ಜೈಪುರ[ಮಾ.19]: ರಾಜಸ್ಥಾನದ ಲೋಕಸಭೆಯ 25 ಸ್ಥಾನಗಳಿಗೆ ಮಿಷನ್ 25 ನಡೆಸುತ್ತಿರುವ ಕಾಂಗ್ರೆಸ್ ಗೆ ಕಳೆದ 15 ವರ್ಷಗಳಿಂದ ನಡೆದು ಬಂದಿರುವ ಚುನಾವಣಾ ಪರಂಪರೆಯ ಲಾಭ ಸಿಗುವ ನಿರೀಕ್ಷೆಗಳಿವೆ. 2004ರಿಂದ ಈ ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರವೇ ಇಲ್ಲಿನ ಅತಿ ಹೆಚ್ಚು ಲೋಕಸಭಾ ಸ್ಥಾನಗಳಳನ್ನು ಗೆದ್ದುಕೊಂಡಿದೆ. ಸದ್ಯ ಬಿಜೆಪಿ ಈ ಪರಂಪರೆಯನ್ನು ಬದಲಾಯಿಸುವ ಪ್ರಯತ್ನದಲ್ಲಿದೆ. 

ರಾಜಸ್ಥಾನದಲ್ಲಿ 25 ಲೋಕಸಭಾ ಕ್ಷೇತ್ರಗಳಿವೆ ಹಾಗೂ 2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಈ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈವರೆಗೆ ಕೇವಲ ಒಂದು ಬಾರಿಯಷ್ಟೇ ಅಂದರೆ 1984ರಲ್ಲಿ ಎಲ್ಲಾ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇಂದಿರಾ ಗಾಂಧಿಯವರ ಹತ್ಯೆ ಬಳಿಕ ನಡೆದಿದ್ದ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕೈ ಮೇಲುಗೈ ಸಾಧಿಸಿತ್ತು.

ಈ ರಾಜ್ಯದಲ್ಲಿ ತಲಾ ಒಂದೊಂದು ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ 'ಪರಂಪರೆ' ಇದೆ. ಇದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಕಂಡು ಬಂದಿತ್ತು. ರಾಜಸ್ಥಾನದಲ್ಲಿ ಲೊಕಸಭಾ ಚುನಾವಣೆಯ ಫಲಿತಾಂಶ ಗಮನಿಸುವುದಾದರೆ 2004ರಿಂದ ರಾಜ್ಯ ಸರ್ಕಾರದಲ್ಲಿ ಯಾವ ಪಕ್ಷ ಆಡಳಿತ ನಡೆಸುತ್ತಿರುತ್ತದೋ ಅದೇ ಪಕ್ಷ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಅಧಿಕ ಸ್ಥಾನಗಳಲ್ಲಿ ಗೆಲುವಿನ ನಗೆ ಬೀರುತ್ತದೆ. ಅಲ್ಲದೇ ಸಾಮಾಣ್ಯವಾಗಿ ಇಲ್ಲಿನ ರಾಜ್ಯ ವಿಧಾನಸಭೆಯ ಚುನಾವಣೆ ನಡೆದ 6 ತಿಂಗಳೊಳಗೆ ಲೋಕಸಭೆ ಚುನಾವಣೆ ನಡೆಯುತ್ತದೆ.

2003ರಲ್ಲಿ ರಾಜಸ್ಥಾನದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 120 ಹಾಗೂ ಕಾಂಗ್ರೆಸ್ 58 ಸ್ಥಾನಗಳಲ್ಲಿ ಗೆದ್ದಿದ್ದವು. ಇದಾದ ಬಳಿಕ 2004ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ 25 ರಲ್ಲಿ 21 ಸ್ಥಾನಗಳು ಬಿಜೆಪಿ ಪಾಲಾಗಿದ್ದವು ಹಾಗೂ ಕಾಂಗ್ರೆಸ್ ಕೇವಲ 4 ಸ್ಥಾನಕ್ಕೆ ತೃಪ್ತಿಪಡಬೇಕಾಯ್ತು. 

ಆದರೆ 2008ರ ವಿಧಾನಸಭಾ ಚುನಾವಣೆಯಲ್ಲಿ ಆಟ ಬದಲಾಗಿತ್ತು. ಕಾಂಗ್ರೆಸ್ 200ರಲ್ಲಿ 96 ಕ್ಷೇತ್ರಗಳಲ್ಲಿ ಗೆದ್ದಿತು, ಅಶೋಕ್ ಗೆಹ್ಲೋಟ್ ಸರ್ಕಾರ ರಚಿಸಿದರು. ಬಿಜೆಪಿಯ ಎಲ್ಲಾ ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಯಾದ ಪರಿಣಾಮ ಬಹುಮತ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕೇವಲ 76 ಸ್ಥಾನಗಳಲ್ಲಿ ಗೆದ್ದಿತ್ತು. ಇದಾದ ಬಳಿಕ 2009ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನ ಹಾಗೂ ಬಿಜೆಪಿ ಕೇವಲ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಕಿರೋಡಿಲಾಲ್ ಗೆದ್ದಿದ್ದು, ಅಂದು ಅವರು ಕಾಂಗ್ರೆಸ್ ಬೆಂಬಲಿಸಿದ್ದರು.

ಹೀಗೇ 2013ರ ವಿಧಾನಸಭಾ ಚುನಾವಣಯಲ್ಲಿ ಬಿಜೆಪಿ 163 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್ ಕೇವಲ 21 ಕ್ಷೇತ್ರಗಳಲ್ಲಿ ಗೆದ್ದಿತ್ತು. ಬಳಿಕ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಮತ್ತಷ್ಟು ಅಚ್ಚರಿ ಮೂಡಿಸುವ ಫಲಿತಾಂಶ ಹೊರ ಬಿದ್ದಿತ್ತು. ಮೋದಿ ಅಲೆ ಎದ್ದಿದ್ದರಿಂದ ಮತದಾರರು ಎಲ್ಲಾ 25 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದರು. ಆದರೆ ಬಳಿಕ ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.

ಇನ್ನು 2018ರ ಡಿಸೆಂಬರ್ ನಲ್ಲಷ್ಟೇ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಗೆಹ್ಲೋಟ್ ಹಾಗೂ ಸಿಂಧಿಯಾರ ಫಾರ್ಮುಲಾದಿಂದ ಕಾಂಗ್ರೆಸ್ 100 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕೇವಲ 73 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಹೀಗಿದ್ದರೂ ಎರಡು ಪಕ್ಷಗಳಿಗೆ ಸಿಕ್ಕ ಮತಗಳ ಅಂತರ ಬಹಳ ಕಡಿಮೆ ಇದೆ ಎಂಬುವುದು ಗಮನಾರ್ಹ.

ಈ ಕಡಿಮೆ ಮತಗಳ ಅಂತರವನ್ನು ಲೋಕಸಭಾ ಚುನಾವಣೆಯಲ್ಲಿ ಜಾಸ್ತಿಯಾಗಲು ಬಿಡುವುದಿಲ್ಲ ಹಾಗೂ ಈವರೆಗಿನ ಪರಂಪರೆಯನ್ನು ಮುರಿದು ಗೆಲುವು ಸಾಧಿಸುವ ವಿಶ್ವಾಸ ಬಿಜೆಪಿ ಹೊಂದಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಧಾನಸಭೆಯಲ್ಲಿ ಬಿಜೆಪಿ ಸೋಲಿನ ಬಳಿಕ ಜಯ್ಪುರದಲ್ಲಿ ನಡೆದಿದ್ದ ಸಮಾವೇಶವೊಂದರಲ್ಲಿ ೀ ವಿಚಾರವನ್ನು ಹೇಳಿಕೊಂಡಿದ್ದರು. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ