ಮಂಡ್ಯ[ಮಾ.18]: ನಿಖಿಲ್‌ ಕುಮಾರಸ್ವಾಮಿ ಹಾಗೂ ನಟ ಅಂಬರೀಷ್‌ ಅವರ ಪತ್ನಿ ಸುಮಲತಾ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರ ‘ಹೈವೋಲ್ಟೇಜ್‌ ಮುಖಾಮುಖಿ’ ಎಂದೇ ಬಿಂಬಿತವಾಗಿದೆ. ಇಂತಹ ಕ್ಷೇತ್ರದಿಂದ ಸುಮಲತಾ ಅಂಬರೀಷ್‌ ಸ್ಪರ್ಧೆ ಬಗ್ಗೆ ಉಂಟಾಗಿರುವ ಕುತೂಹಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಸುಮಲತಾರವರು ಮಂಡ್ಯ ಲೋಕಸಭಾ ಕಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆಂದು ಘೋಷಿಸಿದ್ದಾರೆ.

ಮಗ ಅಭಿಷೇಕ್, ನಟರಾದ ಯಶ್, ದರ್ಶನ್, ದೊಡ್ಡಣ್ಣ, ಜೈ ಜಗಧೀಶ್ ಹಾಗೂ ಪತ್ನಿ ವಿಜಯಲಕ್ಷ್ಮಿ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವು ಸ್ಟಾರ್ ನಟರು ಸುಮಲತಾರೊಂದಿಗೆ ಸುದ್ದಿಗೋಷ್ಟಿಗೆ ಆಗಮಿಸಿದ್ದರು. ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿರುವ ಸುಮಲತಾ ತಾನು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸುತ್ತಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಮಾರ್ಚ್ 20ರಂದು ಬುಧವಾರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸುಮಲತಾರೊಂದಿಗಿದ್ದ ಸ್ಟಾರ್ ನಟರು ಸುಮಲತಾ ಅಂಬರೀಶ್ ಜೊತೆ ತಾವಿದ್ದೇವೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಹೈ-ವೋಲ್ಟೇಜ್‌ ಕ್ಷೇತ್ರ ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸುತ್ತಾರಾ? ಸ್ಪರ್ಧಿಸುವುದಾದರೆ ಪಕ್ಷೇತರವಾಗಿ ಸ್ಪರ್ಧಿಸುತ್ತಾರಾ ಅಥವಾ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ? ಬಿಜೆಪಿ ಅಭ್ಯರ್ಥಿಯಾಗದಿದ್ದರೆ ಬಿಜೆಪಿ ಬಾಹ್ಯ ಬೆಂಬಲ ಪಡೆಯುತ್ತಾರಾ? ಹೀಗೆ ಸಾಲು-ಸಾಲು ಕುತೂಹಲಗಳು ರಾಜ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದವು. ಹೀಗಿರುವಾಗ ಸುಮಲತಾ ಇಂದು ಪ್ರಕಟಿಸಿರುವ ಈ ನಿರ್ಧಾರ ಭಾರೀ ಮಹತ್ವ ಪಡೆದಿದೆ.

ಸುಮಲತಾರ ಈ ಘೋಷಣೆಯಿಂದ ಮಂಡ್ಯ ಚುನಾವಣಾ ಅಖಾಡ ಭಾರೀ ಮಹತ್ವ ಪಡೆದಿದೆ. ಗೌಡರ ಮೊಮ್ಮಗ ಹಾಗೂ ಮಂಡ್ಯದ ಸೊಸೆ ನಡುವಿನ ಈ ಸಮರದಲ್ಲಿ ಮಂಡ್ಯ ಜನತೆ ಯಾರಿಗೆ ಪ್ರೀತಿ ನೀಡುತ್ತಾರೆ ಕಾದು ನೋಡಬೇಕು.