ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೂರನೇ ಕುಡಿ ಮಂಡ್ಯ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ಇವರ ವಿರುದ್ಧ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಷ್ ಘೋಷಿಸಿದ್ದು, ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಮಂಡ್ಯ ಜನರ ಅಭಿಮಾನಕ್ಕಾಗಿ, ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸುಮಲತಾಗೆ ಬಿಜೆಪಿ ಬೆಂಬಲಿಸುವ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ಎಸ್.ಎಂ.ಕೃಷ್ಣ ಆಶೀರ್ವದಿಸಿದ್ದಾರೆ. ರೈತ ಸಂಘವೂ ಬೆಂಬಲಕ್ಕೆ ಇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಗೆದ್ದರೆ ಯಾವ ಪಕ್ಷಕ್ಕೆ ಬೆಂಬಲಿಸುತ್ತೀರಿ ಎಂಬ ಪ್ರಶ್ನೆಗೆ, 'ಅದನ್ನು ಜನರೇ ತೀರ್ಮಾನಿಸಲಿದ್ದಾರೆ. ನಂತರ ಆ ಬಗ್ಗೆ ಯೋಚಿಸುವೆ,' ಎಂದು ಹೇಳುವ ಮೂಲಕ ಮುಂದಿನ ನಡೆ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.

'ಅಂಬರೀಷ್ ರಾಜಕಾರಣದಲ್ಲಿರುವಾಗಲೂ ನಾನು ಅತ್ತ ತಲೆ ಹಾಕುತ್ತಿರಲಿಲ್ಲ. ಇದು ನನಗೆ ಹೊಸ ಕ್ಷೇತ್ರ. ಮಗನೊಂದಿಗೆ ಆರಾಮಾಗಿ ಇರಬಹುದಿತ್ತು. ಆದರೆ, ಮುಳ್ಳಿನ ದಾರಿಯನ್ನೇ ತುಳಿದಿದ್ದೇನೆ. ಎಲ್ಲ ಟೀಕೆಗಳನ್ನು ಸಹಿಸಲು ಸಿದ್ಧಳಾಗಿದ್ದೇನೆ. ಎರಡು ಮೂರು ವಾರಗಳಿಂದ ಮಂಡ್ಯದ ಹಳ್ಳಿ ಹಳ್ಳಿಯನ್ನು ಸುತ್ತಾಡುತ್ತಿದ್ದು, ಅಂಬರೀಷ್ ಅವರನ್ನು ನನ್ನಲ್ಲಿ ಕಾಣುತ್ತಿದ್ದಾರೆ. ಜನರ ಭಾವನೆಗಳಿಗೆ ಸ್ಪಂದಿಸಿ, ಅವಳ ಒಳಿತಿಗಾಗಿ ಕಾರ್ಯನಿರ್ವಹಿಸುವೆ,' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 20ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿರುವ ಸುಮಲತಾ, ಸ್ಯಾಂಡಲ್‌ವುಡ್ ನನ್ನ ಪರ ಪ್ರಚಾರ ನಡೆಸಲಿದೆ. ಯಾರಿಗೆ ಯಾರು ನೋವಿಸುವ ಅಗತ್ಯವಿಲ್ಲ. ವೈಯಕ್ತಿಕವಾಗಿ ನೋವು ಕೊಡುವ ಮಾತು ಬೇಡ. ನಾವೆಲ್ಲ ಪಬ್ಲಿಕ್ ಫೀಲ್ಡಿನಲ್ಲಿ ಇರೋರು, ಜನರು ನಮ್ಮನ್ನು ಗಮನಿಸುತ್ತಿರುತ್ತಾರೆಂಬುವುದು ನೆನಪಿರಲಿ, ಎನ್ನುವ ಮೂಲಕ ರೇವಣ್ಣ ಸೇರಿ ಅನೇಕರ ಅಸಭ್ಯ ಹೇಳಿಕೆಗಳನ್ನು ಖಂಡಿಸಿದರು.

 

ಗೆದ್ದ ಮೇಲೆ ಯಾರಿಗೆ ಬೆಂಬಲ ನೀಡಬೇಕೆಂಬುದನ್ನು ನಾನು ಒಬ್ಬಳೇ ಈ ನಿರ್ಧಿರಿಸುವುದಿಲ್ಲ. ಅದನ್ನೂ ಜನರ ಮುಂದಿಡುತ್ತೇನೆ. ಎಸ್. ಎಂ. ಕೃಷ್ಣ ಸೇರಿ ಎಲ್ಲ ಹಿರಿಯರ ಅಶಿರ್ವಾದ ಪಡೆದಿದ್ದೇನೆ. ಯಾರೆಲ್ಲ ಪ್ರಚಾರಕ್ಕೆ ಬರ್ತಾರೋ ಸ್ವಾಗತಿಸುತ್ತೇನೆ‌. ನನ್ನನ್ನು ರೈತ ಸಂಘ ಬೆಂಬಲಿಸುವ ವಿಶ್ವಾಸವಿದೆ.

- ಸುಮಲತಾ, ಮಂಡ್ಯ ಸ್ವತಂತ್ರ ಅಭ್ಯರ್ಥಿ

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ.