ಬೆಂಗಳೂರು : ಲೋಕ ಮಹಾ ಸಮರದಲ್ಲಿ ರಾಜ್ಯದಿಂದ ಹೆಚ್ಚು ಸ್ಥಾನ ಗೆಲ್ಲಿಸುವ ಮೂಲಕ ರಾಹುಲ್‌ ಗಾಂಧಿ ‘ಕೈ’ ಬಲಪಡಿಸಲು ರಾಜ್ಯ ಕಾಂಗ್ರೆಸ್‌ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳತೊಡಗಿದೆ.

ಆರು ತಿಂಗಳ ಹಿಂದಿನಿಂದಲೇ ಸಿದ್ಧತೆ ಆರಂಭಿಸಿದ್ದ ಕಾಂಗ್ರೆಸ್‌ ಪಾಳೆಯ ಜೆಡಿಎಸ್‌ ಜತೆ ಸೀಟು ಹಂಚಿಕೆ ಹೊರತುಪಡಿಸಿ ಉಳಿದೆಲ್ಲಾ ಪ್ರಕ್ರಿಯೆಯಲ್ಲೂ ಚುರುಕಾಗಿದೆ.

ಸೋಮವಾರ ದೆಹಲಿಯಲ್ಲಿ ನಡೆಯಲಿರುವ ಅಭ್ಯರ್ಥಿಗಳ ಪರಿಶೀಲನಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಅಂತಿಮಗೊಳ್ಳಲಿದೆ. ಬಳಿಕ ರಾಹುಲ್‌ ಗಾಂಧಿ ಅವರ ನೇತೃತ್ವದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಘೋಷಣೆಯಾಗಲಿದೆ. ಇದಕ್ಕೂ ಮೊದಲು ಜೆಡಿಎಸ್‌ಗೆ ಎಷ್ಟುಕ್ಷೇತ್ರ ಬಿಟ್ಟುಕೊಡಬೇಕು ಹಾಗೂ ಯಾವ್ಯಾವ ಕ್ಷೇತ್ರ ಬಿಟ್ಟುಕೊಡಬೇಕೆಂಬುದನ್ನು ಅಂತಿಮಗೊಳಿಸುವ ಒತ್ತಡದಲ್ಲಿ ಕಾಂಗ್ರೆಸ್‌ ಸಿಲುಕಿದೆ.

ಕಾಂಗ್ರೆಸ್‌ ಸುಧಾರಿಸಬೇಕಿರುವ ಈ ಎರಡು ವಿಷಯದ ಹೊರತಾಗಿ ಬೂತ್‌ಮಟ್ಟದಲ್ಲಿ ಪಕ್ಷದ ಸಂಘಟನೆ, ಪ್ರಚಾರ ತಂತ್ರ, ಪ್ರಸ್ತುತ ಚುನಾವಣೆಯಲ್ಲಿ ಮುಂದಿಟ್ಟುಕೊಂಡು ಹೋಗಬೇಕಾದ ವಿಚಾರಗಳ ಬಗ್ಗೆ ಈಗಾಗಲೇ ಒಂದು ಸುತ್ತಿನ ಸಿದ್ಧತೆ ಪೂರ್ಣಗೊಳಿಸಿದೆ.

ಮಾ.9ರಂದು ಹಾವೇರಿಯಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪಕ್ಷದಿಂದ ಪರಿವರ್ತನಾ ರಾರ‍ಯಲಿ ಆರಂಭಗೊಂಡಿದೆ. ಜತೆಗೆ ಕಾಂಗ್ರೆಸ್‌ನ ಸ್ಟಾರ್‌ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನೂ ಕರೆಸಲು ಕೆಪಿಸಿಸಿಯಿಂದ ಅಧಿಕೃತ ಆಹ್ವಾನ ನೀಡಲಾಗಿದೆ. ಈ ಮೂಲಕ ಪಕ್ಷದಿಂದ ದೂರವಾಗುತ್ತಿದ್ದಾರೆ ಎನ್ನಲಾದ ಯುವ ಮತದಾರರನ್ನು ಹಿಡಿಯುವ ಪ್ರತಿಯೊಂದು ಅವಕಾಶವನ್ನೂ ಬಳಸಿಕೊಳ್ಳಲು ಮುಂದಾಗಿದೆ. ಅದರ ಬೆನ್ನಲ್ಲೇ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಪರಿವರ್ತನಾ ರಾರ‍ಯಲಿ ನಡೆಯಲಿದೆ. ಜತೆಗೆ ಜನ ಸಂಪರ್ಕ ಅಭಿಯಾನದ ಮೂಲಕ ಕಾಂಗ್ರೆಸ್‌ ಕೊಡುಗೆ ಹಾಗೂ ಸಾಧನೆ, ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ಮನೆ-ಮನೆಗೆ ಮಾಹಿತಿ ನೀಡಲು, ಜಿಲ್ಲಾ ಮಟ್ಟದ ಸಮಾವೇಶ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ.

ಸಿದ್ದು ನೇತೃತ್ವದಲ್ಲಿ ರಣತಂತ್ರ:

ಪ್ರಸಕ್ತ ಚುನಾವಣೆಯನ್ನು ಸಿದ್ದರಾಮಯ್ಯ ಅವರ ರಣತಂತ್ರದಲ್ಲೇ ಎದುರಿಸಲು ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಇತ್ತೀಚೆಗೆ ಜೆಡಿಎಸ್‌ನೊಂದಿಗೆ ನಡೆದ ಸೀಟು ಹಂಚಿಕೆ ವಿಚಾರದಲ್ಲೂ ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯ ಅವರ ಅಭಿಪ್ರಾಯ ಪಡೆಯಬೇಕಾಗಿ ಹೇಳಿದ್ದಾರೆ ಎನ್ನಲಾಗಿದೆ. ಈ ಮೂಲಕ ಪ್ರಸಕ್ತ ಚುನಾವಣೆಯಲ್ಲೂ ರಾಜ್ಯದಲ್ಲಿ ಕಾಂಗ್ರೆಸ್‌ ಸಿದ್ದರಾಮಯ್ಯ ಅವರನ್ನೇ ಟ್ರಂಪ್‌ ಕಾರ್ಡ್‌ ಆಗಿ ಇಟ್ಟುಕೊಂಡು ಮುಂದೆ ಹೋಗಲಿದೆ.

ಹೀಗಾಗಿ ತಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಹೆಚ್ಚು ಸ್ಥಾನ ಗೆಲ್ಲಲು ಈಗಾಗಲೇ ಸಿದ್ದರಾಮಯ್ಯ ರಣತಂತ್ರ ಆರಂಭಿಸಿದ್ದಾರೆ. ಇದರ ಪ್ರಯತ್ನದ ಫಲವಾಗಿಯೇ ತುಮಕೂರು ಹಾಗೂ ಮೈಸೂರು ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿರುವ ಜೆಡಿಎಸ್‌ಗೆ ಮಂಡ್ಯದ ರೂಪದಲ್ಲಿ ತಿರುಗೇಟು ನೀಡುತ್ತಿದ್ದಾರೆ.

ಪಕ್ಷ ಪ್ರಬಲವಾಗಿರುವ ಕಡೆ ಜೆಡಿಎಸ್‌ಗೆ ಅವಕಾಶ ನೀಡದೆ ಪಕ್ಷದ ಅಸ್ತಿತ್ವ ಉಳಿಸಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಲು, ವಿರೋಧ ಪಕ್ಷವಾದ ಬಿಜೆಪಿ ಹಾಗೂ ದೋಸ್ತಿ ಪಕ್ಷ ಜೆಡಿಎಸ್‌ ಎರಡನ್ನೂ ಮಣಿಸುವ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇದಕ್ಕಾಗಿ 224 ವಿಧಾನಸಭಾ ಕ್ಷೇತ್ರದಲ್ಲೂ ತರಬೇತಿ ಶಿಬಿರ, 56,900 ಬೂತ್‌ಗಳಲ್ಲೂ ಬೂತ್‌ ಮಟ್ಟದ ಪದಾಧಿಕಾರಿಗಳಿಗೆ ತರಬೇತಿ ಶಿಬಿರ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.