ಹಾಸನ: ಮಾಜಿ ಕಾಂಗ್ರೆಸ್ ಸಚಿವ ಎ. ಮಂಜು ಪಕ್ಷ ತೊರೆಯುತ್ತಲೇ ಕಾಂಗ್ರೆಸ್ ನಾಯಕರ ಮನೆಗೆ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ಎಡತಾಕುತ್ತಿದ್ದಾರೆ. ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರ ಮನೆಗೆ ತಂದೆ-ಮಗ ಭೇಟಿ ನೀಡುತ್ತಿದ್ದು, ಪ್ರಜ್ವಲ್‌ರನ್ನು ಬೆಂಬಲಿಸುವಂತೆ ಆಗ್ರಹಿಸಿದ್ದಾರೆ.

ರಾಜಕೀಯ‌ವಾಗಿ ಬದ್ಧ ವೈರಿಗಳಾದ ಕೈ ಮುಖಂಡರ ಮನೆಗೂ ಭೇಟಿ ನೀಡಿ,  ನಗುಮೊಗದಲ್ಲಿಯೇ ಪ್ರಜ್ವಲ್‌ ಪರ ನಿಲ್ಲಬೇಕೆಂದು ಆಗ್ರಹಿಸುತ್ತಿದ್ದು, ದಳ ನಾಯಕರಲ್ಲಿ ಆತಂಕ ಸೃಷ್ಟಿಯಾಗಿದ್ಯಾ? ಎಂಬ ಪ್ರಶ್ನೆ ಉದ್ಭವಿಸಿದೆ. ಎ.ಮಂಜು ಅವರಂತೆ ಉಳಿದ ನಾಯಕರು 'ಕೈ'  ಎತ್ತಿದರೆ ಕಥೆ ಏನು ಎಂಬ ಆತಂಕ ರೇವಣ್ಣ ಕುಟುಂಬವನ್ನು ಕಾಡುತ್ತಿದೆ. ಪುತ್ರನನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ ಸಚಿವ ರೇವಣ್ಣ‌ ಹಾಗೂ ಕಾರ್ಯಕರ್ತರು. ಮತದಾರರ ಜೊತೆ ನಾಯಕರು ಸಿಟ್ಟಾದರೆ ಕಷ್ಟ ಎಂದು ಮನವೊಲಿಸಲು ಸರ್ಕಸ್ ಮಾಡುತ್ತಿದ್ದಾರೆ. 

ಸದಾ ತಮ್ಮ ವಿರುದ್ಧ ಮಾತನಾಡುತ್ತಿದ್ದ, ಮಾಜಿ ಸಚಿವ ಶಿವರಾಂ ಮನೆಗೂ ಭೇಟಿ ನೀಡಿ ಬೆಂಬಲ ಕೋರಿದ್ದಾರೆ ರೇವಣ್ಣ‌.ಈಗಾಗಲೇ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಆದರಿನ್ನೂ ದೇವೇಗೌಡರಿಗೆ ಕ್ಷೇತ್ರ ಅಖೈರುಗೊಳ್ಳದ ಹಿನ್ನೆಲೆಯಲ್ಲಿ ಪ್ರಜ್ವಲ್ ಕ್ಷೇತ್ರವನ್ನು ತಮ್ಮ ತಾತನಿಗೇ ಬಿಟ್ಟು ಕೊಡಲಿದ್ದಾರೆ ಎಂಬ ಊಹಾಪೋಹಗಳೂ ಕೇಳಿ ಬರುತ್ತಿವೆ.

ಏಪ್ರಿಲ್ 11ರಿಂದ ಮೇ 19ರ ತನಕ ದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 18 ಹಾಗೂ 23 ರಂದು ನಡೆಯಲಿದೆ. ಮೇ 23ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.