ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಕ್ಕೆ ರುಪ್ಸಾ ಸ್ವಾಗತ: ಶಾಲೆ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರಿನಲ್ಲೇ ನೂರಾರು ಸಿಬಿಎಸ್ಇ ಹಾಗೂ ಐಸಿಎಸ್ಇ ಹೆಸರಿನಲ್ಲಿ ಹಾಗೂ ಯಾವುದೇ ಅನುಮತಿ ಇಲ್ಲದೆ ಅಂತಾರಾಷ್ಟ್ರೀಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಖಾಸಗಿ ಶಾಲೆಗಳು ಬಹಿರಂಗವಾಗಿ ಶಾಲೆ ನಡೆಸುತ್ತಿವೆ.
(ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು)
ಬೆಂಗಳೂರು (ಫೆಬ್ರವರಿ 15, 2023): ರಾಜ್ಯದಲ್ಲಿ ಸಾವಿರಾರು ಅನಧಿಕೃತ ಶಾಲೆಗಳಿದ್ದು, ಈ ಬಗ್ಗೆ ಪಟ್ಟಿ ಮಾಡಿರುವುದಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಸ್ವಾಗತಿಸಿದ್ದಾರೆ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಸಾರ್ವಜನಿಕ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪಟ್ಟಿ ಮಾಡಿ ಪ್ರಕಟ ಮಾಡಿರುವುದನ್ನ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಹೌದು, ರಾಜ್ಯದಲ್ಲಿ ಸಾವಿರಾರು ಅನಧಿಕೃತ ಶಾಲೆಗಳು ನಡೆಯಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸುವಂತೆ ಕೋರಿ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ 1,316 ಅನಧಿಕೃತ ಶಾಲೆಗಳು ಇವೆ ಎಂದು ಶಿಕ್ಷಣ ಇಲಾಖೆ ಗುರುತಿಸಿದೆ.
ಇದನ್ನು ಓದಿ: CBSE ಶಾಲೆ ಕುರಿತು ಸುಳ್ಳು ಆರೋಪ: ನನ್ನ ಬಂಧನವಾಗಿಲ್ಲ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ಪಷ್ಟನೆ
ಆದ್ರೆ ಇಲಾಖೆಯಲ್ಲಿನ ಭ್ರಷ್ಟ ಅಧಿಕಾರಿಗಳ ಕುರಿತು ದಾಖಲೆ ಸಮೇತ ಮಾನ್ಯ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೆ. ನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಅನಧಿಕೃತ ಶಾಲೆಗಳನ್ನು ಗುರುತಿಸಿರುವುದನ್ನು ರುಪ್ಸಾ ಕರ್ನಾಟಕ ಸ್ವಾಗತಿಸುತ್ತದೆ.
ಆದರೆ ಕಳೆದ ಹತ್ತಾರು ವರ್ಷಗಳಿಂದ ಇಂತಹ ಶಾಲೆಗಳು ಬಹಿರಂಗವಾಗಿ ಪೋಷಕರು ಮತ್ತು ಮಕ್ಕಳಿಗೆ ಮೋಸ ಮಾಡುತ್ತಿದ್ದರು. ಅಂದಿನ ಹಾಗೂ ಈಗ ಜವಾಬ್ದಾರಿಯಲ್ಲಿರುವ ಅಧಿಕಾರಿಗಳು ಈ ಅಪರಾಧದ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ. ಈ ಕುರಿತು ತನಿಖೆಗೆ ಒಳಪಡಿಸಿಕೊಳ್ಳಬೇಕಾಗುತ್ತದೆ. ಹಾಗೂ ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ತಕ್ಷಣ ತೆಗೆದುಕೊಳ್ಳಬೇಕೆಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Education: ಬೆಂಗಳೂರು ನಗರದಲ್ಲಿವೆ 51 ಅನಧಿಕೃತ ಖಾಸಗಿ ಶಾಲೆಗಳು!
ಆಲ್ಲದೆ ಮಾಧ್ಯಮಗಳಲ್ಲಿ ಬಂದಿರುವ ಅನಧಿಕೃತ ಶಾಲೆಗಳ ಸಂಖ್ಯೆಯು ಅತ್ಯಂತ ಕಡಿಮೆ ಇದ್ದು, ಬೆಂಗಳೂರಿನಲ್ಲೇ ನೂರಾರು ಸಿಬಿಎಸ್ಇ ಹಾಗೂ ಐಸಿಎಸ್ಇ ಹೆಸರಿನಲ್ಲಿ ಹಾಗೂ ಯಾವುದೇ ಅನುಮತಿ ಇಲ್ಲದೆ ಅಂತಾರಾಷ್ಟ್ರೀಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಖಾಸಗಿ ಶಾಲೆಗಳು ಬಹಿರಂಗವಾಗಿ ಶಾಲೆ ನಡೆಸುತ್ತಿವೆ.
ಇನ್ನು, ಇಂತಹ ಖಾಸಗಿ ಶಾಲೆಗಳು ಲಕ್ಷಾಂತರ ಹಣವನ್ನು ಶುಲ್ಕದ ರೂಪದಲ್ಲಿ ಪಡೆಯುತ್ತಿವೆ. ಅವುಗಳ ಮಾಲೀಕರು ಈಗಿರುವ ಮಂತ್ರಿಗಳು ಹಾಗೂ ಶಾಸಕರು ಇದ್ದಾರೆ. ಅಂತಹ ಶಾಲೆಗಳ ಮೇಲೆ ಯಾವುದೇ ಕ್ರಮವನ್ನ ಜರುಗಿಸದೆ ಇರುವುದು ದುರಾದೃಷ್ಟಕರ ಎಂದೂ ಪತ್ರದಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ನಿಯಮ ಗಾಳಿಗೆ ತೂರುವ ಅನಧಿಕೃತ ಶಾಲೆಗಳಿಗೆ ಕಡಿವಾಣ..!
ತಕ್ಷಣ ಇಂತಹ ಶಾಲೆಗಳ ಮೇಲೆ ಕಾನೂನು ಕ್ರಮ ಜರುಗಿಸದೆ ಇದ್ದರೆ, ಅಕ್ಷಮ್ಯ ಅಪರಾಧವಾಗುತ್ತದೆ. ಈ ಶಾಲೆಗಳು ಈ ನೆಲದ ಕಾನೂನನ್ನು ಉಲ್ಲಂಘಿಸುವುದಲ್ಲದೆ, ಅಮಾಯಕ ಪೋಷಕರನ್ನು ಹಾಗೂ ಮಕ್ಕಳನ್ನು ವಂಚಿಸುತ್ತಾರೆ. ಆದ್ದರಿಂದ ದಯಮಾಡಿ ಅಂತಹ ಶಾಲೆಗಳ ಮೇಲೆ ಹಾಗೂ ಕಾರಣರಾದ ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ಜರುಗಿಸಬೇಕೆಂದು ಪತ್ರದ ಮೂಲಕ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಒತ್ತಾಯಿಸಿದ್ದಾರೆ.