ಬೆಂಗಳೂರು[ಮಾ.14]: ಹಳೆ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳಿಗಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ನಡೆದ ಜಿದ್ದಾಜಿದ್ದಿ ಚೌಕಾಸಿಯಲ್ಲಿ ಕಾಂಗ್ರೆಸ್‌ಗೆ ತುಸು ಲಾಭವಾಗಿದ್ದರೆ ಅದಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ರಣತಂತ್ರವೇ ಕಾರಣ. ಒಂದು ಹಂತದಲ್ಲಿ ಜೆಡಿಎಸ್‌ನ ಬೇಡಿಕೆ ಒಪ್ಪಲು ತಯಾರಾಗಿದ್ದ ಹೈಕಮಾಂಡ್‌ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂದು ಬಿಂಬಿಸಲಾಗುತ್ತಿದೆ.

ಕೈಗೆ ಮೈಸೂರು ಪಾಕ್, ಚುನಾವಣೆಗೂ ಮುನ್ನವೇ ಜಿದ್ದಿನಲ್ಲಿ ಗೆದ್ದ ಸಿದ್ದರಾಮಯ್ಯ

ಸೀಟು ಹೊಂದಾಣಿಕೆ ಆರಂಭವಾದಾಗ ಜೆಡಿಎಸ್‌ 12 ಕ್ಷೇತ್ರಗಳಿಗೆ ಬೇಡಿಕೆಯಿಟ್ಟಿತ್ತು. ಅದರಲ್ಲೂ ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಹಾಲಿ ಸಂಸದರನ್ನು ಹೊಂದಿರುವ ಚಿಕ್ಕಬಳ್ಳಾಪುರ, ತುಮಕೂರು, ಕೋಲಾರವನ್ನು ತನಗೆ ನೀಡಬೇಕು. ಜತೆಗೆ, ಬೆಂಗಳೂರು ಉತ್ತರ ಹಾಗೂ ಮೈಸೂರು ತನಗೆ ದಕ್ಕಬೇಕು ಎಂದು ಬೇಡಿಕೆಯಿಟ್ಟಿತ್ತು. ಆದರೆ, ಅನಂತರ ನಡೆದ ಹೊಂದಾಣಿಕೆಯಲ್ಲಿ ಜೆಡಿಎಸ್‌ನ ಆಗ್ರಹ ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು ಮತ್ತು ಬೆಂಗಳೂರು ಉತ್ತರಕ್ಕೆ ಸೀಮಿತವಾಗಿತ್ತು.

ಮೈಸೂರಿಗಾಗಿ ದೋಸ್ತಿಗಳ ಕುಸ್ತಿ: ಉಭಯ ಪಕ್ಷಗಳ ಹಠದ ಹಿಂದಿದೆ ಈ ಕಾರಣ!

ಯಾವಾಗ ಕೆಲ ಕ್ಷೇತ್ರಗಳನ್ನು ಬಿಟ್ಟುಕೊಡಲು ಜೆಡಿಎಸ್‌ ತಾನಾಗೇ ಸಿದ್ಧವಾಗಿತ್ತೋ ಆಗ ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಈ ಬೇಡಿಕೆಯನ್ನು ಒಪ್ಪುವ ಮನಸ್ಥಿತಿಗೆ ಬಂದಿತ್ತು ಎನ್ನಲಾಗಿದೆ. ಆದರೆ, ಹಾಸನ, ಮಂಡ್ಯದಲ್ಲಿ ಹಾಲಿ ಸಂಸದರನ್ನು ಹೊಂದಿರುವ ಜೆಡಿಎಸ್‌ ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಂತಹ ಕ್ಷೇತ್ರಗಳನ್ನು ಏಕೆ ಕೇಳುತ್ತಿದೆ. ಈ ಬೇಡಿಕೆಗೆ ಒಪ್ಪಿದರೆ ಹಳೆ ಮೈಸೂರು ಭಾಗ ಹೇಗೆ ಕಾಂಗ್ರೆಸ್‌ನ ಕೈತಪ್ಪಿ ಹೋಗಲಿದೆ ಎಂಬುದನ್ನು ಹೈಕಮಾಂಡ್‌ಗೆ ಸಿದ್ದರಾಮಯ್ಯ ಯಶಸ್ವಿಯಾಗಿ ಮನದಟ್ಟು ಮಾಡಿಕೊಟ್ಟರು ಎನ್ನಲಾಗುತ್ತಿದೆ.

ಏಕೆಂದರೆ, ಈ ಕ್ಷೇತ್ರಗಳ ಪೈಕಿ ಪ್ರತ್ಯೇಕ ಸಮೀಕ್ಷೆ ನಡೆಸಿರುವ ಕಾಂಗ್ರೆಸ್‌ ಹೈಕಮಾಂಡ್‌ ಜೆಡಿಎಸ್‌ ಕೇಳುತ್ತಿರುವ ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಿ ಆ ಪಕ್ಷವೇ ಗೆಲ್ಲುತ್ತದೆ ಎಂಬ ವರದಿಯಿದೆ. ಹೀಗಾಗಿ ಮೈತ್ರಿಯ ಹಿತದೃಷ್ಟಿಯಿಂದ ಆ ಪಕ್ಷಕ್ಕೆ ಸದರಿ ಕ್ಷೇತ್ರಗಳನ್ನು ಬಿಟ್ಟುಕೊಡುವುದೇ ಉತ್ತಮ ಎಂಬ ಮನಸ್ಥಿತಿಯಲ್ಲಿತ್ತು ಎಂದು ಮೂಲಗಳು ಹೇಳುತ್ತವೆ.

ಲೋಕಸಭಾ ಚುನಾವಣೆ : ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ರಣತಂತ್ರ

ಈ ಹಂತದಲ್ಲಿ ಸಿದ್ದರಾಮಯ್ಯ ನೇರವಾಗಿ ರಾಹುಲ್‌ ಗಾಂಧಿ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದು, ಗೆಲುವಿನ ಮಾನದಂಡದಲ್ಲಿ ಈ ಎಲ್ಲಾ ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ಕಾಂಗ್ರೆಸ್‌ ತನ್ನ ತಳಹದಿಯನ್ನೇ ಕಳೆದುಕೊಳ್ಳುತ್ತದೆ. ಭವಿಷ್ಯದಲ್ಲಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದು ಮನದಟ್ಟು ಮಾಡಿಕೊಟ್ಟರು ಎನ್ನಲಾಗಿದೆ. ಅಲ್ಲದೆ, ಜೆಡಿಎಸ್‌ ಈ ಕ್ಷೇತ್ರಗಳನ್ನು ಗೆಲ್ಲುವ ಉದ್ದೇಶದಿಂದ ಕೇಳುತ್ತಿಲ್ಲ. ಬದಲಾಗಿ, ತನ್ನ ತಳಹದಿಯನ್ನು ಗಟ್ಟಿಮಾಡಿಕೊಳ್ಳಲು ಕೇಳುತ್ತಿದೆ. ತುಮಕೂರು ಹಾಗೂ ಕೋಲಾರದಂತಹ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವೇ ಸುಲಭ. ಇನ್ನು ಗೆಲುವನ್ನೇ ಮಾನದಂಡವಾಗಿ ನೋಡಿದರೆ ಮಂಡ್ಯ ಈ ಬಾರಿ ಕಾಂಗ್ರೆಸ್‌ಗೆ ದೊರಕಿದರೆ ಆ ಕ್ಷೇತ್ರವನ್ನು ಸುಲಭವಾಗಿ ಗೆಲ್ಲಬಹುದು. ಆದರೆ, ಜೆಡಿಎಸ್‌ ಅದನ್ನು ಬಿಟ್ಟುಕೊಡುವುದಿಲ್ಲ.

ಹೀಗಾಗಿ ಗೆಲುವಿನ ಮಾನದಂಡ ಮಾತ್ರವಲ್ಲದೆ ಪಕ್ಷದ ಭವಿಷ್ಯವನ್ನು ನೋಡಬೇಕು ಎಂದು ಸಿದ್ದರಾಮಯ್ಯ ಮನದಟ್ಟು ಮಾಡಿಕೊಟ್ಟರು ಎನ್ನಲಾಗಿದೆ. ಅಲ್ಲದೆ, ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಾಂಪ್ರದಾಯಿಕ ಎದುರಾಳಿಗಳು. ಇಲ್ಲಿ ಮತದಾರರು ಹಾಗೂ ಕಾರ್ಯಕರ್ತರು ಕೂಡ ಈ ಎರಡು ಪಕ್ಷಗಳಲ್ಲಿ ವಿಭಜಿತರಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ ಎಲ್ಲಾ ಕ್ಷೇತ್ರಗಳನ್ನೂ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್‌ ಕಾರ್ಯಕರ್ತ ಪಡೆ ಹಾಗೂ ಮತವರ್ಗ ಛಿದ್ರವಾಗುತ್ತದೆ. ಒಂದು ಬಾರಿ ಈ ವರ್ಗ ಛಿದ್ರವಾದರೆ ಅದನ್ನು ಮರಳಿ ಪಡೆಯುವುದು ಕಷ್ಟ.

ಸಿದ್ದರಾಮಯ್ಯರನ್ನು ಲೋಕಸಭಾ ಕಣಕ್ಕಿಳಿಸಲು ಪ್ಲಾನ್, ಅಚ್ಚರಿ ಮೂಡಿಸಿದ ಕೈ ನಾಯಕರ ಸಭೆ

ಇನ್ನು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಒಂದು ಬಾರಿಯೂ ಗೆದ್ದ ಉದಾಹರಣೆಯಿಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ 13 ಬಾರಿ ಗೆದ್ದಿದ್ದರೆ, ಬಿಜೆಪಿ ಮೂರು ಬಾರಿ ಗೆದ್ದಿದೆ. ಮೈಸೂರು ಹಾಗೂ ಚಾಮರಾಜನಗರ ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನ ಭದ್ರಕೋಟೆ ಎಂದು ವಾದಿಸಿದರು ಎನ್ನಲಾಗಿದೆ.

ಚೌಕಾಸಿಯೇ ಕಾರ್ಯತಂತ್ರ:

ಹೀಗಾಗಿಯೇ ಕಾಂಗ್ರೆಸ್‌ ಹೈಕಮಾಂಡ್‌ ಜೆಡಿಎಸ್‌ ಕೇಳಿದ ಎಲ್ಲ ಕ್ಷೇತ್ರಗಳನ್ನು ಬಿಟ್ಟುಕೊಡುವ ಬದಲು ಚೌಕಾಸಿಗೆ ಮುಂದಾಗಿದ್ದು, ಜೆಡಿಎಸ್‌ ಮೈಸೂರು, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಕೇಳಿದ್ದಕ್ಕೆ ಪ್ರತಿಯಾಗಿ ಜೆಡಿಎಸ್‌ ಸಂಸದರಿರುವ ಹಾಗೂ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಿರುವ ಮಂಡ್ಯ ಕ್ಷೇತ್ರ ಬಿಟ್ಟುಕೊಡುವಂತೆ ವಾದ ಮಾಡಿದೆ. ಇದು ಸಾಧ್ಯವಾಗದ ಕಾರಣ ಮೈಸೂರು ಮತ್ತು ಚಿಕ್ಕಬಳ್ಳಾಪುರಕ್ಕಾಗಿ ಆಗ್ರಹ ಮಾಡದಂತೆ ಜೆಡಿಎಸ್‌ಗೆ ಹೇಳಿದೆ. ಅಲ್ಲದೆ, ಹಾಲಿ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡುವುದಿಲ್ಲ ಎಂಬ ತನ್ನ ನೀತಿಯನ್ನು ಸಡಿಲಿಸಿ ಜೆಡಿಎಸ್‌ಗೆ ತುಮಕೂರು ಬಿಟ್ಟುಕೊಡಲು ಒಪ್ಪಿದೆ.