ಮೈತ್ರಿ ಎಂಬ ಬಲೆ ಬೀಸಿ ಮೊದಲು ಮಗನಿಗೆ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡ ಗೌಡರು, ಈಗ ಸೀಟು ಹಂಚಿಕೆ ಎಂಬ ಗಾಳ ಬೀಸಿ ಒಂದು ಕಡೆ ಮೊಮ್ಮಕ್ಕಳ ಭವಿಷ್ಯ ಭದ್ರ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್‌ನಲ್ಲಿದ್ದ ತಮ್ಮ ಪರಂಪರಾಗತ ಒಕ್ಕಲಿಗ ವಿರೋಧಿಗಳನ್ನು ಹಣಿಯುತ್ತಿದ್ದಾರೆ.
ಬೆಂಗಳೂರು (ಮಾ. 19): ಹೆಚ್ಚೆಂದರೆ 5 ಸೀಟು ಎನ್ನುತ್ತಿದ್ದ ಕಾಂಗ್ರೆಸ್ ರಾಜ್ಯ ನಾಯಕರ ಜೊತೆಗಿನ ಸೀಟು ಹಂಚಿಕೆ ಮಾತುಕತೆಯನ್ನು ಬೆಂಗಳೂರಿನಿಂದ ದೆಹಲಿಗೆ ಶಿಫ್ಟ್ ಮಾಡಿಸಿ 8 ಪಡೆಯುವಲ್ಲಿ ದೇವೇಗೌಡರು ಯಶಸ್ವಿಯಾಗಿದ್ದಾರೆ.
ಮಂಡ್ಯದಲ್ಲಿ ಸುಮಲತಾಗೆ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ,‘ಸಾರಥಿ’ ಸಾಥ್?
ಇದು ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ವಿಪರೀತ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಶತಾಯಗತಾಯ ಮೈತ್ರಿಕೂಟ ಗಟ್ಟಿಇದೆ ಎಂದು ತೋರಿಸಬೇಕು ಎಂಬ ಭರದಲ್ಲಿ ರಾಜ್ಯ ನಾಯಕರನ್ನೂ ಕೂಡ ಕ್ಯಾರೇ ಅನ್ನದ ದಿಲ್ಲಿ ನಾಯಕರು, ಹೆಚ್ಚುವರಿ 3 ಸೀಟನ್ನು ದೇವೇಗೌಡರ ಒತ್ತಡಕ್ಕೆ ಬಾಗಿ ಬಿಟ್ಟುಕೊಟ್ಟಿದ್ದಾರೆ.
ಏಕಕಾಲಕ್ಕೆ ಮೈಸೂರು ಮತ್ತು ತುಮಕೂರು ಸೀಟಿಗಾಗಿ ಪಟ್ಟು ಹಿಡಿದ ಗೌಡರು, ಒಂದು ತಪ್ಪಿದರೂ ಇನ್ನೊಂದು ಸಿಗುತ್ತದೆ ಎಂದು ಪಕ್ಕಾ ಲೆಕ್ಕಹಾಕಿದಂತೆ ಆಗಿದೆ. ಚಿಕ್ಕಬಳ್ಳಾಪುರ ಕೊಡಲು ಆಗದಿದ್ದರೆ ವಿಜಯಪುರ, ಉಡುಪಿ ಬಿಟ್ಟುಕೊಡಿ ಎಂದು ಗೌಡರು ಕೇಳಿದಾಗ ಮೊದಲು ಇಲ್ಲ ಎನ್ನುತ್ತಿದ್ದ ವೇಣುಗೋಪಾಲ್, ಕೇಳಿದಷ್ಟುಕೊಟ್ಟು ಮಾತುಕತೆ ಮುಗಿಸಿ ‘ಡೀಲ್ ಡನ್ ಕರೋ’ ಎಂದು ರಾಹುಲ್ ಗಾಂಧಿಯೇ ಹೇಳಿದ್ದರಿಂದ ಅನಿವಾರ್ಯವಾಗಿ ಗೌಡರು ಹೇಳಿದಂತೆ ಮಾತುಕತೆ ಫೈನಲ್ ಮಾಡಿದ್ದಾರೆ.
'ಕಂಡ-ಕಂಡವರನ್ನು ಅಪ್ಪ ಎನ್ನುವ ಮಧು ಬಂಗಾರಪ್ಪ,' ಅಣ್ಣನ ಇದೆಂಥಾ ಮಾತು..?
ರಾಜ್ಯ ನಾಯಕರು ಬೇಡ ಬೇಡ ಎಂದು ಎಷ್ಟುಹೇಳಿದರೂ ಕೇಳದ ವೇಣುಗೋಪಾಲ್ ಕಾಂಗ್ರೆಸ್ ಅಭ್ಯರ್ಥಿಗಳು ತಯಾರಿದ್ದರೂ ಕೂಡ ತುಮಕೂರು, ವಿಜಯಪುರ ಮತ್ತು ಉಡುಪಿಯನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯದ 8 ಸೀಟ್‌ಗಳಲ್ಲಿ ಗೌಡರ ಮೈತ್ರಿಗಾಗಿ ಕಾಂಗ್ರೆಸ್ ತನ್ನನ್ನು ತಾನೇ ಮುಕ್ತ ಮಾಡಿಕೊಂಡಿದೆ.
ಸಿದ್ದು ಗೆದ್ದರೋ? ಸೋತರೋ?
ಮೊದಲು ಬೆಂಗಳೂರಿನಲ್ಲಿ ವೇಣುಗೋಪಾಲ್ ಎದುರು, ನಂತರ ಮರುದಿನ ಗುಜರಾತ್‌ನಲ್ಲಿ ರಾಹುಲ್ ಗಾಂಧಿ ಎದುರು ಯಾವುದೇ ಕಾರಣಕ್ಕೂ 5ಕ್ಕಿಂತ ಜಾಸ್ತಿ ಕೊಡಬೇಡಿ. ನಮ್ಮ ಮುಖ್ಯಮಂತ್ರಿ ಇದ್ದು, ಮೈತ್ರಿ ಉಳಿಸಿಕೊಳ್ಳಲು ಸೀಟು ಜಾಸ್ತಿ ಬಿಟ್ಟುಕೊಡುವುದಾದರೆ ಅಡ್ಡಿಯಿರಲಿಲ್ಲ. ಅದು ಬಿಟ್ಟು 37 ಬಂದವರಿಗೆ ಮುಖ್ಯಮಂತ್ರಿ ಸ್ಥಾನ ಕೂಡ ಬೇಕು, ಲೋಕಸಭೆಯಲ್ಲಿ 2 ಗೆದ್ದವರಿಗೆ 8 ಸೀಟು ಕೂಡ ಬೇಕು. ಇದು ಒಪ್ಪಲು ಸಾಧ್ಯವಿಲ್ಲ, ನಮ್ಮ ಕಾರ್ಯಕರ್ತರು ತಿರುಗಿ ಬೀಳುತ್ತಾರೆ.
ಅಷ್ಟೇ ಅಲ್ಲ ಬಿಜೆಪಿಯತ್ತ ವಾಲುತ್ತಾರೆ ಎಂದು ಪರಿಪರಿಯಾಗಿ ಹೇಳಿದ್ದಾರೆ. ಕೊನೆಗೆ ಇಲ್ಲ, ನಮಗೆ ಮೈತ್ರಿ ಮುಖ್ಯ. ಈಗ ಮೈತ್ರಿ ಆಗದೇ ಹೋದರೆ ರಾಷ್ಟ್ರಮಟ್ಟದಲ್ಲಿ ಇಮೇಜ್‌ಗೆ ಧಕ್ಕೆ ಆಗುತ್ತದೆ. ವಿಜಯಪುರ, ಕಾರವಾರ, ಉಡುಪಿ ನಾವು ದಶಕಗಳಿಂದ ಗೆಲ್ಲದ ಕ್ಷೇತ್ರಗಳು.
ಇದರ ಜೊತೆಗೆ ತುಮಕೂರು, ಮೈಸೂರಲ್ಲಿ ಒಂದು ಬಿಟ್ಟುಕೊಡಬೇಕಾಗುತ್ತದೆ ಎಂದು ರಾಹುಲ್ ಎದುರೇ ವೇಣುಗೋಪಾಲ್ ಹೇಳಿದಾಗ, ಸರಿ ಹಾಗಾದರೆ ಮೈಸೂರು ಕೊಡಬೇಡಿ. ಕೊಟ್ಟರೆ ಆ ಭಾಗದಲ್ಲಿ ಓಡಾಡಲು ಕಾರಣವೇ ಇಲ್ಲದಂತಾಗುತ್ತದೆ ಎಂದು ವಾಪಸ್ ಬಂದಿದ್ದಾರೆ. ಸಿದ್ದು ಮತ್ತು ವೀರಪ್ಪ ಮೊಯ್ಲಿ ಅವರ ಲಾಬಿಗೆ ಮಣಿದು, ಅವರು ಹೇಳಿದ್ದನ್ನು ಕೇಳಿದ ಹೈಕಮಾಂಡ್, ಪರಮೇಶ್ವರ್ ಅವರ ಮಾತು ಕೇಳದೆ ಮುದ್ದಹನುಮೇಗೌಡರನ್ನು ಹರಕೆಯ ಕುರಿ ಮಾಡಿದೆ.
ಕಾಂಗ್ರೆಸ್‌ನ ಒಕ್ಕಲಿಗರ ಕಥೆ
ಮೈತ್ರಿ ಎಂಬ ಬಲೆ ಬೀಸಿ ಮೊದಲು ಮಗನಿಗೆ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡ ಗೌಡರು, ಈಗ ಸೀಟು ಹಂಚಿಕೆ ಎಂಬ ಗಾಳ ಬೀಸಿ ಒಂದು ಕಡೆ ಮೊಮ್ಮಕ್ಕಳ ಭವಿಷ್ಯ ಭದ್ರ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್‌ನಲ್ಲಿದ್ದ ತಮ್ಮ ಪರಂಪರಾಗತ ಒಕ್ಕಲಿಗ ವಿರೋಧಿಗಳನ್ನು ಹಣಿಯುತ್ತಿದ್ದಾರೆ. ತಮ್ಮನ್ನು ಬಿಟ್ಟು ಕಾಂಗ್ರೆಸ್‌ಗೆ ಹೋಗಿದ್ದ ಮುದ್ದಹನುಮೇಗೌಡರ ವಿರುದ್ಧ ಸೇಡು ತೀರಿಸಿಕೊಂಡ ಗೌಡರು, ಬೆಂಗಳೂರು ಉತ್ತರ ಕೂಡ ತಾವೇ ಇಟ್ಟುಕೊಂಡು ಒಕ್ಕಲಿಗ ಆಕಾಂಕ್ಷಿಗಳನ್ನು ಸುಮ್ಮನಾಗಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಹಿಂದುಳಿದ ವರ್ಗದ ಮೊಯ್ಲಿಗೆ ಕಾಂಗ್ರೆಸ್ ಸೀಟು ಕೊಡುತ್ತದೆಯೇ ಹೊರತು, ಅಲ್ಲಿ ಒಕ್ಕಲಿಗರಿಗೆ ಅವಕಾಶವಿಲ್ಲ. ಇನ್ನು ಬೆಂಗಳೂರು ಗ್ರಾಮಾಂತರದಲ್ಲಿ ಡಿ ಕೆ ಸುರೇಶ್ ಈಗ ಗೌಡರ ಗುಡ್ ಬುಕ್ಸ್‌ನಲ್ಲಿದ್ದಾರೆ. ಜೊತೆಗೆ, ಡಿ ಕೆ ಶಿವಕುಮಾರ್ ಸಹೋದರ ಎನ್ನುವ ಕಾರಣಕ್ಕೆ ಕೈಹಚ್ಚೋಕಾಗಲ್ಲ ಎಂದು ಗೌಡರು ಸುಮ್ಮನಿದ್ದಾರೆ.
ಇವತ್ತಿನ ಜಾತಿ ಗಣಿತದ ಪ್ರಕಾರ, ಬೆಂಗಳೂರು ಸೆಂಟ್ರಲ್ ಮತ್ತು ದಕ್ಷಿಣದಲ್ಲಿ ಕಾಂಗ್ರೆಸ್ ಒಕ್ಕಲಿಗರಿಗೆ ಟಿಕೆಟ್ ಕೊಡೋ ಸ್ಥಿತಿಯಲ್ಲಿಲ್ಲ. ಇನ್ನು ಮಂಡ್ಯ, ಹಾಸನದಲ್ಲಿ ಕಾಂಗ್ರೆಸ್‌ನ ಒಕ್ಕಲಿಗರು ಏನೂ ಮಾಡುವ ಸ್ಥಿತಿಯಲ್ಲಿಲ್ಲ.
ಮೈಸೂರನ್ನು ಗೌಡರು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದರೂ ಅಲ್ಲಿ ಕಾಂಗ್ರೆಸ್ ಕುರುಬರಿಗೆ ಟಿಕೆಟ್ ಕೊಡುತ್ತದೆ. ಆಗ ಮಂಡ್ಯದಲ್ಲಿ ಕುರುಬರು ನಿಖಿಲ್ ವೋಟ್ ಹಾಕಲಿ, ಮೈಸೂರಿನಲ್ಲಿ ಜೆಡಿಎಸ್‌ನವರು ಕಾಂಗ್ರೆಸ್‌ಗೆ ಸಹಾಯ ಮಾಡುತ್ತಾರೆ ಎಂದು ದೇವೇಗೌಡರು ಚೌಕಾಸಿ ಮಾಡಲು ಒಂದು ಕಿಟಕಿ ತೆರೆದಿಟ್ಟಿದ್ದಾರೆ. ದೇವೇಗೌಡರ ಹೊಡೆತಕ್ಕೆ ಕಾಂಗ್ರೆಸ್‌ನ ಒಕ್ಕಲಿಗರ ಸ್ಥಿತಿ ಅಯ್ಯೋ ಪಾಪ!
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 19, 2019, 3:20 PM IST