ರಾಹುಲ್‌ ಗಾಂಧಿ ರಾರ‍ಯಲಿಗಾಗಿ ದೆಹಲಿ ಪೊಲೀಸರು ರಸ್ತೆ ತಡೆ ನೀಡಿದ್ದರಿಂದ ಆ್ಯಂಬುಲೆನ್ಸ್‌ ಹೋಗಲು ಸಾಧ್ಯವಾಗದೆ, ಅನಾರೋಗ್ಯಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿದ್ದ ಮಗುವೊಂದು ಸಾವನ್ನಪ್ಪಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಒಂದು ನಿಮಿಷ 36 ಸೆಕೆಂಡ್‌ಗಳಿರುವ ವಿಡಿಯೋದೊಂದಿಗೆ, ‘ರಾಹುಲ್‌ ಗಾಂಧಿ ರಾರ‍ಯಲಿಗಾಗಿ ದೆಹಲಿ ಪೊಲೀಸರು ಆ್ಯಂಬುಲೆನ್ಸನ್ನು ತಡೆಹಿಡಿದಿದ್ದರು. ಈ ಆ್ಯಂಬುಲೆನ್ಸ್‌ ಒಳಗಿದ್ದ ಮಗುವೊಂದರ ಸ್ಥಿತಿ ಗಂಭೀರವಾಗಿತ್ತು. ಸದ್ಯ ಆ ಮಗು ಈ ಲೋಕ ತ್ಯಜಿಸಿದೆ’ ಎಂಬ ಒಕ್ಕಣೆ ಬರೆದು ಶೇರ್‌ ಮಾಡಲಾಗಿದೆ. ಇದೀಗ ಫೇಸ್‌ಬುಕ್‌ನಲ್ಲಿ ಭಾರಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಆ್ಯಂಬುಲೆನ್ಸ್‌ಗೆ ಪೊಲೀಸರು ರಸ್ತೆ ಮಾಡಿಕೊಡದೆ ಬ್ಯಾರಿಕೇಡ್‌ ಇಟ್ಟದೃಶ್ಯವಿದೆ.

ಆದರೆ ಈ ವಿಡಿಯೋ ರಾಹುಲ್‌ ಗಾಂಧಿ ರಾರ‍ಯಲಿಯದ್ದಲ್ಲ. ಮೂಲ ವಿಡಿಯೋವು 3 ನಿಮಿಷವಿದೆ. ಹಿಂದುಸ್ತಾನ್‌ ಟೈಮ್ಸ್‌ 2017 ಏಪ್ರಿಲ್‌ 5ರಂದು ಈ ಘಟನೆಗೆ ಸಂಬಂಧಿಸಿದಂತೆ ವರದಿ ಮಾಡಿದೆ. ಅದರಲ್ಲಿ, ಇಂದಿರಾ ಗಾಂಧಿ ಇಂಡೋರ್‌ ಸ್ಟೇಡಿಯಂ ಬಳಿ ಘಟನೆ ನಡೆದಿದ್ದು, ಮಲೇಷ್ಯಿಯಾ ಮುಖ್ಯಸ್ಥರು ಈ ದಾರಿ ಮೂಲಕವೇ ಸಾಗಬೇಕಾಗಿದ್ದರಿಂದ ಆ್ಯಂಬುಲೆನ್ಸ್‌ ಹೋಗಲು ಅವಕಾಶ ಮಾಡಿಕೊಡದೆ ಮಗುವೊಮದು ಮೃತಪಟ್ಟಿದ್ದಾಗಿ ಹೇಳಿದೆ.

ಅದರಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ಹೇಳಿಕೆಯೂ ಇದ್ದು ಅವರು, ‘ಆ್ಯಂಬುಲೆನ್ಸ್‌ ಹಲವಾರು ಕಾರುಗಳ ಮಧ್ಯೆ ಸಿಲುಕಿಕೊಂಡಿತ್ತು. ಅದನ್ನು ಮುಂದೆ ತರಲು ಹರಸಾಹಸ ಪಡಬೇಕಾಯಿತು. ಅನಂತರದಲ್ಲಿ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡಲಾಯಿತು’ ಎಂದು ಹೇಳಿದ್ದಾರೆ.

- ವೈರಲ್ ಚೆಕ್