Asianet Suvarna News Asianet Suvarna News

ಬಂಗಾಳದಲ್ಲಿ ದೀದಿಯನ್ನು ಹಿಂದಿಕ್ಕಿ 23 ಸೀಟು ಗೆಲ್ಲುತ್ತಾ ಬಿಜೆಪಿ?

ಪಶ್ಚಿಮ ಬಂಗಾಳದ 2014ರ ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷಗಳು 29 ಪ್ರತಿಶತ ಮತ ಪಡೆದರೆ, ಕಾಂಗ್ರೆಸ್‌ ಪಡೆದದ್ದು 9.5 ಪ್ರತಿಶತ ಮತ. 44ರಲ್ಲಿ 36 ಸ್ಥಾನ ಪಡೆದಿದ್ದ ಮಮತಾಗೆ ಸಿಕ್ಕಿದ್ದು 38 ಪ್ರತಿಶತ. ಆದರೆ ಪಂಚಾಯತ್‌ ಚುನಾವಣೆಯಲ್ಲಿ ಕಮ್ಯುನಿಸ್ಟರು ತಮ್ಮ ಕೇಡರ್‌ ಮತ್ತು ಮತದಾರರನ್ನು ಕಳೆದುಕೊಂಡಿದ್ದು, ಅದೇ ಬಿಜೆಪಿಗೆ ಶಿಫ್ಟ್‌ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

Amit Shah and Narendra Modi confident to win 23 seats in West Bengal
Author
Bengaluru, First Published May 7, 2019, 11:07 AM IST

ಪ.ಬಂಗಾಳದಲ್ಲಿ ಎಲ್ಲರಿಗಿಂತ ಮೊದಲು ಬಿಜೆಪಿಯವರು ರಾಜ್ಯದ ಎಲ್ಲ ಖಾಸಗಿ ವಿಮಾನಗಳು ಮತ್ತು ಕಾಪ್ಟರ್‌ಗಳನ್ನು ಬುಕ್‌ ಮಾಡಿಬಿಟ್ಟಿದ್ದರು. ಹೀಗಾಗಿ ಸ್ವತಃ ಮುಖ್ಯಮಂತ್ರಿ ಮಮತಾ ಹಾರಾಟಕ್ಕೂ ತೊಂದರೆ ಆಗಿತ್ತು. ಕೊನೆಗೆ ಆಂಧ್ರದಿಂದ ಚಂದ್ರಬಾಬು ಎರಡು ವಿಮಾನ, ಎರಡು ಹೆಲಿಕಾಪ್ಟರ್‌ಗಳನ್ನು ಕಳುಹಿಸಿಕೊಟ್ಟಮೇಲೆ ದೀದಿ ಹಾರಾಟ ಶುರು ಆಯಿತಂತೆ.

2019 ರಲ್ಲಿ ಉತ್ತರ ಪ್ರದೇಶ ಬಿಟ್ಟರೆ ಅತಿ ಹೆಚ್ಚು ಚುನಾವಣಾ ರಂಗು ಏರಿರುವುದು ಪಶ್ಚಿಮ ಬಂಗಾಳದಲ್ಲಿ. ತ್ರಿಪುರಾದ ‘ಚಲೋ ಪಲ್ಟಾಯ’ ಅಂದರೆ ‘ಬನ್ನಿ ಪರಿವರ್ತಿಸೋಣ’ ಘೋಷಣೆಯನ್ನು ದೀದಿ ರಾಜ್ಯದಲ್ಲಿ ಹಾಕಿಸುತ್ತಿರುವ ಮೋದಿ ಮತ್ತು ಅಮಿತ್‌ ಶಾಗೆ, ಯುಪಿಯಲ್ಲಿ ಕಮ್ಮಿ ಆಗುವ ಸೀಟು ಇಲ್ಲಿ ಬಂದರೆ ಸಾಕು ಎನ್ನುವ ಸ್ಥಿತಿಯಿದೆ.

ವೈರಲ್ ಚೆಕ್: ರಾಹುಲ್ ರ್ಯಾಲಿಯಲ್ಲಿ ಆ್ಯಂಬುಲೆನ್ಸ್ ಗೆ ದಾರಿ ಬಿಡದೇ ಮಗು ಸಾವು?

ಸ್ವಲ್ಪ ದಿನಗಳ ಹಿಂದೆ ಪತ್ರಕರ್ತರನ್ನು ಊಟಕ್ಕೆ ಕರೆದಿದ್ದ ಅಮಿತ್‌ ಶಾ, ‘ಬರೆದುಕೊಳ್ಳಿ, ಬಂಗಾಳದಲ್ಲಿ 23 ಸೀಟು ಗೆಲ್ಲುತ್ತೇವೆ’ ಎಂದಿದ್ದರು. ಆದರೆ ಖಾಸಗಿಯಾಗಿ ಬಿಜೆಪಿ ನಾಯಕರನ್ನು ಮಾತನಾಡಿಸಿದಾಗ 10ರಿಂದ 12 ಎನ್ನುತ್ತಾರೆ. ಕಳೆದ ಬಾರಿ 17 ಪ್ರತಿಶತ ಮತದೊಂದಿಗೆ 2 ಸೀಟು ಪಡೆದಿದ್ದ ಬಿಜೆಪಿ, 5 ವರ್ಷದಲ್ಲಿ ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ಸನ್ನು ಹಿಂದಿಕ್ಕಿ ತೃಣಮೂಲ ನಂತರದ ಸ್ಥಾನಕ್ಕೆ ಬಂದಿದೆ.

ಕಾಂಗ್ರೆಸ್‌, ಎಡರಂಗದ ಜಾಗಕ್ಕೆ ಬಿಜೆಪಿ

ಪಶ್ಚಿಮ ಬಂಗಾಳದ 2014ರ ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷಗಳು 29 ಪ್ರತಿಶತ ಮತ ಪಡೆದರೆ, ಕಾಂಗ್ರೆಸ್‌ ಪಡೆದದ್ದು 9.5 ಪ್ರತಿಶತ ಮತ. 44ರಲ್ಲಿ 36 ಸ್ಥಾನ ಪಡೆದಿದ್ದ ಮಮತಾಗೆ ಸಿಕ್ಕಿದ್ದು 38 ಪ್ರತಿಶತ. ಆದರೆ ಪಂಚಾಯತ್‌ ಚುನಾವಣೆಯಲ್ಲಿ ಕಮ್ಯುನಿಸ್ಟರು ತಮ್ಮ ಕೇಡರ್‌ ಮತ್ತು ಮತದಾರರನ್ನು ಕಳೆದುಕೊಂಡಿದ್ದು, ಅದೇ ಬಿಜೆಪಿಗೆ ಶಿಫ್ಟ್‌ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

ಇವತ್ತಿಗೂ ಬಂಗಾಳದಲ್ಲಿ ಸಂಘಟನೆ, ಟಿಕೆಟ್‌ ಹಂಚಿಕೆ, ತೋಳ್ಬಲ, ಸರ್ಕಾರಿ ಯಂತ್ರದ ಉಪಯೋಗ ಈ ವಿಚಾರದಲ್ಲಿ ತಕ್ಷಣಕ್ಕೆ ಮೋದಿ ಮತ್ತು ಶಾ ಅವರು ದೀದಿ ಹತ್ತಿರಕ್ಕೆ ಬರಲು ಸಾಧ್ಯವಿಲ್ಲ. ಆದರೆ ಲೆಫ್ಟ್‌ ಮತ್ತು ಕಾಂಗ್ರೆಸ್‌ನ ಆಲಸ್ಯದಿಂದಾಗಿ ಉದ್ಭವ ಆಗಿರುವ ನಿರ್ವಾತವನ್ನು ತುಂಬಿ ಮಮತಾರನ್ನು ನೇರವಾಗಿ ಎದುರು ಹಾಕಿಕೊಳ್ಳುವ ಶಕ್ತಿ ನಮಗೆ ಮಾತ್ರ ಇದೆ ಎಂದು ತೋರಿಸುವ ಪ್ರಯತ್ನ ಬಿಜೆಪಿಯದು. ಇದರಿಂದ ಈಗ 10 ಸೀಟು ಬಂದರೂ ಕೂಡ ಮುಂದಿನ ವಿಧಾನಸಭೆಯಲ್ಲಿ ಹೊಸತೊಂದು ರಾಜ್ಯಕ್ಕೆ ಪ್ರವೇಶ ಪಡೆಯುವ ದೂರಗಾಮಿ ಆಲೋಚನೆ ಬಿಜೆಪಿಗೆ ಇದ್ದಂತಿದೆ.

ಬಂಗಾಳದಲ್ಲಿ ಜಾತಿ ರಾಜಕೀಯ

ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಳದಲ್ಲಿ ಜಾತಿ ರಾಜಕೀಯದ ಪ್ರಭಾವ ಕಡಿಮೆ. ಬ್ರಿಟಿಷರ ಕಾಲದಿಂದ ಇರುವ ಹಿಂದೂ ಮೇಲ್ಜಾತಿಗಳ ಭದ್ರಲೋಕ ಯಾವುದೋ ಒಂದು ರೂಪದಲ್ಲಿ ಇವತ್ತಿಗೂ ಬಂಗಾಳದ ಸಾಮಾಜಿಕ ಆರ್ಥಿಕ ರಾಜಕೀಯ ಕ್ಷೇತ್ರವನ್ನು ಆಳುತ್ತಿದೆ. ಆದರೆ ಯಾವುದೋ ಒಂದು ಜಾತಿ ಈ ಪಕ್ಷದ ಪರ ಎಂಬ ಸ್ಥಿತಿ ಬಂಗಾಳದಲ್ಲಿ ತುಂಬಾ ಕಡಿಮೆ. ಆದರೆ ಈಗ ಬಿಜೆಪಿ ಬಾಂಗ್ಲಾ ಗಡಿಯಲ್ಲಿ ತಳವೂರಲು ಹಿಂದುಳಿದ ನಾಮ ಶೂದ್ರರನ್ನು ಓಲೈಸತೊಡಗಿದೆ. ಗಡಿಯಿಂದ ನುಸುಳಿ ಬಂದಿರುವ ಮುಸ್ಲಿಮರು ಮತ್ತು ನಾಮ ಶೂದ್ರರ ನಡುವೆ ಭೂಮಿ ಹಕ್ಕಿಗಾಗಿ ದಶಕಗಳಿಂದ ಪೈಪೋಟಿ ಇದೆ. ಆದರೆ ಒಂದು ನಾಮ ಶೂದ್ರರ ಬಣ ಮಮತಾ ಜೊತೆ ಇದ್ದರೆ, ಇನ್ನೊಂದು ಬಣ ಬಿಜೆಪಿ ಜೊತೆಗಿದೆ. ಈ ಸಮುದಾಯದ ಪ್ರಭಾವ ಗಡಿ ಭಾಗದ 8ರಿಂದ 9 ಕ್ಷೇತ್ರಗಳಲ್ಲಿದೆ.

ಚೌಕೀದಾರ್‌ ಮೋದಿ ಎಂಬ ಕಾಲರ್‌ ಟ್ಯೂನಿಂದ ಸಿಟ್ಟಾಗಿ ಫೋನ್‌ ಇಟ್ಟ ಮಮತಾ!

ದುರ್ಗಾ ಮೂರ್ತಿ ವಿಸರ್ಜನೆ ಗದ್ದಲ

ತೀರಾ ಜಾತಿ ರಾಜಕಾರಣ ಇಲ್ಲದೇ ಹೋದರೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರವೇಶದ ನಂತರ ಧರ್ಮ ಆಧಾರಿತ ಹಿಂದೂ, ಮುಸ್ಲಿಂ ಪಾಲಿಟಿಕ್ಸ್‌ ಶುರುವಾಗಿದೆ. 30 ಪ್ರತಿಶತ ಇರುವ ಮುಸ್ಲಿಮರು ಸ್ವಾಭಾವಿಕವಾಗಿ ಮಮತಾ ಜೊತೆಗೆ ಗಟ್ಟಿಯಾಗಿ ನಿಂತಿದ್ದಾರೆ. ಆದರೆ ಬಾಂಗ್ಲಾದಿಂದ ನುಸುಳಿ ಬಂದಿರುವ ಮುಸ್ಲಿಮರ ಸಮಸ್ಯೆ ಎತ್ತಿ ಬಿಜೆಪಿಯವರು ಹಿಂದೂ ಮತಗಳ ಧ್ರುವೀಕರಣಕ್ಕೆ ಪ್ರಯತ್ನ ನಡೆಸಿದ್ದಾರೆ.

2017ರಲ್ಲಿ ಮಮತಾ ಮುಸ್ಲಿಮರನ್ನು ಓಲೈಸಲು ದುರ್ಗಾ ಮೂರ್ತಿಗಳ ವಿಸರ್ಜನೆಯು ಮೊಹರಂ ಮುಗಿದ ಮೇಲೆ ನಡೆಯಲಿ ಎಂದು ಹೇಳಿದ್ದೇ ಬಿಜೆಪಿಗೆ ಕೋಲ್ಕತ್ತಾದಂಥ ಎಡಪಂಥೀಯರು ಹಾಗೂ ತೃಣಮೂಲ ಪ್ರಭಾವದ ನಗರದಲ್ಲೂ ಕಾಲು ಊರಲು ಅವಕಾಶ ನೀಡಿತ್ತು. ಮೋದಿ ಪ್ರಭಾವ ಮತ್ತು ನುಸುಳುಕೋರ ಮುಸ್ಲಿಮರ ವಿರುದ್ಧ ಹಿಂದೂ ಧ್ರುವೀಕರಣವೇ ಬಿಜೆಪಿಗೆ ಬಂಗಾಳದಲ್ಲಿ ದೊಡ್ಡ ಅಸ್ತ್ರ.

ಮಾವೋ ಬೆಂಬಲ ಯಾರಿಗೆ?

ಮಮತಾ ಬ್ಯಾನರ್ಜಿ ಬುದ್ಧದೇವ್‌ ಭಟ್ಟಾಚಾರ್ಯ ಸರ್ಕಾರವನ್ನು ಕಿತ್ತೊಗೆದಾಗ ಮಾವೋವಾದಿಗಳು ನೇರವಾಗಿಯೇ ಮಮತಾ ಜೊತೆ ನಿಂತಿದ್ದರು. ಆದರೆ ನಂತರದ ದಿನಗಳಲ್ಲಿ ಮಾವೋವಾದಿಗಳ ಜೊತೆ ಮಮತಾ ಸಂಬಂಧ ಪೂರ್ತಿ ಕೆಟ್ಟುಹೋಗಿದೆ. ಆಶ್ಚರ್ಯ ಎಂದರೆ, ಮಾವೋ ಪ್ರಭಾವ ಇರುವ ಆದಿವಾಸಿ ಜಂಗಲ… ಮಹಲ…ನಲ್ಲಿ ಬಿಜೆಪಿ ಒಳ್ಳೆಯ ಸ್ಥಿತಿಯಲ್ಲಿ ಕಾಣುತ್ತಿದೆ. ಮಾವೋವಾದಿ ಪ್ರಭಾವ ಜಾಸ್ತಿ ಇದ್ದ ಪುರುಲಿಯಾ, ಝರ್ಗಾಮ…, ಪಶ್ಚಿಮ ಮಿಡ್ನಾಪುರ ಮತ್ತು ಬಂಕುರಾಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಗಳು ಕಾಣುತ್ತಿವೆ.

‘ಚೌಕಿದಾರ್ ಚೋರ್ ಹೈ’ ಎಂದವರಿಗೆ ಮೋದಿ ಹೇಳಿದ ‘ಅವೆಂಜರ್ಸ್’ ಕತೆ!

ಮಮತಾ ‘ಹಾರಾಟಕ್ಕೆ’ ಬಿಜೆಪಿ ಬ್ರೇಕ್‌

ಪಶ್ಚಿಮ ಬಂಗಾಳದಲ್ಲಿ 7 ಹಂತದ ಚುನಾವಣೆ ಇರುವುದರಿಂದ ರಾಜ್ಯದ ಎಲ್ಲ ಖಾಸಗಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಿಜೆಪಿ ಮೊದಲೇ ಬುಕ್‌ ಮಾಡಿ ಇಟ್ಟಿತ್ತು. ಹೀಗಾಗಿ ಸ್ವತಃ ಮುಖ್ಯಮಂತ್ರಿ ಮಮತಾ ಅವರ ಹಾರಾಟಕ್ಕೆ ಕೂಡ ತೊಂದರೆ ಆಗಿತ್ತು. ಕೊನೆಗೆ ಆಂಧ್ರದಿಂದ ಚಂದ್ರಬಾಬು ಎರಡು ವಿಮಾನ, ಎರಡು ಹೆಲಿಕಾಪ್ಟರ್‌ಗಳನ್ನು ಕಳುಹಿಸಿಕೊಟ್ಟಮೇಲೆ ಮಮತಾ ದೀದಿ ಹಾರಾಟ ಶುರು ಆಯಿತಂತೆ. ಚುನಾವಣೆ ಎಂದರೆ ಹಾರಾಟವೂ ಒಂದು ಮುಖ್ಯ ಭಾಗವೇ!

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ಧಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ 

Follow Us:
Download App:
  • android
  • ios