ತಮ್ಮೂರಿನ ಸರ್ಕಾರಿ ಶಾಲೆಯನ್ನು ಜಾವಗಲ್ ಕೆಪಿಎಸ್ ಶಾಲೆಯೊಂದಿಗೆ ವಿಲೀನಗೊಳಿಸುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಸಾರಿಗೆ ವ್ಯವಸ್ಥೆಯ ಕೊರತೆ ಮತ್ತು ಮಕ್ಕಳ ಸುರಕ್ಷತೆಯ ಕಾರಣ ನೀಡಿ, "ನಮ್ಮೂರ ಶಾಲೆ ನಮ್ಮೂರಲ್ಲೇ ಉಳಿಯಲಿ" ಎಂದು ಆಗ್ರಹಿಸಿ, ಶಾಲೆಯನ್ನು ಮುಚ್ಚುವ ಬದಲು ಮೂಲಸೌಕರ್ಯ ಒದಗಿಸಲು ಸರ್ಕಾರವನ್ನು ಒತ್ತಾಯಿಸಿದರು.

ಹಾಸನ: ಕೆಪಿಎಸ್-ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೆರೆಕೋಡಿಹಳ್ಳಿ-ಧನಂಜಯಪುರ ಗ್ರಾಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಬೃಹತ್ ಪ್ರತಿಭಟನಾ ಸಭೆ ನಡೆಸಿದರು.

ಜಾವಗಲ್ ಕೆಪಿಎಸ್ ಶಾಲೆಗೆ ಧನಂಜಯಪುರ ಸರ್ಕಾರಿ ಶಾಲೆಯನ್ನು ವಿಲೀನಗೊಳಿಸುವ ಪ್ರಕ್ರಿಯೆಯನ್ನು ತಕ್ಷಣ ಕೈಬಿಡಬೇಕು. “ನಮ್ಮೂರ ಶಾಲೆ ನಮ್ಮೂರಲ್ಲೇ ಉಳಿಯಲಿ” ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದರು.

ಗ್ರಾಮೀಣ ಶಾಲೆಗಳ ರಕ್ಷಣೆಗೆ ಹೋರಾಟ

ಪ್ರತಿಭಟನಾ ಸಭೆಯನ್ನು ಎ.ಐ.ಡಿ.ಎಸ್.ಓ. ಜಿಲ್ಲಾಧ್ಯಕ್ಷೆ ಚೈತ್ರ ಉದ್ದೇಶಿಸಿ ಮಾತನಾಡಿ, ಕರ್ನಾಟಕದಾದ್ಯಂತ ಕೆಪಿಎಸ್-ಮ್ಯಾಗ್ನೆಟ್ ಯೋಜನೆ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಶಿಕ್ಷಣವನ್ನು ಜನರಿಂದ ದೂರ ಮಾಡುವ ಕೆಲಸ ನಡೆಯುತ್ತಿದೆ ಎಂದರು.

ಕಳೆದ ಐದು ತಿಂಗಳುಗಳಿಂದ ಎಐಡಿಎಸ್‌ಓ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳನ್ನು ರಚಿಸಿ ಗ್ರಾಮೀಣ ಶಾಲೆಗಳ ರಕ್ಷಣೆಗೆ ಹೋರಾಟ ನಡೆಸುತ್ತಿದ್ದೇವೆ. ಈಗಾಗಲೇ ಅರಸೀಕೆರೆ ತಾಲೂಕಿನ ದೊಡ್ಡಮೇಟಿ-ಕುರ್ಕೆ ಭಾಗದ ಪೋಷಕರು ಕೂಡ ‘ನಮಗೆ ಕೆಪಿಎಸ್ ಶಾಲೆ ಬೇಡ, ನಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ಮನವಿ ನೀಡಿದ್ದಾರೆ. ಆದರೂ ಸರ್ಕಾರ ಜನರ ಅಭಿಪ್ರಾಯವನ್ನು ಪರಿಗಣಿಸದೇ ಶಾಲೆ ಮುಚ್ಚುವ ಪಟ್ಟಿಯನ್ನು ಪ್ರಕಟಿಸಿರುವುದು ಖಂಡನೀಯ ಎಂದರು. 

ಶಾಲೆಯನ್ನು ಉಳಿಸಿಕೊಳ್ಳಲು ಕರೆ

ಸರ್ಕಾರದ ಈ ಕ್ರಮವನ್ನು ಜನವಿರೋಧಿ ಮತ್ತು ನಿರಂಕುಶ ನೀತಿ ಎಂದು ಟೀಕಿಸಿದ ಅವರು, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಸಮೀಪದಲ್ಲಿರುವ ಸರ್ಕಾರಿ ಶಾಲೆಯೇ ಶಿಕ್ಷಣದ ಆಶಾಕಿರಣ. ಅದನ್ನೇ ಕಿತ್ತುಕೊಂಡರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯ ಇದೆ. ಹೀಗಾಗಿ ಕೊನೆಯವರೆಗೂ ಹೋರಾಟ ನಡೆಸಿ ನಮ್ಮೂರಿನ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಗ್ರಾಮಸ್ಥರಾದ ಹಿತೇಂದ್ರ ಮಾತನಾಡಿ, ನಮ್ಮ ಊರಿಗೆ ಬೆಳಿಗ್ಗೆ ಮತ್ತು ಸಂಜೆ ಒಂದೊಂದು ಬಸ್ ಮಾತ್ರ ಬರುತ್ತದೆ. ಜಾವಗಲ್‌ಗೆ ಹೋಗಬೇಕಾದರೆ ಕೆರೆ ಏರಿ ಮೇಲಿನಿಂದ ಹೋಗಬೇಕು. ಮಳೆಗಾಲದಲ್ಲಿ ಅದು ಇನ್ನಷ್ಟು ಅಪಾಯಕರವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಚಿಕ್ಕಮಕ್ಕಳನ್ನು ಪ್ರತಿದಿನ ದೂರದ ಶಾಲೆಗೆ ಹೇಗೆ ಕಳುಹಿಸಬೇಕು ಎಂದು ಪ್ರಶ್ನಿಸಿದರು. ಈಗಾಗಲೇ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೇ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ವರ್ಷಗಳಿಂದ ಮೂಲಭೂತ ಸಾರಿಗೆ ಸೌಲಭ್ಯ ಕಲ್ಪಿಸದ ಸರ್ಕಾರ ಈಗ ಮಕ್ಕಳನ್ನು ದೂರದ ಶಾಲೆಗೆ ಕಳುಹಿಸುತ್ತೇವೆ ಎಂದು ಹೇಳುವುದನ್ನು ನಾವು ಹೇಗೆ ನಂಬಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶಾಲೆ-ಕಾಲೇಜಿನಲ್ಲಿ ಹಿಜಾಬ್ ನಿಷೇಧ ರದ್ದು, ಕೇಸರಿ ಶಾಲು ಧರಿಸುವಂತಿಲ್ಲ, ಶಿಕ್ಷಣ ಸಚಿವರ ಎಚ್ಚರಿಕೆ ಏನು? 

ನಮ್ಮೂರಿನ ಶಾಲೆಯನ್ನು ಮುಚ್ಚುವ ಬದಲು ಸರ್ಕಾರ ಶಾಲೆಗೆ ಅಗತ್ಯ ಶಿಕ್ಷಕರು, ಕಟ್ಟಡ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಬೇಕು. ನಮ್ಮ ಮಕ್ಕಳ ಭವಿಷ್ಯ ಉಳಿಯಬೇಕಾದರೆ ಶಾಲೆ ನಮ್ಮೂರಲ್ಲೇ ಇರಬೇಕು. ಶಾಲೆ ಮುಚ್ಚುವುದು ಎಂದರೆ ಗ್ರಾಮೀಣ ಮಕ್ಕಳ ಶಿಕ್ಷಣದ ಮೇಲೆ ಬೀಗ ಹಾಕಿದಂತಾಗುತ್ತದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ ಮುಚ್ಚಿದ ಪರಿಣಾಮ ಶಾಲೆಬಿಟ್ಟು ಹೋಗುವ ಮಕ್ಕಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು. ವಿಶೇಷವಾಗಿ ಪ್ರಾಥಮಿಕ ಹಂತದ ಮಕ್ಕಳಿಗೆ ದೂರದ ಪ್ರಯಾಣ ಕಷ್ಟಕರವಾಗಿದ್ದು, ಬಾಲಕಿಯರ ಶಿಕ್ಷಣಕ್ಕೂ ಧಕ್ಕೆಯಾಗಬಹುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರು ನಮ್ಮೂರ ಶಾಲೆ ಉಳಿಸಿ ಗ್ರಾಮೀಣ ಶಿಕ್ಷಣ ಉಳಿಸಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಂಪಡಿ ಎಂಬ ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಕಾರ್ಯದರ್ಶಿ ಸುಷ್ಮಾ, ಗ್ರಾಮ ಪಂಚಾಯಿತಿ ಸದಸ್ಯರಾದ ಕಾವ್ಯ ಹಿತೇಂದ್ರ, ಎಸ್‌ಡಿಎಂ ಅಧ್ಯಕ್ಷ ನರಸಿಂಹ ಮೂರ್ತಿ, ಗ್ರಾಮಸ್ಥರಾದ ಗಿರೀಶ್, ಚೇತನ್, ಶರತ್, ತಿಮ್ಮಪ್ಪ, ಲಕ್ಷ್ಮಣ್, ಮಲ್ಲೇಶ್, ಬೀರಣ್ಣ, ದೇವರಾಜು, ವಿಶ್ವನಾಥ್, ಸುನೀಲ್, ಹರೀಶ್, ಗಂಗಾಧರ್‌ ಇತರರು ಭಾಗವಹಿಸಿದ್ದರು.

ಇದನ್ನೂ ಓದಿ : ಬಹಳ ಒಳ್ಳೇವ್ರು ಕುಂದಾಪುರದ ಈ ಮಿಸ್ಸು; ಹೊಡೆಯಲ್ಲ, ಶಿಕ್ಷೆ ಕೊಡಲ್ಲ, ರಜೆ ಹಾಕಲ್ಲ: ಎಲ್ಲದಕ್ಕೂ ಎಸ್ಸೆಸ್ಸು