ಕೆಪಿಎಸ್ ಶಾಲೆಗಳ ಸ್ಥಾಪನೆಯಿಂದಾಗಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಅಪಾಯವಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ, ಶಿಕ್ಷಕರ ಕೊರತೆ, ಮತ್ತು ಅವೈಜ್ಞಾನಿಕ ಮೌಲ್ಯಮಾಪನದ ಬಗ್ಗೆಯೂ ಅವರು ತೀವ್ರ ಅಸಮಾಧಾನ 

ಹಾವೇರಿ: ರಾಜ್ಯದಲ್ಲಿ ಈಗ ಕೆಪಿಎಸ್ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ. ಹೀಗಾದರೆ ಹಳ್ಳಿಗಳಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ಬರುತ್ತದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಜತೆಗೆ ತ್ರಿಭಾಷಾ ಸೂತ್ರವನ್ನೇ ಸರಿಯಾಗಿ ಅನುಷ್ಠಾನ ಮಾಡಬೇಕು. ಹಿಂದಿ ಭಾಷೆ ಕಲಿಯದಿದ್ದರೆ ಬೇರೆ ರಾಜ್ಯಕ್ಕೆ ಹೋದಾಗ ಸಮಸ್ಯೆ ಆಗಲಿದೆ. ಪ್ರತಿ ತರಗತಿಗೆ ಒಬ್ಬರು ಶಿಕ್ಷಕರು ಇರುವಂತೆ ನೋಡಿಕೊಳ್ಳಬೇಕು. ಪ್ರತಿ ಹಳ್ಳಿಗಳಲ್ಲಿ ಕನಿಷ್ಠ 5ನೇ ತರಗತಿವರೆಗಾದರೂ ಸರ್ಕಾರಿ ಕನ್ನಡ ಶಾಲೆಗಳು ಇರುವಂತೆ ಸರ್ಕಾರ ನೋಡಿಕೊಳ್ಳಬೇಕು. ಸರ್ಕಾರಿ ಶಾಲೆ ಮುಚ್ಚಿದರೆ ಸ್ವಾತಂತ್ರ್ಯ, ಗಣರಾಜ್ಯೋತ್ಸವ ದಿನಾಚರಣೆ ಮಾಡುವವರ‍್ಯಾರು ಎಂದಿದ್ದಾರೆ.

ಈ ಹಿಂದೆ ಶಾಸಕರ ಮಾದರಿ ಶಾಲೆ ಮಾಡಿದ್ದರು. ಈಗ ಅವುಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಅವಲೋಕನ ಮಾಡಬೇಕು. ಕೇರಳದಲ್ಲಿ ಒಂದು ತರಗತಿಗೆ ಒಬ್ಬರು ಶಿಕ್ಷಕರಿದ್ದಾರೆ. ಆದರೆ, ಇಲ್ಲಿ ಶಿಕ್ಷಕರೇ ಇಲ್ಲ. ಹೀಗಾಗಿ, ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಿಕ್ಷಣ ಸಚಿವರಿಗೆ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಬೇಕೆಂಬ ಹುಮ್ಮಸ್ಸಿದೆ. ಆದರೆ, ಅಧಿಕಾರಿಗಳು ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಅತಿ ಹೆಚ್ಚು ಭ್ರಷ್ಟಾಚಾರ:

ಶಿಕ್ಷಣ ಇಲಾಖೆಯಲ್ಲಿ ಇರುವಷ್ಟು ಭ್ರಷ್ಟಾಚಾರ ಯಾವ ಇಲಾಖೆಯಲ್ಲೂ ಇಲ್ಲ. ಈ ಇಲಾಖೆಯಲ್ಲಿ ಅನೇಕ ಅಯೋಗ್ಯ ಅಧಿಕಾರಿಗಳು ಸೇರಿದ್ದಾರೆ. ಕಣ್ಮುಂದೆ ಅನಧಿಕೃತ ಶಾಲೆಗಳು ನಡೆಯುತ್ತಿದ್ದರೂ ಯಾವ ಕ್ರಮ ಕೈಗೊಳ್ಳುತ್ತಿಲ್ಲ. ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದೆ. 12 ಅಂಕ ಪಡೆದ ಮಕ್ಕಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಂಟರ್ನಲ್‌ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಸರಿಯಾಗಿ ಮೌಲ್ಯಮಾಪನ ಮಾಡಿದರೆ ಶೇ.55ರಷ್ಟೂ ಫಲಿತಾಂಶ ಬರುವುದಿಲ್ಲ ಎಂದು ಕಿಡಿಕಾರಿದರು.