನಂತರ ದಿಲ್ಲಿ ಅಂಗಡಿಗಳಲ್ಲಿ ಓಡಾಡಿ ಕಡಿಮೆ ಬೆಲೆಗೆ ಬ್ಯಾಗ್‌ ತೆಗೆದುಕೊಳ್ಳಲು ಮೂರು ಗಂಟೆ ಓಡಾಡಿದರು.

ಈಶ್ವರಪ್ಪ ಖಾಲಿ ಇದ್ದಾಗ ಬಾಡೂಟ, ಮಧ್ಯಾಹ್ನದ ಸೊಂಪು ನಿದ್ದೆ ಇರದೇ ಇದ್ದರೆ ಹೇಗೆ? ಸಾಹೇಬರಿಗೆ ಪಿಕ್ಚರ್‌ ಕೂಡ ನೋಡೋದಿತ್ತು. ಆದರೆ ಒಳ್ಳೆ ಸಿನೆಮಾ ಇಲ್ಲ, ಅಮಿತ್‌ ಶಾ ಕರೆದರೆ ಕಷ್ಟಆದೀತು ಎಂದು ಸಿ ಟಿ ರವಿ ಹೇಳಿದ್ದರಿಂದ ಈಶ್ವರಪ್ಪ ಬೇಡ ಬಿಡು ಎಂದರು.

ಯೋಗೇಶ್ವರ ಪುತ್ರಿ ಪ್ರಸ್ತಾಪ

ಬೆಂಗಳೂರು ಗ್ರಾಮಾಂತರದಿಂದ ಯೋಗೇಶ್ವರ್‌ಗೆ ಟಿಕೆಟ್‌ ಕೊಡಲು ಬಿಜೆಪಿ ರೆಡಿ ಇದ್ದರೂ ಕೂಡ ಸಿ ಪಿ ಯೋಗೇಶ್ವರ್‌ ನನ್ನ ಪುತ್ರಿ ನಿಶಾಗೆ ಟಿಕೆಟ್‌ ಕೊಡಿ ಎಂದು ಬೆನ್ನು ಹತ್ತಿದ್ದಾರೆ. ಜ್ಯೋತಿಷಿಗಳ ಬಳಿ ಹೋಗಿದ್ದ ಯೋಗೇಶ್ವರ್‌, ಡಿ ಕೆ ಸುರೇಶ್‌ ವಿರುದ್ಧ ನನಗೆ ಯೋಗ ಇಲ್ಲ ಎಂದು ಭವಿಷ್ಯ ಹೇಳುತ್ತಿದ್ದಾರೆ. ಆದರೆ ಮಗಳಿಗೆ ಒಳ್ಳೆ ಯೋಗವಿದೆ, ಗೆಲ್ಲುತ್ತಾಳೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.

ಸಂತೋಷ್‌ ಏನಂತಾರೆ?

ಬೆಂಗಳೂರಿನ ಕೋರ್‌ ಕಮಿಟಿಯಲ್ಲಿ ಬಿಜೆಪಿ ನಾಯಕರು ಒಂದು ಪಟ್ಟಿತಯಾರು ಮಾಡಿ ತಂದಿದ್ದರೂ ಯಡಿಯೂರಪ್ಪ ಅವರಿಗೆ ಇರುವ ಇನ್ನೊಂದು ಆತಂಕ ಸಂಘ ಪ್ರಚಾರಕ ಸಂತೋಷರದ್ದು. ಬೆಂಗಳೂರಿನ ಸಭೆಗೆ ಅಪೇಕ್ಷಿತರಿದ್ದರೂ ಕೂಡ ಹೋಗದ ಸಂತೋಷ್‌ಗೆ ಮೋದಿ ಮತ್ತು ಅಮಿತ್‌ ಶಾ ಜೊತೆ ಘನಿಷ್ಠ ಸಂಬಂಧಗಳಿವೆ.

ಒಂದು ವೇಳೆ ಸಂತೋಷ್‌ ಮಾತು ಕೇಳಿ ಕೇಂದ್ರದ ನಾಯಕರು ಸರ್ವೇ ರಿಪೋರ್ಟ್‌ ಹೊರತೆಗೆದು ಪಟ್ಟಿಅದಲು ಬದಲು ಮಾಡಿದರೆ ಎಂಬ ಅಳಕು ಯಡಿಯೂರಪ್ಪ ಕ್ಯಾಂಪ್‌ನಲ್ಲಿ ಇದ್ದೇ ಇದೆ. ಇದಕ್ಕಾಗಿ ಯಡಿಯೂರಪ್ಪ ಕೂಡ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸುತ್ತಿದ್ದು, ಅದಕ್ಕಾಗಿಯೇ ಶನಿವಾರ ಆರ್‌ಎಸ್‌ಎಸ್‌ನಲ್ಲಿ ಸಂತೋಷ್‌ಗೆ ವಿರೋಧಿಯಾಗಿರುವ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಮನೆಗೇ ಕರೆಸಿಕೊಂಡಿದ್ದಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ