ಬೆಂಗಳೂರು[ಮಾ.15]: ಲೋಕಸಭೆ ಚುನಾವಣೆ ವೇಳೆ ಅಕ್ರಮ ಹಣ ಸಾಗಣೆ ವ್ಯಾಪಕವಾಗಿ ನಡೆಯುವುದರಿಂದ ಅದಕ್ಕೆ ಕಡಿವಾಣ ಹಾಕಲು ಚುನಾವಣಾ ಆಯೋಗವು ಸಾರ್ವಜನಿಕರು ಪ್ರಯಾಣ ವೇಳೆ ಕೊಂಡೊಯ್ಯುವ ಹಣದ ಮಿತಿ ನಿಗದಿಗೊಳಿಸಿದ್ದು, 50 ಸಾವಿರ ರು.ಗಿಂತ ಹೆಚ್ಚು ಮೊತ್ತ ನಗದು ಮತ್ತು 10 ಸಾವಿರ ರು.ಗಿಂತ ಹೆಚ್ಚು ಮೌಲ್ಯದ ಉಡುಗೊರೆಯನ್ನು ಕೊಂಡೊಯ್ಯಲು ನಿರ್ಬಂಧ ಹಾಕಿದೆ.

ಅಲ್ಲದೇ, ಮದುವೆ ಸೇರಿದಂತೆ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಯಾವುದೇ ನಿಷೇಧ ಇಲ್ಲ ಎಂದು ಸ್ಪಷ್ಟಪಡಿಸಿರುವ ಆಯೋಗ, ಕಾರ್ಯಕ್ರಮಗಳ ನೆಪದಲ್ಲಿ ಅವುಗಳನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಗದಗದಲ್ಲಿ 76 ಲಕ್ಷದ ಮದ್ಯ, ಹುಬ್ಬಳ್ಳಿಯಲ್ಲಿ 20 ಲಕ್ಷ ವಶ!

ಗುರುವಾರ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ಲೋಕಸಭೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಅಕ್ರಮ ಹಣ ಸಾಗಣೆಗೆ ಕಡಿವಾಣ ಹಾಕಲು ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸಾರ್ವಜನಿಕರು ತಮ್ಮೊಂದಿಗೆ ಯಾವುದೇ ದಾಖಲೆಗಳಿಲ್ಲದೆ 50 ಸಾವಿರ ರು.ಗಿಂತ ಕಡಿಮೆ ಮೊತ್ತವನ್ನು ಪ್ರಯಾಣದ ವೇಳೆ ಇಟ್ಟುಕೊಳ್ಳಲು ಅವಕಾಶ ಇದೆ. ಅಲ್ಲದೇ, 10 ಸಾವಿರ ರು.ಗಿಂತ ಕಡಿಮೆ ಮೌಲ್ಯದ ಉಡುಗೊರೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಲು ದಾಖಲೆಗಳ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ಆಯೋಗವು ಮಿತಿಗೊಳಿಸಿರುವ ನಗದಿಗಿಂತ ಹೆಚ್ಚು ಮೊತ್ತವಾದರೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ನೀವು ಜಾಗೃತ ಮತದಾರರೇ? ಹಾಗಾದ್ರೆ ಈ ಆ್ಯಪ್ ನಿಮ್ಮ ಫೋನ್‌ನಲ್ಲಿದಿಯಾ?

ರಾಜಕೀಯೇತರ ಕಾರ್ಯಕ್ರಮಗಳಾದ ಮದುವೆ, ಹುಟ್ಟುಹಬ್ಬ ಸೇರಿದಂತೆ ಇತರೆ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಆಯೋಗದ ಅನುಮತಿಯ ಅಗತ್ಯ ಇಲ್ಲ. ರಾಜಕೀಯ ವ್ಯಕ್ತಿಗಳು ಭಾಗವಹಿಸದಿರುವ ಖಾಸಗಿ ಕಾರ್ಯಕ್ರಮಗಳಿಗೂ ಅನುಮತಿ ಬೇಕಾಗಿಲ್ಲ. ಆದರೆ, ಸಾರ್ವಜನಿಕರು ಆಯೋಜಿಸುವ ಕಾರ್ಯಕ್ರಮದಲ್ಲಿ ರಾಜಕೀಯ ವ್ಯಕ್ತಿಗಳು ಉಡುಗೊರೆ ಹಂಚುತ್ತಿರುವುದು ಇಲ್ಲವೇ ಊಟದ ವ್ಯವಸ್ಥೆ ಸೇರಿದಂತೆ ಮತದಾರರನ್ನು ಓಲೈಕೆ ಮಾಡಲು ಯಾವುದೇ ರೀತಿಯ ಆಮಿಷೆಗಳನ್ನುವೊಡ್ಡುತ್ತಿದ್ದರೆ ಅಂತಹವರ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಪ್ರಚಾರಕ್ಕೆ ಯೋಧರ ಹೆಸರು ಬಳಸುವಂತಿಲ್ಲ

ಚುನಾವಣೆ ಪ್ರಚಾರ ವೇಳೆ ಯೋಧರ ಭಾವಚಿತ್ರ, ಹೆಸರುಗಳನ್ನುಬಳಕೆ ಮಾಡುವಂತಿಲ್ಲ. ಒಂದು ವೇಳೆ ಪ್ರಚಾರಕ್ಕೆ ಬಳಕೆ ಮಾಡಿಕೊಂಡಲ್ಲಿ ಅವುಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಚುನಾವಣಾ ಆಯೋಗವು ತನ್ನ ನಿರ್ದೇಶನದಲ್ಲಿ ಯೋಧರ ಹೆಸರು, ಭಾವಚಿತ್ರ ಬಳಕೆ ಮಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅದನ್ನು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಪಾಲನೆ ಮಾಡಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಅಯ್ಯಯ್ಯೋ, ಜ್ಯೋತಿಷಿಗಳಿಗೂ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ

ಬ್ಯಾಂಕ್‌ ವ್ಯವಹಾರದ ಮೇಲೂ ನಿಗಾ

ಇತ್ತೀಚೆಗಿನ ದಿನದಲ್ಲಿ ಡಿಜಿಟಲ್‌ ಮೂಲಕವು ಹಣ ಸಂದಾಯ ಹೆಚ್ಚಾಗುತ್ತಿದ್ದು, ಇದರ ಮೇಲೂ ಆಯೋಗವು ನಿಗಾವಹಿಸುತ್ತಿದೆ. ಅನುಮಾನ ಬರುವ ವಹಿವಾಟುಗಳನ್ನು ಪಶೀಲನೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಬ್ಯಾಂಕ್‌ ಸೇರಿದಂತೆ ಹಣಕಾಸು ಸಂಸ್ಥೆಗಳು ಸ್ಟಾಂಡರ್ಡ್‌ ಆಪರೇಟಿಂಗ್‌ ಪ್ರೊಸಿಜರ್‌ (ಎಸ್‌ಒಪಿ) ವಿಧಾನಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಬ್ಯಾಂಕ್‌ನ ನಗದು ಯಾವುದೇ ಕಾರಣಕ್ಕೂ ಹೊರಗುತ್ತಿಗೆಯ ಕಂಪನಿಗಳ ವ್ಯಾನ್‌ಗಳಲ್ಲಿ ಸಾಗಿಸಬಾರದು. ಬ್ಯಾಂಕ್‌ನ ಎಟಿಎಂಗಳಿಗೆ ಹಣ ತುಂಬಿಸಲು ಮತ್ತು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ನಗದು ಸಾಗಿಸುವ ವೇಳೆ ಬ್ಯಾಂಕ್‌ನ ಅಧಿಕೃತ ದಾಖಲೆಗಳನ್ನು ಹೊಂದಿರಬೇಕು ಮತ್ತು ಕರೆನ್ಸಿಯ ವಿವರಗಳನ್ನು ಹೊಂದಿರಬೇಕು. ಬ್ಯಾಂಕ್‌ನ ನಗದನ್ನು ಸಾಗಿಸುವ ಹೊರಗುತ್ತಿಗೆಯ ಏಜೆನ್ಸಿಗಳ ಸಿಬ್ಬಂದಿ ಕಡ್ಡಾಯವಾಗಿ ತಮ್ಮ ಏಜೆನ್ಸಿಗಳ ಗುರುತಿನ ಚೀಟಿಯನ್ನು ಹೊಂದಿರಬೇಕು ಎಂದು ವಿವರಿಸಿದ್ದಾರೆ.