ಬೆಂಗಳೂರು (ಮಾ. 19): ಗೌಡರ ಜೊತೆಗಿನ ಚೌಕಾಸಿಯಲ್ಲಿ ತನ್ನ ಸ್ಥಾನವನ್ನೇ ಕಳೆದುಕೊಂಡ ಮುದ್ದಹನುಮೇಗೌಡರನ್ನು ದಿಲ್ಲಿಯಲ್ಲಿ ಮಾತನಾಡಿಸುವವರೂ ಕೂಡ ಇರಲಿಲ್ಲ. ಮುದ್ದಹನುಮೇಗೌಡರು ದೇವೇಗೌಡರ ಮನೆ ಮುಂದೆ ಸಂಜೆ 6ರಿಂದ ನಿಂತಿದ್ದರೂ ದೊಡ್ಡಗೌಡರು ಕೊನೆಗೆ ಕರೆದದ್ದು ಕಾರ್‌ ಹತ್ತುವಾಗ ಒಂದೆರಡು ನಿಮಿಷ. ಅದೂ ಕ್ಯಾಮೆರಾ ಮುಂದೆ.

ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್; ಬಿಎಸ್‌ವೈಗೆ ತಳಮಳ

ನಾನೇ ಹೋಗಿ ದೇವೇಗೌಡರ ಬಳಿ ಮಾತನಾಡಿ ತುಮಕೂರು ವಾಪಸ್‌ ಕೊಡಿಸುತ್ತೇನೆ ಎಂದಿದ್ದ ವೇಣುಗೋಪಾಲ್ 5 ನಿಮಿಷ ಕೂಡ ಬರಲಿಲ್ಲ. ಅದು ಬಿಡಿ, ಮುದ್ದಹನುಮೇಗೌಡರ ಫೋನ್‌ ಕೂಡ ಎತ್ತಲಿಲ್ಲ. ದಿಲ್ಲಿಗೆ ಬಂದು ಹಟ ಹಿಡಿದು ಕೂರಬೇಕಿದ್ದ ಪರಮೇಶ್ವರ್‌ ದಿಲ್ಲಿಯತ್ತ ಬರಲಿಲ್ಲ. ಇದು ದೇವೇಗೌಡರ ಅಬ್ಬರದ ಎದುರು ರಾಜ್ಯದ ಕಾಂಗ್ರೆಸ್‌ ನಾಯಕರ ಸ್ಥಿತಿ.

ಮುನಿಯಪ್ಪ ಮತ್ತು ಸ್ವಾಮಿಗಳು

ತಮ್ಮ ವಿರುದ್ಧ ಕೋಲಾರದ 5 ಕಾಂಗ್ರೆಸ್‌ ಶಾಸಕರು ದಿಲ್ಲಿಗೆ ಬರುವ ಸುಳಿವು ಸಿಕ್ಕು ಮುನಿಯಪ್ಪನವರು ದಿಲ್ಲಿಯಲ್ಲಿ ಅಹ್ಮದ್‌ ಪಟೇಲ್, ಗುಲಾಂ ನಬಿ ಮತ್ತು ವೇಣುಗೋಪಾಲ್ ಮನೆಗೆ ಶಾಸಕರಿಗಿಂತ ಮೊದಲೇ ಹೋಗಿಬಂದಿದ್ದರು.

ಆಶ್ಚರ್ಯ ಎಂದರೆ ತಮ್ಮ ಮನೆಯಲ್ಲಿ ಕುಳಿತಿದ್ದ ಪತ್ರಕರ್ತರಿಗೆ, ‘ಈಗ ಶಾಸಕರು ಇವರ ಮನೆಗೆ ಹೋದರಂತೆ ನೋಡಿ, ಈಗ ಬಂದರಂತೆ ನೋಡಿ’ ಎಂದು ಬ್ರೇಕಿಂಗ್‌ ನ್ಯೂಸ್‌ ಕೊಡುತ್ತಿದ್ದ ಮುನಿಯಪ್ಪ, ‘ಸುದ್ದಿ ಹಾಕಿರಿ. ಇವರೆಲ್ಲ ವಿರೋಧ ಮಾಡಿದರೆ ಅನುಕಂಪ ಹೆಚ್ಚಾಗಿ ನಮ್ಮವರು ವೋಟ್‌ ಹಾಕಲು ಹೊರಗೆ ಬರುತ್ತಾರೆ’ ಎನ್ನುತ್ತಿದ್ದರು!

ಇದೆಲ್ಲ ನಮ್ಮ ಶ್ರೀನಿವಾಸಪುರದ ಸ್ವಾಮಿಗಳ ಆಟ ಎನ್ನುತ್ತಿದ್ದ ಮುನಿಯಪ್ಪ,‘ಕೋಲಾರದಿಂದ ಸಂಪುಟಕ್ಕೆ ಯಾರನ್ನೂ ತೆಗೆದುಕೊಳ್ಳಕೂಡದು. ಒಂದು ವೇಳೆ ತೆಗೆದುಕೊಂಡರೆ ಸ್ಪೀಕರ್‌ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದವರು ಈಗ ನೋಡಿದರೆ ಮುನಿಯಪ್ಪ ಯಾರನ್ನೂ ಮಂತ್ರಿ ಮಾಡಲಿಲ್ಲ ಎಂದು ಶಾಸಕರನ್ನು ಗುಡ್ಡೆ ಹಾಕಿಕೊಂಡು ದಿಲ್ಲಿಗೆ ಬಂದಿದ್ದಾರೆ’ ಎಂದು ಹೇಳಿಕೊಳ್ಳುತ್ತಿದ್ದರು.

ಈ ರಾಜ್ಯದಲ್ಲಿ ಸರ್ಕಾರ ರಚಿಸುವವರಿಗೇ ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನ!

ಮುನಿಯಪ್ಪ ಹೇಳುವ ಸ್ವಾಮಿಗಳು ಎಂದರೆ ರಾಜ್ಯ ವಿಧಾನಸಭೆಯ ಅಧ್ಯಕ್ಷರು. 4 ದಿನಗಳ ಕಾಲ ದೆಹಲಿಯಲ್ಲಿದ್ದು ಮುನಿಯಪ್ಪ ವಿರುದ್ಧ ಲಾಬಿ ನಡೆಸಿದ ಸ್ಪೀಕರ್‌ ಸಾಹೇಬರು, ಪತ್ರಕರ್ತರು ಫೋನ್‌ ಮಾಡಿದರೆ ಮಾತ್ರ ಕೆ ಸಿ ವ್ಯಾಲಿ ಕೇಸ್‌ಗಾಗಿ ಬಂದಿದ್ದೇನೆ ಎನ್ನುತ್ತಿದ್ದರು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ