ಇಸ್ಲಾಮಾಬಾದ್(ಏ.30): ಭಾರತೀಯ ವಾಯುಸೇನೆ ನಡೆಸಿದ್ದ ಬಾಲಾಕೋಟ್ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರನ್ನು ಪಾಕಿಸ್ತಾನ ಆಹ್ವಾನಿಸಿದೆ.

ಭಾರತೀಯ ವಾಯುಸೇನೆ ವಾಯುದಾಳಿಯಿಂದ ಯಾವುದೇ ಉಗ್ರರು ಸತ್ತಿಲ್ಲ ಎಂದು ಪುರುಚ್ಛಿಸಿರುವ ಪಾಕಿಸ್ತಾನ, ಈ ಕುರಿತು ಪರಿಶೀಲನೆಗಾಗಿ ಭಾರತೀಯ ಪತ್ರಕರ್ತರನ್ನು ಬಾಲಾಕೋಟ್ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಸಿದ್ಧ ಎಂದು ಪಾಕಿಸ್ತಾನ ಹೇಳಿದೆ.

ಈ ಕುರಿತು ಮಾತನಾಡಿರುವ ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್, ಭಾರತ ಸರ್ಕಾರ ಮತ್ತು ವಾಯುಸೇನೆ ಪ್ರತಿಪಾದಿಸುತ್ತಿರುವ ಬಾಲಾಕೋಟ್ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರಿಗೆ ಮುಕ್ತ ಆಹ್ವಾನವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದೆರಡು ತಿಂಗಳಿನಿಂದ ಭಾರತ ಜಗತ್ತಿಗೆ ಮತ್ತು ತನ್ನ ಜನತೆಗೆ ಸುಳ್ಳು ಹೇಳುತ್ತಿದ್ದು, ಸತ್ಯದ ದರ್ಶನಕ್ಕಾಗಿ ಭಾರತೀಯ ಪತ್ರಕರ್ತರನ್ನು ಆಹ್ವಾನಿಸುತ್ತಿರುವುದಾಗಿ ಆಸಿಫ್ ಗಫೂರ್ ತಿಳಿಸಿದ್ದಾರೆ.

ಆದರೆ ಬಾಲಾಕೋಟ್ ದಾಳಿಯಲ್ಲಿ ಯಾವುದೇ ಉಗ್ರರು ಸತ್ತಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನ ತನ್ನ ನೆಲದಲ್ಲಿ ಉಗ್ರರು ಆಶ್ರಯ ಪಡೆದಿರುವುದಾಗಿ ಒಪ್ಪಿಕೊಂಡಂತಾಗಿದೆ.