ಮಂಡ್ಯ(ಮಾ.30): ಪ್ರಜಾಪ್ರಭುತ್ವದಲ್ಲಿ ಗೆಲುವೇ ಅಂತಿಮ ಧ್ಯೇಯವಾಗಿ ಬಿಟ್ಟರೆ ಆ ಪ್ರಭುತ್ವದಲ್ಲಿ ಪ್ರಜೆಗಳಿಗೆ ಸ್ಥಾನವಿಲ್ಲ ಎಂತಲೇ ಅರ್ಥ. ಚುನಾವಣೆ ಗೆಲುವಿಗಾಗಿ ರಣತಂತ್ರಗಳಿಗೆ ಒಪ್ಪಿಗೆ ಇದೆ ಆದರೆ ಕುತಂತ್ರಗಳಿಗಲ್ಲ ಎಂಬುದು ತಿಳಿಸಬೇಕಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಬ್ಯಾಲೆಟ್ ಶೀಟ್‌ನಲ್ಲಿ ಇಂತದ್ದೊಂದು ಕುತಂತ್ರದ ವಾಸನೆ ಬರುತ್ತಿದೆ. ಬ್ಯಾಲೆಟ್ ಶೀಟ್‌ನಲ್ಲಿ ಅಭ್ಯರ್ಥಿಗಳಿಗೆ ನೀಡುವ ಅಂಕಿವಾರು ಸ್ಥಾನದಲ್ಲಿ ಪಲ್ಲಟಗಳಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ.

ಬ್ಯಾಲೆಟ್ ಶೀಟ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೆಸರು ಮೊದಲು ಕಾಣಿಸಿಕೊಂಡಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರು 20ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. 

ಅಭ್ಯರ್ಥಿಯ ಹೆಸರಿನ ಮೊದಲ ಇಂಗ್ಲಿಷ್ ಅಕ್ಷರ ಮತ್ತು ಪಕ್ಷವೊಂದರ ಬಿ-ಫಾರಂ ಪಡೆದಿರುವ ಆಧಾರದ ಮೇಲೆ ಬ್ಯಾಲೆಟ್ ಶೀಟ್ ತಯಾರಿಸಲಾಗುತ್ತದೆ. ಅದರಂತೆ ನಿಯಮಗಳ ಪ್ರಕಾರ ಮಂಡ್ಯ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ನಂಜುಂಡಸ್ವಾಮಿ ಹೆಸರು ಮೊದಲು ಬರಬೇಕಿತ್ತು.

ಆದರೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೆಸರು ಮೊದಲು ಬಂದ ಪರಿಣಾಮವಾಗಿ ಕೊನೆಯಲ್ಲಿರುವ ಅಭ್ಯರ್ಥಿಗಳ ಸ್ಥಾನದಲ್ಲಿ ಗೊಂದಲವಾಗಿದೆ. ಪಕ್ಷೇತರ ಅಭ್ಯರ್ಥಿಗಳ ಹೆಸರು ಬ್ಯಾಲೆಟ್ ಶೀಟ್ ನಲ್ಲಿ ಕೊನೆಯಲ್ಲಿ ಸ್ಥಾನ ಪಡೆದಿರುತ್ತವೆ.

ಅದರಂತೆ ಪಕ್ಷೇತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರು 20ನೇ ಸ್ಥಾನದಲ್ಲಿದ್ದು, 19(ಸುಮಲತಾ), 21(ಎಂ ಸುಮಲತಾ) ಮತ್ತು 22(ಪಿ ಸುಮಲತಾ)ನೇ ಸ್ಥಾನದಲ್ಲೂ ಸುಮಲತಾ ಎಂಬ ಹೆಸರಿನ ಅಭ್ಯರ್ಥಿಗಳೇ ಇದ್ದಾರೆ.

ಮತದಾರರಲ್ಲಿ ಸುಮಲತಾ ಹೆಸರಿನ ಕುರಿತು ಗೊಂದಲ ಮೂಡಿಸುವ ಉದ್ದೇಶದಿಂದಲೇ ಈ ರೀತಿಯಾದ ಬ್ಯಾಲೆಟ್ ಶೀಟ್ ತಯಾರಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಬಿಎಸ್ ಪಿ ಅಭ್ಯರ್ಥಿ ನಂಜುಂಡಸ್ವಾಮಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಬ್ಯಾಲೆಟ್ ಶೀಟ್ ರಚನೆ ಹೇಗೆ?

ಅಭ್ಯರ್ಥಿಯ ಹೆಸರಿನ ಮೊದಲ ಇಂಗ್ಲಿಷ್ ಅಕ್ಷರ ಮತ್ತು ಪಕ್ಷವೊಂದರ ಬಿ-ಫಾರಂ ಪಡೆದಿರುವ ಆಧಾರದ ಮೇಲೆ ಬ್ಯಾಲೆಟ್ ಶೀಟ್ ತಯಾರಿಸಲಾಗುತ್ತದೆ. ಅಂದರೆ ಇಂಗ್ಲಿಷ್‌ನ A-Z ಅಕ್ಷಗಳ ಆಧಾರದ ಮೇಲೆ ಅಂಕಿವಾರು ಸ್ಥಾನ ನೀಡಲಾಗುತ್ತದೆ. ಒಂದು ವೇಳೆ ಅಭ್ಯರ್ಥಿಯ ಹೆಸರು ಒಂದೇ ಅಕ್ಷರದಿಂದ ಶುರುವಾದರೆ ಅವರ ಹೆಸರಿನ ಎರಡನೇ ಅಕ್ಷರದ ಸ್ಥಾನದ ಆಧಾರದ ಮೇಲೆ ಬ್ಯಾಲೆಟ್ ಶೀಟ್ ರಡೆಇಯಾಗುತ್ತದೆ.

ಉದಾ: (NAnjundaswamy), (NIkhil K)

ಆದರೆ ಪಕ್ಷೇತ್ರ ಅಭ್ಯರ್ಥಿಗಳ ಹೆಸರು ಬ್ಯಾಲೆಟ್ ಶೀಟ್‌ನ ಕೊನೆಯಲ್ಲೇ ಇರುತ್ತದೆ. ಇವರು ಬಿ-ಫಾರಂ ಅಭ್ಯರ್ಥಿಯಲ್ಲದ ಕಾರಣ ಪಕ್ಷೇತರರಿಗೆ ಕೊನೆಯಲ್ಲಿ ಆದರೆ ಇಂಗ್ಲಿಷ್ ಅಕ್ಷರಗಳ ಆಧಾರದ ಮೇಲೆಯೇ ಅಂಕಿವಾರು ಸ್ಥಾನ ನೀಡಲಾಗುತ್ತದೆ.