ಡಾ. ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯವು ಕರಾವಳಿ ಜಿಲ್ಲೆಗಳಲ್ಲಿ ನಡೆಸಿದ ಸಂಗೀತ ಮತ್ತು ನೃತ್ಯ ಪರೀಕ್ಷೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಒಟ್ಟು 3,398 ವಿದ್ಯಾರ್ಥಿಗಳು ಹಾಜರಾಗಿದ್ದು, ಇದು ಕಳೆದ ಬಾರಿಗಿಂತ ದ್ವಿಗುಣವಾಗಿದೆ.

ಮಂಗಳೂರು: ಮೈಸೂರಿನ ಡಾ.ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯ ಸಂಘಟಿಸಿದ ಸಂಗೀತ, ನೃತ್ಯ, ತಾಳವಾದ್ಯ ವಿಶೇಷ ಪರೀಕ್ಷೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಂಗಳವಾರ ಮುಕ್ತಾಯಗೊಂಡಿದೆ. ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 3,398 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಕಳೆದ ಬಾರಿಗಿಂತ ಎರಡುಪಟ್ಟು ಹೆಚ್ಚು ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

18,400 ಮಂದಿ ಪರೀಕ್ಷೆಗೆ ನೋಂದಾಣಿ

ಈ ಬಾರಿ ರಾಜ್ಯದಲ್ಲಿ 32 ಕೇಂದ್ರಗಳಲ್ಲಿ ಒಟ್ಟು 18,400 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಮೊದಲ ಹಂತದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮೇ 10 ರಿಂದ 19ರ ವರೆಗೆ ಸಂಗೀತ, ಭರತನಾಟ್ಯ, ಕಥಕ್‌ ಹಾಗೂ ಕೂಚುಪುಡಿ ನೃತ್ಯಗಳ ಜೂನಿಯರ್‌, ಸೀನಿಯರ್‌, ವಿದ್ವತ್ ಪೂರ್ವ ಹಾಗೂ ವಿದ್ವತ್‌ ಅಂತಿಮ ಪರೀಕ್ಷೆಗಳು ನಡೆದಿತ್ತು. ದ.ಕ. ಜಿಲ್ಲೆಯ ಪುತ್ತೂರಲ್ಲಿ 933, ಮಂಗಳೂರಲ್ಲಿ 1,318, ಉಡುಪಿಯಲ್ಲಿ 939 ಹಾಗೂ ಉತ್ತರ ಕನ್ನಡದ ಹೊನ್ನಾವರದಲ್ಲಿ 208 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಉತ್ತರ ಕರ್ನಾಟಕದಲ್ಲಿ ಹುಬ್ಬ‍ಳ್ಳಿ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಈ ಪರೀಕ್ಷೆ ಮುಕ್ತಾಯಗೊಂಡಿದೆ. ಮೇ 22 ರಿಂದ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಗಳಲ್ಲಿ ಪರೀಕ್ಷೆ ನಡೆಯಲಿದ್ದು, ಜೂ.2ರಂದು ಪರೀಕ್ಷೆಗಳು ಕೊನೆಗೊಳ್ಳಲಿವೆ.

ತ್ವರಿತ ಫಲಿತಾಂಶಕ್ಕೆ ಕ್ರಮ

ಪರೀಕ್ಷೆಗಳು ಕರಾವಳಿ ಜಿಲ್ಲೆಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಜೂ.30ರಂದು ಕೊನೆ ಪರೀಕ್ಷೆಗಳು ಮುಕ್ತಾಯಗೊಂಡ ಬಳಿಕ ಮೌಲ್ಯಮಾಪನ ಕಾರ್ಯ ನಡೆಯಲಿದ್ದು, ತ್ವರಿತವಾಗಿ ಫಲಿತಾಂಶ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು. ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೆ ಹಿಂದಿನಂತೆಯೇ ವಿಶ್ವವಿದ್ಯಾಲಯದ ಅಂಕಪಟ್ಟಿ ಲಭ್ಯವಾಗಲಿದೆ ಎಂದು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ್‌ ತಿಳಿಸಿದ್ದಾರೆ.